ರಾಯಚೂರು: ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಪ್ರಧಾನಿ ನರೇಂದ್ರ ಮೋದಿ ಬಗ್ಗೆಯೇ ಹಗುರವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಕಷ್ಟು ವೈರಲ್ ಆಗಿದೆ. ಆದರೆ, ಈ ಬಗ್ಗೆ ಸ್ಪಷ್ಟಿಕರಣ ನೀಡಿರುವ ಶಾಸಕ ಧ್ವನಿ ನನ್ನದೇ. ಆದರೆ, ಬೇಕಾದ ರೀತಿ ಎಡಿಟ್ ಮಾಡಿ ನನ್ನ ತೇಜೋವಧೆ ಮಾಡಲಾಗಿದೆ ಎಂದಿದ್ದಾರೆ.
ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ವೇಳೆ ಈ ರೀತಿ ಆಡಿಯೋ ಹೊರ ಬಂದಿರುವುದು ಬಿಜೆಪಿಗೆ ಮುಜುಗರ ಉಂಟು ಮಾಡಿದೆ.ಈ ವೀಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಶಾಸಕರ ಬಗ್ಗೆ ಪರ ವಿರೋಧದ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ತಮ್ಮ ಆಪ್ತರೊಂದಿಗೆ ಮಾತನಾಡುವಾಗ ಪ್ರಧಾನಿ ಮೋದಿ ವಿರುದ್ಧವೇ ಮಾತನಾಡಿದ್ದಾರೆ. ಅಲ್ಲದೇ ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಬಗ್ಗೆಯೂ ಉಡಾಫೆ ಮಾತನಾಡಿದ್ದಾರೆ.
“ಮೋದಿ ರೈಟ್ ಹ್ಯಾಂಡ್ ಹೇಳಿದರೂ ನಾನು ಕೆಳುವುದಿಲ್ಲ. ನಾನೇ ಸಿಂಗಲ್ ಆರ್ಮಿ. ನನಗೆ ರೈಟ್, ಲೆಫ್ಟ್ ಯಾವುದು ಇಲ್ಲ. ನಾನೇ ಮೋದಿ, ನಾನೇ ಟ್ರಂಪ್. ಎಲೆಕ್ಷನ್ ನಲ್ಲಿ ಸೋತರೂ ಚಿಂತೆಯಿಲ್ಲ, ಗೆದ್ದರು ಚಿಂತೆಯಿಲ್ಲ, ಮಲಗಿದರೂ ಚಿಂತೆಯಿಲ್ಲ. ಚಿಂತೆ ಇಲ್ಲದ ಪುರುಷ ಎಂದರೆ ಅದು ಶಿವರಾಜ್ ಪಾಟೀಲ್ ಮಾತ್ರ” ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ.
ಇದನ್ನೂ ಓದಿ:ದಕ್ಷಿಣ ಆಗ್ನೇಯ ರೈಲ್ವೆ…ಒಂದು ವರ್ಷದಲ್ಲಿ 1ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ ಟಿಕೆಟ್ ಪರೀಕ್ಷಕ
ಅಷ್ಟೇ ಅಲ್ಲ “ನಾನು ದೇವರಿದ್ದಂಗೆ. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ. ನಾನೇ ದೈವ ಬರೆತೀನಿ” ಎಂದೆಲ್ಲ ಮಾತನಾಡಿದ್ದಾರೆ.
ಆದರೆ ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಶಾಸಕ ಶಿವರಾಜ್ ಪಾಟೀಲ್, “ಇದು ಬಹಳ ಹಳೇ ಆಡಿಯೊ. ಆಡೀಯೊದಲ್ಲಿರುವ ಧ್ವನಿ ನನ್ನದೇ. ಆದರೆ, ನಾನು ಆ ರೀತಿ ಮಾತನಾಡಿಲ್ಲ. ಕೆಲ ಕುತಂತ್ರಿಗಳು ದುರುದ್ದೇಶಪೂರಕವಾಗಿ ತಮಗೆ ಬೇಕಾದ ರೀತಿ ಆಡೀಯೊ ಮಾಡಿ ಹರಿಬಿಟ್ಟಿದ್ದಾರೆ. ರಾಜಕಾರಣದಲ್ಲಿ ತಂತ್ರಗಾರಿಕೆ ಇರಬೇಕು ಈ ರೀತಿ ಕುತಂತ್ರ ಮಾಡಬಾರದು” ಎಂದಿದ್ದಾರೆ.