ಸುಬ್ರಹ್ಮಣ್ಯ: ಮಂಗಳೂರು- ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ರೈಲು ಮಾರ್ಗ ದಲ್ಲಿ ಸಂಭವಿಸಿದ ಭೂಕುಸಿತದ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ಮಂಗಳೂರು – ಬೆಂಗಳೂರು ನಡುವೆ ರೈಲು ಸಂಚಾರ ಸ್ಥಗಿತಗೊಂಡಿದೆ. ಪರಿಣಾಮ ಬಂಟ್ವಾಳ, ಪುತ್ತೂರು ಸಹಿತ ಸದಾ ಪ್ರಯಾಣಿಕರ ದಟ್ಟಣೆಯಿಂದ ತುಂಬಿರುತ್ತಿದ್ದ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ಬಿಕೋ ಎನ್ನುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರು, ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಕಡಬ ತಾಲೂಕಿನ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಮೂಲಕವೇ ಪ್ರಯಾಣ ಬೆಳೆಸುತ್ತಿದ್ದರು. ಇದರಿಂದ ಇಲ್ಲಿನ ರೈಲು ನಿಲ್ದಾಣ ರಾತ್ರಿ, ಹಗಲು ಸದಾ ಪ್ರಯಾಣಿಕರ ದಟ್ಟಣೆಯಿಂದ ತುಂಬಿರುತ್ತಿತ್ತು. ಆದರೆ ಇದೀಗ ಮಂಗಳೂರು-ಬೆಂಗಳೂರು ನಡುವೆ ರೈಲು ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಜು.27ರಿಂದ ಪ್ರಯಾಣಿಕರಿಲ್ಲದೆ ನಿಲ್ದಾಣ ಬಿಕೋ ಎನ್ನುತ್ತಿದೆ.
ಭೂಕುಸಿತ ಸಂಭವಿಸಿದ ಪ್ರದೇಶ ದಲ್ಲಿ ರೈಲು ಮಾರ್ಗದ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದ್ದು, ಮಂಗಳೂರು-ಬೆಂಗಳೂರು ನಡುವೆ ಶೀಘ್ರ ರೈಲು ಸಂಚಾರ ಪುನರಾರಂಭ ಆಗುವ ನಿರೀಕ್ಷೆ ಇದೆ. ಸದ್ಯ ದುರಸ್ತಿ ಸ್ಥಳಕ್ಕೆ ಬಂಡೆಗಳ ಸಾಗಾಟ ನಡೆಯುತ್ತಿದ್ದು, ಇದು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಮೂಲಕವೇ ತೆರಳುತ್ತಿದೆ, ಅಲ್ಲದೆ ಕಾರ್ಮಿಕರಿಗೆ ಆಹಾರ, ನೀರು ಕೂಡ ಇಲ್ಲಿಂದಲೂ ಹೋಗುತ್ತಿದೆ. ಮಂಗಳೂರು-ಬೆಂಗಳೂರು ನಡುವೆ ಹಗಲಲ್ಲಿ 4, ರಾತ್ರಿ 5-6 ರೈಲುಗಳು ಓಟಾಟ ನಡೆಸುತ್ತಿರುತ್ತವೆ.
ಸದ್ಯ ರೈಲು ನಿಲ್ದಾಣದ ಸಿಬಂದಿ, ಗೂಡ್ಸ್ ರೈಲಿನ ಕಾರ್ಮಿಕರು ಕೆಲವು ಮಂದಿ ರೈಲು ನಿಲ್ದಾಣದಲ್ಲಿ ಕಾಣ ಸಿಗುತ್ತಾರೆ. ಉಳಿದಂತೆ ರೈಲು ನಿಲ್ದಾಣ ಬಿಕೋ ಎನ್ನುತ್ತಿದೆ. ಪ್ರಸ್ತುತ ಮಂಗಳೂರು-ಸುಬ್ರಹ್ಮಣ್ಯ ರೋಡ್ ನಡುವೆ ಮಧ್ಯಾಹ್ನ ಓಡಾಟ ನಡೆಸುವ ಪ್ಯಾಸೆಂಜರ್ ರೈಲು ಸಂಚಾರ ನಡೆಸುತ್ತಿದ್ದು. ಉಳಿದೆಲ್ಲವೂ ಸ್ಥಗಿತಗೊಂಡಿದೆ. ಇದೀಗ ಗೂಡ್ಸ್ ರೈಲು ಓಡಾಟ ಆರಂಭಿಸಿದೆ. ರೈಲು ಓಡಾಟ ಸ್ಥಗಿತದಿಂದಾಗಿ ಇಲ್ಲಿನ ವ್ಯವಹಾರ ಮಳಿಗೆಗಳೂ ಕೂಡ ವ್ಯಾಪಾರ ಇಲ್ಲದೇ ದಿನದೂಡುತ್ತಿದ್ದಾರೆ. ನೆಟ್ಟಣದ ಅಟೋರಿಕ್ಷಾ, ವ್ಯಾನ್ ಚಾಲಕ-ಮಾಲಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಮಂಗಳೂರು-ಬೆಂಗಳೂರು ನಡುವೆ ಹಗಲಲ್ಲಿ 4, ರಾತ್ರಿ 5-6 ರೈಲುಗಳು ಓಟಾಟ.
ಒಂದು ಕಡೆ ರೈಲು ಸಂಚಾರ ಸ್ಥಗಿತ, ಇನ್ನೊಂದೆಡೆ ಶಿರಾಡಿ ಘಾಟಿ ರಸ್ತೆಯಲ್ಲಿ ಮಣ್ಣು ಕುಸಿತದಿಂದ ಸಂಚಾರದಲ್ಲಿ ಉಂಟಾಗಿರುವ ವ್ಯತ್ಯಯದಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಭಕ್ತರ ಸಂಖ್ಯೆ ವಿರಳವಾಗಿದೆ. ಪ್ರಮುಖ ಸಂಚಾರ ಮಾರ್ಗದಲ್ಲಿ ಕಾಣಿಸಿಕೊಂಡಿರುವ ಸಂಚಾರ ವ್ಯತ್ಯಯ ಭಕ್ತರು, ಯಾತ್ರಿಕರ ಕುಕ್ಕೆಗೆ ಭೇಟಿಗೂ ಅಡ್ಡಿಯಾಗಿದ್ದು, ಜತೆಗೆ ನಿರಂತರ ಮಳೆ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆ ವಿರಳವಾಗಿ ಕಂಡುಬಂದಿದೆ