ಹೊಸದಿಲ್ಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇನ್ನೇನು ಕೆಲವೇ ದಿನಗಳಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರಲಿದ್ದಾರೆ. ಅದಕ್ಕೆ ಪೂರಕವಾಗಿ ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ವಿಟರ್‌ನಲ್ಲಿರುವ ಅವರ ಖಾತೆ ಃ@OfficeOfRG ದೇಶದ ಮತ್ತು ಜಗತ್ತಿನ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯೆ ನೀಡುವ ಪರಿಯ ಬಗ್ಗೆ ಅನುಮಾನಗಳು ಎದ್ದಿವೆ. ಈ ಬಗ್ಗೆ “ಎಎನ್‌ಐ’ ಸುದ್ದಿಸಂಸ್ಥೆ ಮಾಡಿರುವ ವರದಿ ರಾಜಕೀಯ ಕ್ಷೇತ್ರದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ. ಕನ್ನಡ ಚಿತ್ರನಟಿ ರಮ್ಯಾ ದಿವ್ಯಸ್ಪಂದನ ಪಕ್ಷದ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥೆಯಾದ ಬಳಿಕ ರಾಹುಲ್‌ರ ಟ್ವಿಟರ್ ಖಾತೆಯಲ್ಲಿ ಕೇಂದ್ರ ಸರಕಾರ ಮತ್ತು ಜಗತ್ತಿನ ಪ್ರಮುಖ ವಿದ್ಯಮಾನಗಳ ಬಗ್ಗೆ ಪ್ರಬಲವಾಗಿಯೇ ಟೀಕೆ, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಅದಕ್ಕೆ ಪೂರಕವಾಗಿ ಅ.15ರಂದು ರಾಹುಲ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಟ್ವೀಟ್ ಒಂದನ್ನು ರೀ ಟ್ವೀಟ್ ಮಾಡಲಾಗಿತ್ತು. “ಮೋದಿ ಅವರೇ ತ್ವರಿತರಾಗಿ. ಅಧ್ಯಕ್ಷ ಟ್ರಂಪ್ ಇನ್ನೊಂದು ಅಪ್ಪುಗೆ ಬಯಸಿದ್ದಾರೆ’ ಎಂದು ಬರೆದುಕೊಳ್ಳಲಾಗಿತ್ತು. ಕೆಲವೇ ಸೆಕೆಂಡುಗಳಲ್ಲಿ ಅದು 20 ಸಾವಿರ ಮಂದಿಯಿಂದ ರಿಟ್ವೀಟ್ ಆಗಿತ್ತು. ನಂತರ ಅದರ ಸಂಖ್ಯೆ 30 ಸಾವಿರಕ್ಕೆ ಏರಿಕೆಯಾಗಿತ್ತು.
ಅನುಮಾನ ಮೂಡಿದ್ದೆಲ್ಲಿ?: ರಾಹುಲ್ ಗಾಂಧಿ ಹಿಂಬಾಲಕರ ಪಟ್ಟಿಯಲ್ಲಿ ರಷ್ಯಾ, ಕಜಕಿಸ್ತಾನ ಮತ್ತು ಇಂಡೋನೇಷ್ಯಾದ ಹೆಸರುಗಳಿಗೆ ಸಾಮ್ಯವಾದ ಒಂದಿಷ್ಟು ಹೆಸರುಗಳು ಕಂಡು ಬರುತ್ತಿವೆ. ಅವರ ವಿವರವೂ ಆಯಾ ದೇಶಗಳ ಪ್ರಜೆ ಎನ್ನುವಂತೆ ಇವೆ. ಕಡಿಮೆ ಸಮಯದಲ್ಲಿ ಸಾಧ್ಯವಾಗಿದ್ದು ಹೇಗೆ, ಸಾಧ್ಯವೇ ಎಂದು ಸುದ್ದಿಸಂಸ್ಥೆಯ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಅದರಲ್ಲೂ ರೀ ಟ್ವೀಟ್ ಮಾಡುವಷ್ಟರ ಮಟ್ಟಿಗೆ ಏಕಾಏಕಿ ಹಿಂಬಾಲಕರಾಗಲು ಸಾಧ್ಯವೇ? ಇವರೆಲ್ಲಾ ನಿಜವಾಗಿಯೂ ಖಾತೆದಾರರೇ ಅಥವಾ ನಕಲು ಖಾತೆಗಳನ್ನು ಸೃಷ್ಟಿಸಲಾಗಿದೆಯೇ ಎನ್ನುವುದು ಅನುಮಾನಗಳಿಗೆ ಕಾರಣವಾಗಿದೆ.
ಬಿಜೆಪಿ ತಿರುಗೇಟು: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವೆ ಸ್ಮತಿ ಇರಾನಿ ರಾಹುಲ್ ಗಾಂಧಿ ರಷ್ಯಾ, ಇಂಡೋನೇಷ್ಯಾ ಮತ್ತು ಕಜಕಿಸ್ತಾನಗಳಲ್ಲಿ ಚುನಾವಣೆಗಳಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಸಿದ್ಧತೆ ನಡೆಸಿರಬೇಕು ಎಂದು ಲೇವಡಿ ಮಾಡಿದ್ದಾರೆ. ಕೇಂದ್ರ ಕ್ರೀಡಾ ಖಾತೆ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಪ್ರತಿಕ್ರಿಯೆ ನೀಡಿ ಕ್ರೀಡಾ ಕ್ಷೇತ್ರದಲ್ಲಿ ಅದನ್ನು ಡೋಪಿಂಗ್ ಎಂದು ಕರೆಯುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಶುಕ್ಲಾ ಸಮರ್ಥನೆ: ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಗಾಂಧಿ ಕುಟುಂಬದ ನಿಷ್ಠಾವಂತ, ರಾಜ್ಯಸಭಾ ಸದಸ್ಯ ರಾಜೀವ್ ಶುಕ್ಲಾ ವಿಶ್ವಾದ್ಯಂತ ಸಾಮಾಜಿಕ ಮಾಧ್ಯಮ ಸಂಪರ್ಕ ಸಾಧಿಸುತ್ತದೆ. ಹೀಗಾಗಿ ಯಾವುದೇ ದೇಶದ ನಾಗರಿಕರು ಅದಕ್ಕೆ ಪ್ರತಿಕ್ರಿಯೆ ನೀಡಬಹುದು ಅಥವಾ ರಿ ಟ್ವೀಟ್ ಮಾಡಬಹುದು ಎಂದಿದ್ದಾರೆ. ರಾಹುಲ್ ಗಾಂಧಿ ಅವರ ಜನಪ್ರಿಯತೆಯಿಂದ ಬಿಜೆಪಿ ಬೆದರಿದೆ ಎಂದಿದ್ದಾರೆ. ಮತ್ತೂಬ್ಬ ನಾಯಕ ಆರ್‌ಪಿಎನ್ ಸಿಂಗ್ ಪ್ರತಿಕ್ರಿಯೆ ನೀಡಿ ಟ್ವಿಟರ್‌ನಲ್ಲಿ ಜನಪ್ರಿಯತೆ ಪಡೆಯಲು “ಬೋಟ್’ಗಳನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ ತಿರಸ್ಕರಿಸಿದ್ದಾರೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿ “ಹತಾಶೆಯ ಸಂದರ್ಭಗಳು ಹತಾಶೆಯ ಕೆಲಸಗಳನ್ನು ಮಾಡಿಸುತ್ತವೆ’ ಎಂದು ಟ್ವೀಟ್ ಮಾಡಿದ್ದಾರೆ.
ಬೋಟ್ ಎಂದರೇನು?
ಇಂಟರ್‌ನೆಟ್‌ನಲ್ಲಿ ಬೋಟ್ ಎಂದರೆ ಸ್ವಯಂ ಚಾಲಿತವಾಗಿ ನಿಗದಿತ ಕೆಲಸವನ್ನು ಮಾಡುವಂತೆ ಸೂಚಿಸುವ ಸಾಫ್ಟ್ವೇರ್. ಅದನ್ನೇ ರಾಹುಲ್ ಗಾಂಧಿಯವರ ಟ್ವಿಟರ್ ಖಾತೆಯಲ್ಲಿ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.