ಬೆಂಗಳೂರು: “ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಹೊರತಾದ ಮಹಾಮೈತ್ರಿಯ ನಾಯಕತ್ವವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವಹಿಸುವ ಬಗ್ಗೆ ನನ್ನ ತಕರಾರು ಇಲ್ಲ’ ಎನ್ನುವ ಮೂಲಕ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾಹುಲ್‌ರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ತೀರ್ಮಾನವನ್ನು ಬೆಂಬಲಿಸಿದ್ದಾರೆ.
ದೆಹಲಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಭಾನುವಾರ ತೆಗೆದುಕೊಂಡಿದೆ. ಮಹಾಮೈತ್ರಿಯ ನಾಯಕತ್ವವನ್ನು ಅವರಿಗೆ ವಹಿಸಿರುವ ಬಗ್ಗೆ ನನ್ನ ತಕರಾರಿಲ್ಲ ಎಂದು ಹೇಳಿದರು.
ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ಕರ್ನಾಟಕದಲ್ಲಿ ನಾವು(ಜೆಡಿಎಸ್) ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೊರತಾಗಿ ಸುಮಾರು 280 ಸೀಟುಗಳನ್ನು ಗೆಲ್ಲುವುದು ಪ್ರತಿಪಕ್ಷಗಳ ಮೈತ್ರಿಯ ಗುರಿ. ಆ ನಿಟ್ಟಿನಲ್ಲಿ ಬಿಜೆಪಿ ಹೊರತಾದ ಮಹಾಮೈತ್ರಿ ಒಟ್ಟಾಗಿ ಕೆಲಸ ಮಾಡಲಿದೆ ಎಂದರು.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದನ್ನು ಸಮರ್ಥಿಸಿಕೊಂಡ ದೇವೇಗೌಡರು, ಅವಿಶ್ವಾಸ ಮಂಡನೆ ವ್ಯರ್ಥ ಪ್ರಯತ್ನವೇನೂ ಅಲ್ಲ. ನಮ್ಮ ಬಳಿ ಸಂಖ್ಯಾಬಲ ಇಲ್ಲ ಎನ್ನುವುದು ಮೊದಲೇ ಗೊತ್ತಿತ್ತು. ಆದರೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಸುವ ಪ್ರಯತ್ನದ ಸಲುವಾಗಿ ಅವಿಶ್ವಾಸ ಮಂಡನೆ ಮಾಡಿದ್ದೇವೆ. ಈ ವಿಚಾರದಲ್ಲಿ ನಮ್ಮ ಪ್ರಯತ್ನ ಯಶಸ್ವಿಯಾಗಿದೆ ಎಂದು ಹೇಳಿದರು.