ಹೊಸದಿಲ್ಲಿ : “ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಹಿಳೆಯರ ವಿರುದ್ಧ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ’ ಎಂದು ಗುಡುಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, “ಆರ್‌ಎಸ್‌ಎಸ್ ಶಾಖೆಯಲ್ಲಿ ನೀವು ಎಂದಾದರೂ ಮಹಿಳೆಯರನ್ನು ಶಾರ್ಟ್ಸ್ ನಲ್ಲಿ ಕಂಡಿದ್ದೀರಾ ? ನಾನಂತೂ ಕಂಡಿಲ್ಲ’ ಎಂದು ತಮ್ಮ ಮಾತಿನ ವಿರೋಧಾತ್ಮಕ ಅರ್ಥವನ್ನು ಕೂಡ ಲೆಕ್ಕಿಸದೆ, ಟೀಕಿಸಿದ್ದಾರೆ.
“ಬಿಜೆಪಿಯ ಮುಖ್ಯ ಸಂಘಟನೆ ಆರ್‌ಎಸ್‌ಎಸ್ ಆಗಿದೆ. ಆದರೆ ಅದರಲ್ಲಿ ಮಹಿಳೆಯರೇ ಇಲ್ಲ; ಹಾಗಿರುವಾಗ ನೀವು ಆರ್‌ಎಸ್‌ಎಸ್ ಶಾಖೆಗಳಲ್ಲಿ ಮಹಿಳೆಯರನ್ನು ಶಾರ್ಟ್ಸ್ ನಲ್ಲಿ ಕಾಣಲು ಸಾಧ್ಯವುಂಟಾ ? ಇಲ್ಲವೇ ಇಲ್ಲ.’ ಎಂದು ರಾಹುಲ್ ಗುಜರಾತ್‌ನ ಅಕೋಟಾ ದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ ವ್ಯಂಗ್ಯವಾಡಿದರು.
“ಬಿಜೆಪಿ ಆರ್‌ಎಸ್‌ಎಸ್‌ನ ಆಲೋಚನೆಯೆ ಹಾಗಿದೆ; ಎಲ್ಲಿಯ ವರೆಗೆ ಮಹಿಳೆಯರು ಸುಮ್ಮನಿರುತ್ತಾರೋ ಅಲ್ಲಿಯ ವರೆಗೆ ಅವರಿಗೆ ಅಪಾಯ ಇರುವುದಿಲ್ಲ; ಆದರೆ ಮಹಿಳೆಯರು ಬಾಯಿ ತೆರೆದರೆಂದರೆ ಕೂಡಲೇ ಅವರ ಬಾಯಿಯನ್ನು ಮುಚ್ಚಿಸಲಾಗುತ್ತದೆ’ ಎಂದು ರಾಹುಲ್ ಜರೆದರು.
ಆರ್‌ಎಸ್‌ಎಸ್ ಮಹಿಳಾ ಸ್ವಯಂ ಸೇವಕರನ್ನು ಶಾರ್ಟ್ಸ್ ನಲ್ಲಿ ಕಾಣಲಾಗದು ಎಂದು ಹೇಳಿರುವ ರಾಹುಲ್ ಅವರ ಟೀಕೆಯನ್ನು ಬಲವಾಗಿ ಖಂಡಿಸಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ, “ರಾಹುಲ್ ಗಾಂಧಿಯವರ ಉದ್ದೇಶ ಮಹಿಳೆಯರನ್ನು ಶಾರ್ಟ್ಸ್ ನಲ್ಲಿ ಕಾಣುವುದಷ್ಟೇ ಆಗಿದೆಯೇ? ‘ಎಂದು ಪ್ರಶ್ನಿಸಿದ್ದಾರೆ.
“ಒಂದು ವೇಳೆ ರಾಹುಲ್ ಅವರ ಉದ್ದೇಶ ಮಹಿಳೆಯರನ್ನು ಶಾರ್ಟ್ಸ್ ನಲ್ಲಿ ಕಾಣುವುದೇ ಆಗಿದ್ದರೆ ಮಹಿಳೆಯರ ಸಶಕ್ತೀಕರಣಕ್ಕೆ ರಾಹುಲ್ ಏನನ್ನಾದರೂ ಮಾಡುವ ಭರವಸೆಯೇ ಇಲ್ಲವೆಂದು ನಾನು ತಿಳಿಯುತ್ತೇನೆ’ ಎಂದು ನೂಪುರ್ ಶರ್ಮಾ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ನಾಯಕ ಹಾಗೂ ಉ.ಪ್ರ.ದ ಆರೋಗ್ಯ ಸಚಿವ ಸಿದ್ಧಾರ್ಥ ನಾಥ್ ಸಿಂಗ್ ಅವರು “ರಾಹುಲ್ ಒಬ್ಬ ಬಾಲಕ; ಆತ ಡೈಪರ್‌ನಿಂದ ಹೊರಬರಲು ಅಂಜುತ್ತಾನೆ’ ಎಂದು ಟೀಕಿಸಿದ್ದಾರೆ.