ರಾಯಚೂರು: ಸರ್ಕಾರ ಸಾವಿರಾರು ಕೋಟಿ ರೂ. ಖರ್ಚು ಮಾಡಿ ಸ್ಥಾಪಿಸಿದ ಯರಮರಸ್ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಸ್ಟೇಶನ್ (ವೈಟಿಪಿಎಸ್) ನಿರ್ವಹಣೆಯನ್ನು ಖಾಸಗಿ ಕಂಪನಿ ನೀಡಿರುವ ನಿರ್ಧಾರ ಕೂಡಲೇ ಹಿಂಪಡೆಯದಿದ್ದಲ್ಲಿ ಕೇಂದ್ರದ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಾಯಚೂರು ಕೈಗಾರಿಕೆ ಪ್ರದೇಶ ಭೂ ಸಂತ್ರಸ್ತರ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ರಾಮನಗೌಡ, ಸಾವಿರಾರು ಕೋಟಿ ಖರ್ಚು ಮಾಡಿ ಸ್ಥಾಪಿಸಿದ ಸಂಸ್ಥೆಯನ್ನು ಖಾಸಗಿ ಕಂಪನಿಗೆ ನೀಡುವಂತಹ ಅನಿವಾರ್ಯತೆ ಏನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ. ಈ ಕೇಂದ್ರಕ್ಕಾಗಿ ಈ ಭಾಗದ ಜನ ಫಲವತ್ತಾದ 1135 ಎಕರೆ ಭೂಮಿ ಬಿಟ್ಟು ಕೊಟ್ಟಿದ್ದಾರೆ. ಏಗನೂರು, ಚಿಕ್ಕಸೂಗುರು, ವಡ್ಲೂರು, ಕುಕುನೂರು, ಯರಮರಸ್ ಭಾಗದ ಜನ ಜೀವನಾವಶ್ಯಕ ಭೂಮಿ ಬಿಟ್ಟು ಕೊಟ್ಟಿದ್ದಾರೆ. ಈಗ ಯಾವುದೋ ಆಂಧ್ರ ಮೂಲದ ಕಂಪನಿಗೆ ನೀಡುವ ಅನಿವಾರ್ಯತೆ ಏನು? ಎಂದು ಪ್ರಶ್ನಿಸಿದರು.
ಸರ್ಕಾರ ಇನ್ನೂ 400 ಭೂ ಸಂತ್ರಸ್ತರಿಗೆ ಕೆಲಸವೇ ನೀಡಿಲ್ಲ. ನಮ್ಮ ಕೆಲವೊಂದು ಬೇಡಿಕೆ ಈಡೇರಿಸಿಲ್ಲ. ಈಗ ನಿರ್ವಹಣೆ ಹೊಣೆ ಖಾಸಗಿಗೆ ವಹಿಸಿದರೆ ಇದನ್ನು ನಂಬಿದ ಜನರ ಕತೆಯೇನು?. ಸರ್ಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯದಿದ್ದಲ್ಲಿ ವೈಟಿಪಿಎಸ್ ಎದುರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.
ಗೌರವಾಧ್ಯಕ್ಷ ಕೆ. ಸತ್ಯನಾರಾಯಣರಾವ್ ಮಾತನಾಡಿ, 540 ಕುಟುಂಬಗಳಿಗೆ ಉದ್ಯೊಗ ನೀಡಬೇಕಿದ್ದು, ಕೇವಲ 140 ಜನರಿಗೆ ಮಾತ್ರ ನೀಡಲಾಗಿದೆ. ಇದರ ಹಿಂದೆ ಜಿಲ್ಲೆಯ ರಾಜಕಾರಣಿಗಳ ಕುಮ್ಮಕ್ಕಿದೆ. ಎಂಎಲ್‌ಸಿ ಎನ್. ಎಸ್. ಬೋಸರಾಜ್ ಅವರ ಪುತ್ರ ರವಿ ಬೋಸರಾಜ್ ಪ್ರಭಾವ ಬೀರಿ ಈ ರೀತಿ ಮಾಡಿದ ಶಂಕೆ ಇದೆ ಎಂದು ಆರೋಪಿಸಿದರು. ಈ ಕೇಂದ್ರ ಸ್ಥಾಪನೆಯಿಂದ ಸುತ್ತಮುತ್ತಲಿನ ಜನರಿಗೆ ಆರೋಗ್ಯ ಸಮಸ್ಯೆ ಉಲ್ಬಣಿಸುತ್ತಿದೆ. ಕ್ಷಯ, ಅಸ್ತಮಾದಂತಹ ಕಾಯಿಲೆಗಳು ಎದುರಾಗುವ ಆತಂಕವಿದೆ. ಸ್ಥಳೀಯ ಯುವಕರಿಗೆ ಕೆಲಸ ನೀಡಬೇಕಿದ್ದರೂ ಪ್ರತಿಯೊಂದು ಕೆಲಸಕ್ಕೂ ಬೇರೆ ಭಾಗದ ಕಾರ್ಮಿಕರನ್ನೇ ನಿಯೋಜಿಸಲಾಗಿದೆ. ಈ ಹಿಂದೆ ಭೂ ಸಂತ್ರಸ್ತರು ಒಡ್ಡಿದ ಬೇಡಿಕೆ ಈಡೇರಿಸುವ ಜತೆಗೆ ಸರ್ಕಾರವೇ ಈ ಕೇಂದ್ರ ನಡೆಸಬೇಕು. ಅಲ್ಲಿಯವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಪ್ರಧಾನ ಕಾರ್ಯದರ್ಶಿ ಎಸ್.ಜಿ. ಪ್ರಭು ಮಡಿವಾಳ, ಖಜಾಂಚಿ ಚನ್ನಾರೆಡ್ಡಿ ಪಾಟೀಲ್, ವೈ.ನರಸಪ್ಪ, ಗೋವಿಂದ, ಶ್ರೀನಿವಾಸ ಇತರರು ಇದ್ದರು.