ಹೊಸದಿಲ್ಲಿ: ನ್ಯಾಶನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಿಚಾರಣೆಯನ್ನು ಇ.ಡಿ. ಮೂರನೇ ದಿನವಾದ ಬುಧವಾರವೂ ಮುಂದುವರಿಸಿದೆ.
ಈ ಪ್ರಕರಣದಲ್ಲಿ ವೈಯಕ್ತಿಕವಾಗಿ ರಾಹುಲ್ ಗಾಂಧಿ ಭಾಗಿದಾರಿಕೆ ಏನು ಎಂಬ ಬಗ್ಗೆ ಕೇಂದ್ರ ತನಿಖಾ ಸಂಸ್ಥೆ ಮಾಹಿತಿ ಪಡೆದುಕೊಂಡಿದೆ. ಜತೆಗೆ ಅದರ ಮಾಲಕ ಸಂಸ್ಥೆಯಾಗಿದ್ದ ಯಂಗ್ ಇಂಡಿಯನ್‌ದ ಬಗ್ಗೆಯೂ ವಿವರಗಳನ್ನು ಕೇಳಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೋ ಚಿತ್ರೀಕರಿಸಿಕೊಳ್ಳಲಾಗಿದೆ.
ಸಹೋದರಿ ಪ್ರಿಯಾಂಕಾ ಜತೆಗೆ ಪೂರ್ವಾಹ್ನ 11.35ಕ್ಕೆ ಆಗಮಿಸಿದ್ದ ರಾಹುಲ್, ಒಂದೇ ಒಂದು ರೂಪಾಯಿಯನ್ನೂ ಯಂಗ್ ಇಂಡಿಯನ್‌ನಿಂದ ತೆಗೆದುಕೊಂಡಿಲ್ಲ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ವಿಚಾರಣೆ ವೇಳೆ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್‌ಗೆ ಸಂಬಂಧಿಸಿದ 800 ಕೋಟಿ ರೂ. ಮೌಲ್ಯದ ಆಸ್ತಿ ಬಗ್ಗೆ ವಿವರ ನೀಡುವಂತೆ ಹಾಗೂ ಲಾಭ ರಹಿತ ಕಂಪೆನಿಯಾಗಿದ್ದ ಯಂಗ್ ಇಂಡಿಯನ್ ತನ್ನ ವ್ಯಾಪ್ತಿಯಲ್ಲಿದ್ದ ಜಮೀನು, ಕಟ್ಟಡಗಳನ್ನು ಬಾಡಿಗೆಗೆ ನೀಡಿದ್ದ ಬಗ್ಗೆಯೂ ಪ್ರಶ್ನಿಸಲಾಗಿದೆ ಎನ್ನಲಾಗಿದೆ.
ಈ ಮಧ್ಯೆ, ಬುಧವಾರವೂ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಮುಂದುವರಿದಿದೆ. ದಿಲ್ಲಿಯಲ್ಲಿ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮನ್ನು ಎಐಸಿಸಿ ಪ್ರಧಾನ ಕಚೇರಿಗೆ ಹೋಗಲೂ ಬಿಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿಲ್ಲಿ ಪೊಲೀಸರು ಕಾಂಗ್ರೆಸ್‌ನ ಪ್ರಧಾನ ಕಚೇರಿಗೆ ನುಗ್ಗಿದ್ದಾರೆ ಎಂದಿರುವ ವೀಡಿಯೋವನ್ನು ಸಂಸದ ಕಾರ್ತಿ ಚಿದಂಬರಂ ಅವರು ಟ್ವೀಟ್ ಮಾಡಿದ್ದಾರೆ.