ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಈಚೆಗೆ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯಲ್ಲಿ ಮೋದಿ ಸರಕಾರದ ವಿರುದ್ಧ ಗುಡುಗು – ಸಿಡಿಲಿನ ಭಾಷಣ ಮಾಡಿ ಅನಂತರ ನೇರವಾಗಿ ಪ್ರಧಾನಿ ಮೋದಿ ಅವರೆಡೆಗೆ ಧಾವಿಸಿ ಅವರನ್ನು ಅಪ್ಪಿಕೊಂಡು ಸ್ವಸ್ಥಾನಕ್ಕೆ ಮರಳಿದ ಬಳಿಕ ಕಣ್ಣು ಮಿಟುಕಿಸಿದ ಪ್ರಕರಣ ದೇಶದ ಜನರ ಮನದಲ್ಲಿ ಇನ್ನೂ ಹಸಿರಾಗಿರುವಾಗಲೇ ಇದೀಗ ಮತ್ತೆ ರಾಹುಲ್, ರಾಜಸ್ಥಾನದಲ್ಲಿನ ತಮ್ಮ ಪಕ್ಷದ rally ಯಲ್ಲಿ ಕಣ್ಣು ಹೊಡೆದಿರುವ ಪ್ರಸಂಗ ಕ್ಯಾಮೆರಾ ಕಣ್ಣಲ್ಲಿ ದಾಖಲಾಗಿದೆ.
ರಾಜಸ್ಥಾನದಲ್ಲಿ ನಿನ್ನೆ ಭಾನುವಾರ ನಡೆದಿದ್ದ ಪಕ್ಷದ rally ಯಲ್ಲಿ ರಾಹುಲ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಸಚಿನ್ ಪೈಲಟ್ ಅವರಿಗೆ ಕಣ್ಣು ಹೊಡೆದಿದ್ದಾರೆ.
‘ಇದೆಲ್ಲ ನಾಟಕ’ ಎನ್ನುವ ಸಂದೇಶವನ್ನು ಸೂಚ್ಯವಾಗಿ ರವಾನಿಸಲು ಜನರು ಕಣ್ಣು ಹೊಡೆಯುವುದು ಸಾಮಾನ್ಯ. ಕಣ್ಣು ಹೊಡೆಯುವುದರ ಒಳಾರ್ಥ ಬಹುತೇಕ ಇದೇ ಆಗಿರುತ್ತದೆ. ಬಹುಷಃ ರಾಹುಲ್ ಸದನದಲ್ಲೂ ಹೊರಗೂ ಇದೇ ಅರ್ಥದಲ್ಲಿ ಕಣ್ಣು ಹೊಡೆದಿರಬಹುದೇ ಎಂಬ ಗುಮಾನಿ ಈಗ ಎಲ್ಲರಲ್ಲಿ ಕಾಣಿಸಿಕೊಂಡಿದೆ.
ರಾಜಸ್ಥಾನ ರಾಲಿಯಲ್ಲಿನ ವಿಶೇಷವೆಂದರೆ ರಾಹುಲ್ ಕಣ್ಣು ಹೊಡೆದ ಕೂಡಲೇ ಸಚಿನ್ ಪೈಲಟ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಮುಖ್ಯಮಂತ್ರಿಯಾಗಿರುವ ಅಶೋಕ್ ಗೆಹಲೋತ್ ಅವರನ್ನು ವೇದಿಕೆಯಲ್ಲೇ ಅಪ್ಪಿಕೊಂಡರು !
ನಮ್ಮೊಳಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ; ನಾವೆಲ್ಲರೂ ಜತೆಯಾಗಿದ್ದೇವೆ ಎಂಬುದನ್ನು ಜನರಿಗೆ ಮನದಟ್ಟು ಮಾಡುವ ಯತ್ನದಂತೆ ರಾಹುಲ್ ಕೂಡಲೇ ಸಚಿನ್ ಪೈಲಟ್ ಮತ್ತು ಗೆಹಲೋತ್ ಅವರನ್ನು ಅಪ್ಪಿಕೊಂಡರೆನ್ನುವುದು ಇನ್ನೊಂದು ವಿಶೇಷ. ಆದರೆ ಇದಕ್ಕೆ ಮೊದಲೇ ಕಣ್ಣು ಹೊಡೆಯುವ ಮೂಲಕ ರಾಹುಲ್ ಯಾವ ಸಂದೇಶ ರವಾನಿಸಿದರು ಎನ್ನುವುದು ಹಲವರಿಗೆ ಒಗಟಾಯಿತು !