ನವದೆಹಲಿ:ಸೋಮವಾರ ಸಂಸತ್‌ನಲ್ಲಿ ನೀಟ್ ಪರೀಕ್ಷಾ ಅಕ್ರಮ ವಿಚಾರವು ಲೋಕಸಭೆ ಪ್ರತಿ ಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನಡುವೆ ವಾಗ್ಯುದ್ಧ ನಡೆದಿದೆ.
ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನೀಟ್ ಮಾತ್ರವಲ್ಲ, ದೇಶದ ಇಡೀ ಪರೀಕ್ಷಾ ವ್ಯವಸ್ಥೆಯಲ್ಲೇ ಸಮಸ್ಯೆಯಿದೆ. ಸಚಿವರು (ಧರ್ಮೇಂದ್ರ ಪ್ರಧಾನ್) ತಮ್ಮ ಹೊರತಾಗಿ ಬೇರೆ ಎಲ್ಲರ ಮೇಲೂ ಆರೋಪ ಹೊರಿಸುತ್ತಿದ್ದಾರೆ. ಇಲ್ಲಿ ಏನು ನಡೆಯುತ್ತಿದೆ ಎಂದು ಅವರಿಗೆ ಗೊತ್ತಿದ್ದಂತಿಲ್ಲ ಎಂದು ಗುಡುಗಿದರು.
ಜತೆಗೆ ಶ್ರೀಮಂತರಾಗಿದ್ದರೆ ಮತ್ತು ಹಣ ಇದ್ದರೆ ಭಾರತದಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ಕೊಂಡುಕೊಳ್ಳಬಹುದು ಎಂದು ಲಕ್ಷಾಂತರ ಜನರು ನಂಬಿದ್ದಾರೆ. ನೀಟ್ ಅಕ್ರಮದ ಬಗ್ಗೆ ಒಂದು ದಿನ ಪ್ರತ್ಯೇಕ ಚರ್ಚೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಇದಕ್ಕೆ ಧ್ವನಿಗೂಡಿಸಿದ ಎಸ್‌ಪಿ ಸಂಸದ ಅಖೀಲೇಶ್ ಯಾದವ್, ಈ ಸರ್ಕಾರದ ಅವಧಿಯಲ್ಲಿ ಹಲವಾರು ಪರೀಕ್ಷಾ ಪೇಪರ್‌ಗಳು ಲೀಕ್ ಆಗಿವೆ ಎಂದರು.
ಆರೋಪಗಳಿಗೆ ತಿರುಗೇಟು ನೀಡಿದ ಸಚಿವ ಧರ್ಮೇಂದ್ರ ಪ್ರಧಾನ್, “ನನ್ನ ಅವಧಿಯಲ್ಲಿ ಯಾವುದೇ ಪೇಪರ್ ಲೀಕ್ ಆಗಿಲ್ಲ. ಕಳೆದ 7 ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದಕ್ಕೆ ಸಾಕ್ಷ್ಯವೂ ಇಲ್ಲ. ನೀಟ್ ವಿಚಾರ ಸುಪ್ರೀಂಕೋರ್ಟ್ ಮುಂದಿದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಯಶಸ್ವಿಯಾಗಿ 240 ಪರೀಕ್ಷೆಗಳನ್ನು ನಡೆಸಿದೆ.
ಧ್ವನಿ ಎತ್ತರಿಸುವುದರಿಂದ ಸುಳ್ಳು ಸತ್ಯವಾಗುವುದಿಲ್ಲ’ ಎಂದರು. ಪರೀಕ್ಷಾ ವ್ಯವಸ್ಥೆಯಲ್ಲಿ ಅಕ್ರಮಗಳ ತಡೆಗೆ ಹೊಸ ಕಾನೂನು ತರಲಾಗುವುದು. ಈ ಹಿಂದೆ ಯುಪಿಎ ಅವಧಿಯಲ್ಲಿ ಇಂತಹದ್ದೇ ಕಾನೂನು ತರಲು ಹೊರಟಾಗ ಆಡಳಿತಾರೂಢ ಕಾಂಗ್ರೆಸ್ ಒತ್ತಡದಿಂದ ತೆಗೆದು ಹಾಕಿತ್ತು ಎಂದು ಗುಡುಗಿದರು.