ಬೆಂಗಳೂರು: ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಎಂದು ಚಿನ್ನಾಭರಣ ಮಳಿಗೆ ಮಾಲಿಕನಿಗೆ 8.41 ಕೋಟಿ ರೂ.ಸಾಲ ಪಡೆದು ವಂಚಿಸಿದ ಪ್ರಕರಣ ಸಂಬಂಧ ಆರೋಪಿ ಭವ್ಯಗೌಡ(ಹೆಸರು ಬದಲಾಯಿಸಲಾಗಿದೆ) ಮತ್ತು ಆಕೆಯ ಪತಿ ಹರೀಶ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.
ಮತ್ತೂಂದೆಡೆ ಪ್ರಕರಣದಲ್ಲಿ ಸುರೇಶ್ ಅವರ ಧ್ವನಿಯಲ್ಲಿ ಮಾತನಾಡಿದ ನಟ ಧರ್ಮೇಂದ್ರ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ವಾರಾಹಿ ವಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿ ಮಾಲಿಕರಾದ ವನಿತಾ ಎಸ್.ಐತಾಳ್ ಎಂಬುವರು ನೀಡಿದ ದೂರಿನ ಮೇರೆಗೆ ಭವ್ಯಗೌಡ, ಈಕೆಯ ಪತಿ ಹರೀಶ್, ಚಿತ್ರನಟ ಧರ್ಮೇದ್ರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಬೆದರಿಕೆ ಆರೋಪದಡಿ ಚಂದ್ರಾಲೇಔಟ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆರ್.ಆರ್.ನಗರ ನಿವಾಸಿಗಳಾದ ಭವ್ಯಗೌಡ ಮತ್ತು ಆಕೆಯ ಪತಿ ಹರೀಶ್ ಪರಿಚಿತರು. ಆಗ ಭವ್ಯಗೌಡ ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ನನಗೆ ನಂಬಿಸಿದ್ದರು. ನನಗೆ ಅನೇಕ ರಾಜಕೀಯ ವ್ಯಕ್ತಿಗಳ ಸಂಪರ್ಕವಿದೆ. ನಾನು ದೊಡ್ಡ ಉದ್ಯಮಿ ಎಂದು ನನ್ನ ಚಿನ್ನದಂಗಡಿಯಲ್ಲಿ ಹಲವು ಬಾರಿ ಚಿನ್ನಾಭರಣ ಸಾಲ ಪಡೆದು ಕೆಲ ದಿನಗಳ ಬಳಿಕ ಹಣವನ್ನು ನೀಡಿದ್ದಾರೆ.
ಇದನ್ನು ನಂಬಿ ನಾನು ಅವರು ಕೇಳಿದಾಗಲೆಲ್ಲಾ ಚಿನ್ನಾಭರಣ ಸಾಲ ಪಡೆದಿದ್ದರು. ಭವ್ಯಗೌಡ ಮತ್ತು ಆಕೆಯ ಪತಿ ಹರೀಶ್ 2023ರ ಅ.12ರಿಂದ 2024ರ ಜ.1ರವರೆಗೆ ಹಂತ ಹಂತವಾಗಿ ಭವ್ಯಗೌಡ 8.41 ಕೋಟಿ ರೂ. ಮೌಲ್ಯದ 14.6 ಕೆ.ಜಿ. ಚಿನ್ನಾಭರಣ ಸಾಲ ಪಡೆದಿದ್ದಾರೆ.
ಹಣ ವಾಪಸ್ ಕೊಡಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಈವರೆಗೂ ಹಣ ಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ.