Advertisement

Raichuru Accident: ಶಾಲಾ ಬಸ್‌: ಬೇಜವಾಬ್ದಾರಿ ಚಾಲನೆಗೆ ಕಠಿನ ಕ್ರಮ ಅಗತ್ಯ

02:14 AM Sep 06, 2024 | Team Udayavani |

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್‌ ಸನಿಹ ಗುರುವಾರ ಬೆಳಗ್ಗೆ ಖಾಸಗಿ ಶಾಲಾ ವಾಹನ ಮತ್ತು ಸರಕಾರಿ ಬಸ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಇಡೀ ರಾಜ್ಯದ ಜನತೆಯ ಮನಕಲಕುವಂತೆ ಮಾಡಿದೆ.

Advertisement

ಶಿಕ್ಷಕರ ದಿನಾಚರಣೆಯ ಸಂಭ್ರಮದಲ್ಲಿದ್ದ ಮಕ್ಕಳು ಎಂದಿನಂತೆ ಶಾಲಾ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ತೆರನಾದ ದುರ್ಘ‌ಟನೆ ಸಂಭವಿಸಿ ಕಂದಮ್ಮಗಳು ಪ್ರಾಣ ಕಳೆದುಕೊಳ್ಳುವಂತಾದುದು ತೀರಾ ದುರದೃಷ್ಟಕರ. ರಸ್ತೆಯಲ್ಲಿನ ಹೊಂಡ ತಪ್ಪಿಸುವ ಭರದಲ್ಲಿ ಬಸ್‌ ಚಾಲಕ ಎಸಗಿದ ಸಣ್ಣ ಎಡವಟ್ಟು ಇಬ್ಬರು ಎಳೆಯ ಕಂದಮ್ಮಗಳ ಪ್ರಾಣಕ್ಕೇ ಕುತ್ತು ತಂದಿದೆ. ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರಿಗೆ ಮತ್ತು ಪೊಲೀಸ್‌ ಇಲಾಖೆ ಶ್ರಮಿಸುತ್ತಿದ್ದರೂ ಸಂಚಾರ ನಿಯಮಾವಳಿಗಳನ್ನು ಉಲ್ಲಂ ಸಿ ಚಾಲಕರು ಬೇಜವಾಬ್ದಾರಿಯುತವಾಗಿ ವಾಹನಗಳನ್ನು ಚಲಾಯಿಸುತ್ತಿರುವ ಪರಿಣಾಮ ಅಮಾಯಕರು ಸಮಸ್ಯೆ ಎದುರಿಸುವಂತಾಗಿದೆ.

ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಚಾಲಕರು ಸಾಕಷ್ಟು ಮುಂಜಾಗ್ರತೆ ವಹಿಸುವುದು ಅತ್ಯವಶ್ಯವಾಗಿದೆ. ಅಷ್ಟು ಮಾತ್ರವಲ್ಲದೆ ಶಾಲಾ ವಾಹನಗಳಿಗೆ ಹಳದಿ ಬಣ್ಣ ಬಳಿಯುವುದನ್ನು ಕಡ್ಡಾಯಗೊಳಿಸಲಾಗಿದ್ದು, ಈ ವಾಹನಗಳನ್ನು ಸುಲಭವಾಗಿ ಗುರುತಿಸುವಂತಾಗಲು ಮತ್ತು ಶಾಲಾ ವಾಹನಗಳು ರಸ್ತೆಯಲ್ಲಿ ಚಲಿಸುತ್ತಿರುವ ಸಂದರ್ಭದಲ್ಲಿ ಇತರ ವಾಹನಗಳ ಚಾಲಕರು ಒಂದಿಷ್ಟು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕೆಂಬ ದೃಷ್ಟಿಯಿಂದ ಸರಕಾರ ಈ ನಿಯಮವನ್ನು ಅನುಷ್ಠಾನಕ್ಕೆ ತಂದಿದೆ.

ಇನ್ನು ಸೀಮಿತ ವೇಗದಲ್ಲಿಯೇ ಶಾಲಾ ವಾಹನಗಳನ್ನು ಚಲಾಯಿಸಬೇಕೆಂಬ ಉದ್ದೇಶದಿಂದ ಈ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಸಾಧ್ಯವಾದಷ್ಟು ಅನುಭವಿ ಚಾಲಕರನ್ನು ನೇಮಿಸುವಂತೆಯೂ ಸಾರಿಗೆ ಇಲಾಖೆ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗೆ ಸೂಚನೆ ನೀಡುತ್ತಲೇ ಬರುತ್ತಿದೆ. ಇವೆಲ್ಲದರ ಹೊರ ತಾಗಿಯೂ ಇಂತಹ ಅಪಘಾತಗಳು ಸಂಭವಿಸುತ್ತಿರುವುದು ಖೇದನೀಯ.

Advertisement

ಶಾಲಾ ವಾಹನಗಳನ್ನು ಚಲಾಯಿಸುವ ಚಾಲಕರು ಕೂಡ ಇತರ ವಾಹನಗಳಂತೆ ಬೇಕಾಬಿಟ್ಟಿಯಾಗಿ ವಾಹನಗಳನ್ನು ಚಲಾಯಿಸುವ ಚಾಳಿಯಿಂದ ದೂರವುಳಿಯಬೇಕು. ಪುಟ್ಟ ಮಕ್ಕಳನ್ನು ಶಾಲೆಗೆ ಕರೆ ದೊಯ್ಯುವ ಮತ್ತು ಮರಳಿ ಮನೆಗೆ ಸುರಕ್ಷಿತವಾಗಿ ಕರೆತರುವ ಮಹತ್ತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂಬುದನ್ನು ಮೊದಲು ಈ ಚಾಲಕರು ಅರಿತುಕೊಳ್ಳಬೇಕು.

ಪ್ರತಿನಿತ್ಯ ಇದೇ ಕಾರ್ಯವನ್ನು ಮಾಡುವ ಈ ಚಾಲಕರಿಗೆ ತಾವು ವಾಹನ ಚಲಾಯಿಸುವ ರಸ್ತೆಯ ಸ್ಥಿತಿಗತಿಯ ಸಂಪೂರ್ಣ ಅರಿವು ಇದ್ದೇ ಇರುತ್ತದೆ. ಹೀಗಿದ್ದೂ ಇಂತಹ ಅಪಘಾತಗಳು ಸಂಭವಿಸುತ್ತವೆ ಎಂದರೆ ಚಾಲಕರ ನಿರ್ಲಕ್ಯ ಎದ್ದು ತೋರುತ್ತದೆ. ಇನ್ನು ಮುಖ್ಯ ರಸ್ತೆಗೋ ಹೆದ್ದಾರಿಗೋ ಸೇರುವ ಜಾಗದಲ್ಲಿ ವಾಹನ ಚಾಲಕರು ಹೆಚ್ಚಿನ ತಾಳ್ಮೆ, ಸಂಯಮ ವಹಿಸುವುದು ಅತ್ಯಗತ್ಯ.

ಸಂಚಾರ ನಿಯಾಮಾವಳಿ ಪಾಲನೆ ವಿಷಯದಲ್ಲಿ ಸಾರಿಗೆ ಮತ್ತು ಪೊಲೀಸ್‌ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ತಪಾಸಣೆ ಕಾರ್ಯ ನಡೆಸಬೇಕು. ಕಾನೂನು, ನಿಯಮಾವಳಿಗಳು ಕೇವಲ ಕಡತಗಳಿಗೆ ಸೀಮಿತವಾಗದೆ ಪ್ರತಿನಿತ್ಯ ಇವುಗಳ ಪಾಲನೆಯಾಗುವುದನ್ನು ಖಾತರಿಪಡಿಸುವ ಹೊಣೆಗಾರಿಕೆ ಈ ಇಲಾಖೆಗಳ ದ್ದಾಗಿದೆ. ಇದೇ ವೇಳೆ ಶಿಕ್ಷಣ ಸಂಸ್ಥೆಗಳು ಕೂಡ ಶಾಲಾ ವಾಹನಗಳಿಗೆ ಚಾಲಕರನ್ನು ನೇಮಿಸುವಾಗ ಸೂಕ್ತ ಪರಿಶೀಲನೆ ನಡೆಸಬೇಕು.

ಬೇಕಾಬಿಟ್ಟಿಯಾಗಿ ಚಾಲಕರನ್ನು ನೇಮಿಸಿಕೊಳ್ಳದೆ ನಿಗದಿತ ಅವಧಿಯ ಅನುಭವವುಳ್ಳ ಮತ್ತು ಚಾಲಕರ ಪೂರ್ವಾಪರಗಳನ್ನು ಪರಿಶೀಲಿಸಿ ನೇಮಕ ಮಾಡಿಕೊಳ್ಳಬೇಕು. ಇವೆಲ್ಲದರತ್ತ ಸಂಬಂಧಿತರು ಲಕ್ಷ್ಯ ಹರಿಸಿದಲ್ಲಿ ಮಾತ್ರವೇ ಮಾನ್ವಿಯಲ್ಲಿ ಸಂಭವಿಸಿದಂತಹ ದುರಂತಗಳನ್ನು ತಪ್ಪಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next