Advertisement

ಸುರಕ್ಷಾ ಕೆಲಸಗಳಿಗೆ ಆದ್ಯತೆ ನೀಡುತ್ತಿದೆ ರೈಲ್ವೇ

11:35 AM Apr 04, 2020 | Sriram |

ಉಡುಪಿ: ಕೋವಿಡ್ 19 ಹಿನ್ನೆಲೆಯಲ್ಲಿ ರೈಲ್ವೇ ತನ್ನ ಸೇವೆಯನ್ನು ಎ. 14ರ ವರೆಗೆ ಸ್ಥಗಿತಗೊಳಿಸಿದೆ. ಈ ಸಂದರ್ಭವನ್ನು ರೈಲ್ವೇ ಸುರಕ್ಷತೆಯ ಕುರಿತು ಹೆಚ್ಚಿನ ನಿಗಾ ವಹಿಸಲು ಬಳಸಿಕೊಂಡಿದೆ. ಈಗ ಎಲ್ಲೆಡೆ ಆ ನಿಟ್ಟಿನಲ್ಲಿ ಕೆಲಸ ಕಾರ್ಯ ನಡೆಯುತ್ತಿದೆ.

Advertisement

ದೋಷ ಪರಿಶೀಲನೆ
ಗೂಡ್ಸ್‌ ರೈಲುಗಳ ಓಡಾಟವಿರುವುದರಿಂದ ರೈಲು ಹಳಿಗಳ ಮೇಲೆ ಕೆಲಸ ಮಾಡುವ ಗ್ಯಾಂಗ್‌ಮೆನ್‌ಗಳು ಹಳಿಗಳ ಕ್ಲಿಪ್ಪಿಂಗ್‌ ಬಿಗಿಗೊಳಿಸುವ, ಹಳಿಗಳಲ್ಲಿ ದೋಷ ಉಂಟಾದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಮುಂದಿನ ಮಳೆಗಾಲದ ಅವಧಿಯಲ್ಲಿ ಹಳಿ ಮೇಲೆ ಮಣ್ಣು ಬೀಳುವ ಸಾಧ್ಯತೆ ಇದೆಯೇ, ಮರ ಬೀಳುವ ಸಾಧ್ಯತೆ ಇದೆಯೇ ಎಂಬ ವಿಷಯಗಳ ಕುರಿತೂ ಗಮನ ನೀಡುತ್ತಿದ್ದಾರೆ.  ಈ ವಿಭಾಗದ ಕಾರ್ಮಿಕರು ಪಾಳಿಯಲ್ಲಿ ಈ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಹಳಿಗಳ ಮೇಲೆ ಕೆಲಸ ನಿರ್ವಹಿಸುವಾಗಲೂ ಅಂತರ ಕಾಯ್ದುಕೊಂಡಿರುತ್ತಾರೆ ಎನ್ನುತ್ತಾರೆ ರೈಲ್ವೇ ವಿಭಾಗದ ಅಧಿಕಾರಿಗಳು.

ರೈಲುಗಳ ಸಾಮಾನ್ಯ ಓಡಾಟದ ಸಂದರ್ಭ ಗಮನ ನೀಡಲಾಗದ ಅಂಶಗಳ ಕುರಿತು ಈಗ ಗಮನ ನೀಡುತ್ತಿದ್ದಾರೆ. ಆ ಕುರಿತು ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡುವ ಕೆಲಸವೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಲ್ದಾಣದಲ್ಲಿ ಅಗತ್ಯ ಸಿಬಂದಿ ಕಾರ್ಯನಿರ್ವಹಣೆ ಪ್ಯಾಸೆಂಜರ್‌ ರೈಲುಗಳು ರದ್ದು ಗೊಂಡಿರುವುದರಿಂದ ಪ್ರಸ್ತುತ ಗೂಡ್ಸ್‌ ರೈಲುಗಳ ಓಡಾಟಕ್ಕೆ ಮಾತ್ರವೇ ಅವಕಾಶವಿದೆ. ಇದುವರೆಗೆ ತೀರಾ ಕಡಿಮೆ ಸಂಖ್ಯೆಯ ಗೂಡ್ಸ್‌ ರೈಲುಗಳು ಕೊಂಕಣ ರೈಲು ಮಾರ್ಗಗಳಲ್ಲಿ ಓಡಾಡುತ್ತಿವೆ. ಗೂಡ್ಸ್‌ ರೈಲು ಸಂಚಾರಕ್ಕೆ ಸಂಬಂಧಿಸಿ ರೈಲು ವಿಭಾಗದ ಅಗತ್ಯ ಸಿಬಂದಿ ಮಾತ್ರ ಕರ್ತವ್ಯದಲ್ಲಿದ್ದಾರೆ. ಸ್ಟೇಶನ್‌ ಮಾಸ್ಟರ್‌ ಹಾಗೂ ಪಾಯಿಂಟ್‌ಮೆನ್‌ ಕಾರ್ಮಿಕರು ಶುಕ್ರವಾರ ನಿತ್ಯದ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂತು.

ಓಡಾಟದ ಪ್ರಮಾಣ

ಇಳಿಮುಖ
ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದಿಂದ ಯಾವುದೇ ಸರಕು ಹೊತ್ತ ರೈಲುಗಳು ಹೊರಡುವುದಿಲ್ಲ. ಎಂಆರ್‌ಪಿಎಲ್‌ನಿಂದ ಕೆಲ ಸರಕು ಹೊತ್ತ ರೈಲುಗಳ ಓಡಾಟ ನಡೆಸುತ್ತವೆ. ಆದರೆ ಈಗ ಕೋವಿಡ್ 19 ವೈರಸ್‌ ಹಾವಳಿಯಿಂದ ಕಂಪೆನಿಗಳು ಕೆಲಸ ಸ್ಥಗಿತಗೊಳಿಸಿದ್ದರಿಂದ, ವ್ಯಾಪಾರ ವಹಿವಾಟು ಸ್ತಬ್ಧವಾಗಿದೆ. ಗೂಡ್ಸ್‌ ರೈಲುಗಳ ಓಡಾಟವು  ಇಳಿಕೆಯಾಗಿದೆ. ಸರಕುಗಳ ಪ್ರಮಾಣ ಕಡಿಮೆ ಆಗಿರುವುದರಿಂದ ಸೀಮಿತ ಗೂಡ್ಸ್‌ ರೈಲುಗಳು ಮಾತ್ರ ಈಗ ಓಡಾಟ ನಡೆಸುತ್ತಿವೆ ಎಂದು ರೈಲ್ವೇ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

Advertisement

ಆರ್‌ಎಂವಿ ನಿಗಾ
ಪ್ರಸ್ತುತ ರೈಲುಗಳ ಓಡಾಟ ತೀರಾ ಕಡಿಮೆ ಇರುವುದರಿಂದ ಆರ್‌ಎಂವಿ (ರೈಲ್ವೇ ಮೈಂಟೆನೆನ್ಸ್‌ ವ್ಯಾನ್‌) ಮೂಲಕ ಇಡೀ ಕೊಂಕಣ ರೈಲು ಮಾರ್ಗಗಳ ಸುರಕ್ಷೆಯ ಪರಿಶೀಲನೆ ನಡೆಯುತ್ತಿದೆ. ಕಾರವಾರ, ಭಟ್ಕಳ ಮತ್ತು ಉಡುಪಿಯಲ್ಲಿ ಈ ವ್ಯಾನ್‌ ಇದ್ದು, ದಿನಕ್ಕೆ ಎರಡು ಬಾರಿ ಸಂಚರಿಸಿ ಹಳಿ ನಿರ್ವಹಣಾ ಕಾರ್ಯ ನಡೆಸುತ್ತಿದೆ. ಇದರಲ್ಲಿ ಎಂಜಿನಿಯರಿಂಗ್‌ ವಿಭಾಗದ ಹಿರಿಯ ಅಧಿಕಾರಿಗಳ ತಂಡ ಇದ್ದು, ಸಣ್ಣ ಪುಟ್ಟ ವಿಷಯಗಳತ್ತಲೂ ಗಮನ ನೀಡುತ್ತಿದೆ.

ಗುಣಮಟ್ಟದ ನಿರ್ವಹಣೆ
ಈ ಅವಧಿಯಲ್ಲಿ ರೈಲು ಮಾರ್ಗ, ಹಳಿಗಳ ದುರಸ್ತಿ, ಗುಣಮಟ್ಟ ನಿರ್ವಹಣೆ ನಡೆಯುತ್ತಿದೆ. ಹಳಿ ಮೇಲೆ ದುರಸ್ತಿ ಕಾರ್ಯ ನಡೆಸಲು ಅವಕಾಶ ಮಾಡಿಕೊಡುವಂತೆ ರೈಲ್ವೇ ಗುಣಮಟ್ಟ ವಿಭಾಗದ ಎಂಜಿನಿಯರಿಂಗ್‌ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಉಡುಪಿ-ಬಾಕೂìರು-
ಕುಂದಾಪುರ ರೈಲು ಮಾರ್ಗದಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪ್ರಗತಿಯಲ್ಲಿದೆ.
-ಸುಧಾ ಕೃಷ್ಣ ಮೂರ್ತಿ,
ಪಿ.ಆರ್‌.ಒ. ಕೊಂಕಣ ರೈಲ್ವೇ ವಿಭಾಗ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next