Advertisement

ನಗರ ಜನಜೀವನದ ಮೇಲೆ ಕೊರೊನಾ ಕರಿಛಾಯೆ!

10:56 PM Mar 15, 2020 | Sriram |

ಉಡುಪಿ: ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್‌ನಿಂದಾಗಿ ರಾಜ್ಯವೇ ಒಂದು ರೀತಿ ಸ್ತಬ್ಧವಾಗಿದೆ. ಇದರ ಎಫೆಕ್ಟ್ ಉಡುಪಿ ನಗರದಲ್ಲೂ ಉಂಟಾಗಿದೆ. ಒಂದು ವಾರ ಹೊಟೇಲ್‌, ಸಿನೆಮಾ ಮಂದಿರ, ಮಾಲ್‌ಗ‌ಳು ಹಾಗೂ ಶಾಲಾ ಕಾಲೇಜುಗಳನ್ನು ಬಂದ್‌ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರ ಪರಿಣಾಮ ನಗರ ಬಹುತೇಕ ಬಂದ್‌ ಆಗಿತ್ತು. ರವಿವಾರವೂ ಆದ್ದರಿಂದ ರಸ್ತೆಗಳೆಲ್ಲ ಖಾಲಿಯಾಗಿದ್ದವು.

Advertisement

ಪ್ರಯಾಣಿಕರಿಲ್ಲದೆ ಬಸ್‌ಗಳು ಖಾಲಿ
ಕೆಎಸ್‌ಆರ್‌ಟಿಸಿ, ರೈಲ್ವೇ, ಹೊಟೇಲ್‌, ಆಟೋ ರಿಕ್ಷಾ ಸಹಿತ ಖಾಸಗಿ ವಾಹನಗಳು, ಕೂಲಿ ಕಾರ್ಮಿಕರ ಮೇಲೂ ಪರಿಣಾಮ ಬೀರಿದೆ. ಹೊರ ಪ್ರದೇಶಗಳಿಗೆ ಹೋಗುವಂತಹ ಬಸ್ಸುಗಳು ಖಾಲಿಯಾಗಿದ್ದವು. ಸಾಮಾನ್ಯಕ್ಕಿಂತ ಶೇ.30ರಷ್ಟು ಕಡಿಮೆ ಜನ ಸಂಚಾರವಿದ್ದು ಹವಾನಿಯಂತ್ರಿತ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮೂರ್‍ನಾಲ್ಕು ಜನರಷ್ಟೇ ಇದ್ದರು. ಕೆಲ ಪ್ರದೇಶಗಳಿಗೆ ಹೋಗುವ ಬಸ್‌ಗಳನ್ನು ಪ್ರಯಾಣಿಕರ ಕೊರತೆಯಿಂದ ನಿಲ್ಲಿಸುವಂತಹ ಸ್ಥಿತಿ ಕೂಡ ಎದುರಾಗಿದೆ ಎಂದು ಉಡುಪಿ ಸಾರಿಗೆ ಸಂಸ್ಥೆಯ ನಿಯಂತ್ರಣಾಧಿಕಾರಿ ಹೇಳಿದ್ದಾರೆ.

ನಷ್ಟದ ಭೀತಿ
ಹೊಟೇಲ್‌ಗ‌ಳಿಗೆ ಜನ ಬರುತ್ತಿಲ್ಲ. ಹೀಗಾಗಿ ಜಾಸ್ತಿ ತಿನಿಸು ಮಾಡಿಟ್ಟಲ್ಲಿ ಅದು ವ್ಯರ್ಥವಾಗುತ್ತಿದೆ. ಇದರಿಂದ ನಷ್ಟದ ಭೀತಿ ಉಂಟಾಗಿದೆ ಎಂದು ಕೆಲವು ಹೊಟೇಲ್‌ಗ‌ಳ ಮಾಲಿಕರು ತಿಳಿಸಿದ್ದಾರೆ. ಇತರ ವಲಯಗಳ ವ್ಯಾಪಾರಸ್ಥರು ಕೂಡ ವ್ಯಾಪಾರವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ನಗರದಲ್ಲಿ ಜನಸಂಚಾರ ತೀರಾ ಕಡಿಮೆಯಾಗಿದೆ. ಪ್ರತಿನಿತ್ಯ ಅಟೋ ಬಾಡಿಗೆ ನಮ್ಮ ನಿರೀಕ್ಷೆಯಂತೆ ಇರುತ್ತಿತ್ತು. ಶನಿವಾರ ಕಡಿಮೆಯಿತ್ತು. ರವಿವಾರ ಶೇ.15ರಷ್ಟು ಕೂಡ ದಿನದ ಬಾಡಿಗೆ ಆಗಿಲ್ಲ ಎಂದು ನಗರದ ಸರ್ವಿಸ್‌ ಬಸ್‌ ನಿಲ್ದಾಣದ ಬಳಿಯ ಅಟೋ ಚಾಲಕ ಶ್ಯಾಮ ಅವರು ಹೇಳುತ್ತಾರೆ.

ರವಿವಾರ ಬಂದ್‌ನ ವಾತಾವರಣ
ರವಿವಾರ ನಗರದ ಅಲಂಕಾರ್‌, ಕಲ್ಪನಾ, ಆಶೀರ್ವಾದ, ಡಯಾನ ಚಿತ್ರಮಂದಿರ ಸೇರಿದಂತೆ ಬಿಗ್‌ಸಿನೆಮಾ, ಐನಾಕ್ಸ್‌ ಮಲ್ಟಿಪ್ಲೆಕ್ಸ್‌ಗಳು ಬಂದ್‌ ಆಗಿದ್ದವು. ಮಣಿಪಾಲ ಸಹಿತ ಪ್ರಮುಖ ಸ್ಥಳಗಳು ಜನಸಂಚಾರವಿಲ್ಲದೆ ಖಾಲಿ ಬಿದ್ದಿದ್ದವು. ನಗರದ ಸರಕಾರಿ ಜಿಮ್‌, ಟೆನ್ನಿಸ್‌ ಕೋರ್ಟ್‌, ಈಜುಕೊಳ ವೈರಸ್‌ ಎಚ್ಚರಿಕೆಯಿಂದ ಬಂದ್‌ ಆಗಿದ್ದವು. ಜನಸಂಚಾರ ಕಡಿಮೆ ಇದ್ದುದ್ದರಿಂದ ಚಿಲ್ಲರೆ ಅಂಗಡಿಮುಂಗಟ್ಟುಗಳ ವ್ಯಾಪಾರಸ್ಥರು ಕೂಡ ಅಂಗಡಿ ತೆರೆಯಲಿಲ್ಲ.

ಗುಳೆ ಹೊರಟ ಕೂಲಿ ಕಾರ್ಮಿಕರು
ಕೊರೊನಾ ವೈರಸ್‌ ಎಫೆಕ್ಟ್ ಕೂಲಿ ಕಾರ್ಮಿಕರ ಮೇಲೂ ಬೀರಿದೆ. ಪ್ರಮುಖ ಕೇಂದ್ರಗಳು, ಸಂಸ್ಥೆಗಳು ಬಂದ್‌ ಆದ ಹಿನ್ನೆಲೆಯಲ್ಲಿ ಕಾರ್ಮಿಕರು ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅನ್ಯ ರಾಜ್ಯ ಹಾಗೂ ಜಿಲ್ಲೆಗಳಿಂದ ನಗರಕ್ಕೆ ಆಗಮಿಸಿ ಇಲ್ಲಿನ ಹೊಟೇಲ್‌ ಇನ್ನಿತರ ಕಡೆಗಳಲ್ಲಿ ಕೆಲಸ ಮಾಡಿಕೊಂಡಿದ್ದ ಹೊರಗಿನ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ತಮ್ಮ ಊರುಗಳಿಗೆ ಗುಳೆ ಹೊರಟಿ ರುವ ದೃಶ್ಯ ರವಿವಾರ ಕಂಡು ಬಂತು.

Advertisement

ಉದ್ಯಾನ ವನಗಳಲ್ಲೂ ಜನರಿಲ್ಲ
ನಗರದ ಅಜ್ಜರಕಾಡು, ಮಣ್ಣಪಳ್ಳ, ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನಗಳಲ್ಲಿ ಎಂದಿನಂತೆ ಭೇಟಿ ನೀಡುತ್ತಿರುವ ಜನರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ.
ಮಣಿಪಾಲದ ಸಾಲುಮರದ ತಿಮ್ಮಕ್ಕ ಉದ್ಯಾನ ವನಕ್ಕೆ ಪ್ರತಿ ಶನಿವಾರ, ರವಿವಾರ 450-500 ಮಂದಿ ಭೇಟಿ ನೀಡುತ್ತಾರೆ. ಆದರೆ ಮಾ. 14ರಂದು ಕೇವಲ 85 ಮಂದಿ ಮಾತ್ರ ಭೇಟಿ ನೀಡಿದ್ದಾರೆ. ರವಿವಾರ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ 45 ಮಂದಿ ಮಾತ್ರ ಭೇಟಿ ನೀಡಿದ್ದಾರೆ. ಮಣ್ಣಪಳ್ಳ ಪಾರ್ಕ್‌, ಅಜ್ಜರಕಾಡಿ ನಲ್ಲೂ ಜನರ ಸಂಖ್ಯೆ ವಿರಳವಾಗಿತ್ತು.

ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರ ಕೊರತೆ
ನಗರಗಳಷ್ಟೆ ಅಲ್ಲ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಕೂಡ ಭಕ್ತರ ಸಂಖ್ಯೆ ತೀರಾ ಇಳಿಮುಖಗೊಂಡಿದೆ. ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಶನಿವಾರ ಸಾಧಾರಣ ಪ್ರಮಾಣದಲ್ಲಿ ಭಕ್ತರು ಶ್ರೀ ದೇವರ ದರ್ಶನಕ್ಕೆ ಆಗಮಿಸಿದ್ದರೆ ರವಿವಾರ ಅದು ಇಳಿಮುಖವಾಗಿದೆ. ಹೊರಗಿನ ಊರುಗಳಿಂದ ಆಗಮಿಸುವ ಭಕ್ತರ ಕೊರತೆ ಹೆಚ್ಚಾಗಿ ಕಂಡು ಬಂದಿದೆ. ದೇವರ ದರ್ಶನಕ್ಕೆಂದು ಬಂದವರ ಪೈಕಿ ಭಕ್ತರಲ್ಲಿ ಕೆಲವರು ಮಾಸ್ಕ್ ಧರಿಸಿದ್ದರು. ದೇವಸ್ಥಾನಗಳು, ಚರ್ಚ್‌, ಮಸೀದಿಗಳಿಗೆ ಭೇಟಿ ನೀಡುವವರ ಪ್ರಮಾಣ ಕಡಿಮೆಯಾಗಿದೆ. ಅಲ್ಲೆಲ್ಲ ಮುಂಜಾಗ್ರತೆ ಕ್ರಮಗಳನ್ನು ವಹಿಸಲಾಗುತ್ತಿದೆ.

ರೈಲ್ವೇ ಇಲಾಖೆಗೂ ನಷ್ಟದ ಭೀತಿ
ರೈಲ್ವೇ ನಿಲ್ದಾಣದಲ್ಲಿ ಸಹ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ದೂರದೂರುಗಳಿಗೆ ಮುಂಗಡ ಟಿಕೆಟ್‌ ಕಾಯ್ದಿರಿಸಿದ ಅನೇಕ ಮಂದಿ ಬುಕ್ಕಿಂಗ್‌ ರದ್ದುಗೊಳಿಸಿದ್ದಾರೆ. ರೈಲು ಪ್ರಯಾಣಿಕರ ಸಂಖ್ಯೆಯು ಕಡಿಮೆಯಾದ ಬಗ್ಗೆ ಟಿಕೆಟ್‌ ಕೌಂಟರ್‌ ಸಿಬಂದಿ ಮಾಹಿತಿ ನೀಡಿದರು. ರೈಲ್ವೇ ನಿಲ್ದಾಣದಲ್ಲಿ ರೈಲಿಗಾಗಿ ಕಾದಿದ್ದ ಪ್ರಯಾಣಿಕರಲ್ಲಿ ಅನೇಕ ಮಂದಿ ಮುಖಕ್ಕೆ ಮಾಸ್ಕ್ ಧರಿಸಿದ್ದು ಕಂಡು ಬಂತು.

ಇಳಿಕೆ
ವಾರಾಂತ್ಯದಲ್ಲಿ ಭೇಟಿ ನೀಡುವ ಜನರ ಸಂಖ್ಯೆ 2 ದಿನಗಳಿಂದ ಕಡಿಮೆಯಾಗಿದೆ. ಶನಿವಾರ 85 ಮಂದಿ ಭೇಟಿ ನೀಡಿದ್ದು ಮಕ್ಕಳು ಭೇಟಿ ನೀಡಿಲ್ಲ. ರವಿವಾರವೂ ಕಡಿಮೆ ಜನರು ಭೇಟಿ ನೀಡಿದ್ದಾರೆ.
– ಅಶ್ವಿ‌ನ್‌, ಅರಣ್ಯ ವೀಕ್ಷಕರು
ಸಾಲುಮರದ ತಿಮ್ಮಕ್ಕ ವೃಕ್ಷವನ ಪಾರ್ಕ್‌

ವ್ಯಾಪಾರ ಕುಸಿತ
ಕಳೆದ ಎರಡು ದಿನಗಳಿಂದ ಜನರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ವ್ಯಾಪಾರದಲ್ಲಿ ಕುಸಿತವಾಗಿದೆ.
-ದೇವೇಂದ್ರ
ವ್ಯಾಪಾರಿ ಮಣ್ಣಪಳ್ಳ

Advertisement

Udayavani is now on Telegram. Click here to join our channel and stay updated with the latest news.

Next