“ಪ್ರೇಮ” ವೆನ್ನುವುದು ಒಂದು ನವಿರಾದ ಭಾವನೆ. ಮನಸ್ಸಿಗೆ ಮುದ ನೀಡುವ ಕನಸುಗಳಿಗೆ ರಂಗುಬಳಿಯುವ ಈ ಭಾವ ನಿಷ್ಕಲ್ಮಶ ನಿಸ್ವಾರ್ಥದಿಂದ ಕೂಡಿದಾಗಲೇ ಪ್ರೀತಿಗೊಂದು ಬೆಲೆ ಮತ್ತು ಪ್ರೇಮಕ್ಕೊಂದು ಅರ್ಥ! ಅಲ್ಲೊಂದು ಆರಾಧನೆ, ಮಮತೆ, ಕಾಳಜಿ, ನಂಬಿಕೆಯಿದ್ದಾಗ ಪ್ರೀತಿ ಚಿಗುರೊಡೆದು ಪ್ರೇಮ ಸಾಫಲ್ಯ ಕಂಡುಕೊಳ್ಳಲು ಸಾಧ್ಯ. ಪ್ರೀತಿ -ಪ್ರೇಮಕ್ಕೆ ಒಳ್ಳೆಯ ನಿದರ್ಶನವೆಂದರೆ ಅದುವೇ ರಾಧಾ-ಕೃಷ್ಣ.
ಪ್ರೇಮಿಗಳ ದಿನಾಚರಣೆಯ ಈ ಸಂದರ್ಭದಲ್ಲಿ ಮನಸಿನ ಪರದೆಯ ಮೇಲೆ ಮೂಡಿದ್ದು ರಾಧಾಕೃಷ್ಣರ ನಿಷ್ಕಲ್ಮಶ ಪ್ರೇಮ. ಪ್ರೇಮದ ವ್ಯಾಖ್ಯಾನಕ್ಕೆ ರಾಧಾ ಕೃಷ್ಣರ ಪ್ರೀತಿ ಕನ್ನಡಿ ಹಿಡಿದಂತೆ. ರಾಧಾ ಕೇ ಬೀನಾ ಶ್ಯಾಮ್ ಆದಾ, ಶ್ಯಾಮ್ ಕೇ ಬಿನಾ ರಾಧಾ ಆದಾ ಇಸಲಿಯೇ ಕೆಹತೆ ಹೈ “ರಾಧೆಶ್ಯಾಮ್”!. ಎಷ್ಟೊಂದು ಸುಂದರ. ಎಂಥಾ ವರ್ಣಾನಾತೀತ, ಅವನೆಂದರೆ ಅದೇನೊ ಸೆಳೆತ, ಮುರುಳಿಯ ಗಾನಕ್ಕೆ ಮನಸೋತು ಭಕ್ತಿಯ ಭಾವದಲ್ಲಿ ಸೆರೆಯಾಗುವಳು ಅವಳು. ಕೊಳಲಿನ ನೀನಾದಕ್ಕೆ ಗೆಜ್ಜೆ ಕಟ್ಟಿ ನರ್ತಿಸುತ್ತಿದ್ದರೆ ಮೋಹನ ನಾಗುವನು ರಾಧೆಯಲ್ಲಿ ಪರವಶ. ಶ್ಯಾಮನ ಪ್ರೀತಿಯ ಕೊಳಲಿನಲ್ಲಿ ರಾಧೆಯ ಪ್ರೇಮದ ಉಸಿರು ಇಡೀ ಬೃಂದಾವನವನ್ನು ಆವರಿಸುವಂತೆ ಮಾಡುತ್ತಿತ್ತು. ಪ್ರೀತಿಯ ಸೆಲೆ ಭಕ್ತಿಯ ಅಲೆ ಅಲೆಯಾಗಿ ಹೊರಹೊಮ್ಮುತ್ತಿತ್ತು.
ಹರೆಯದ ಕನಸಿಗೆ ಪರಿಶುದ್ಧತೆಯ ಕುಂಚ ಹಿಡಿದು ನಿಸ್ವಾರ್ಥ ಪ್ರೀತಿಯ ಬಣ್ಣ ಬಳಿದರು. ಆಕರ್ಷಣೆಯ ಲೇಪನವಿಲ್ಲದ, ಷರತ್ತುಗಳ ಕಟ್ಟಳೆಯಿಲ್ಲದ, ಸಂಬಂಧಗಳ ನಂಟಿನಲ್ಲಿ ಮಧುರ ಬಾಂಧವ್ಯಕ್ಕೆ ಮುನ್ನುಡಿ ಬರೆದರು. ಇಂದಿನ ಮನುಕುಲಕ್ಕೆ ಮಾದರಿ ಅವರ ನಿಷ್ಕಾಮ ಪ್ರೇಮ. ಯಮುನಾ ತಟದಲಿ ಬಾಲ್ಯದ ಗೆಳತಿಯ ಸಾಂಗತ್ಯದಲ್ಲಿ ಯಶೋದೆಯ ಕನ್ಹಯ್ಯ ಕಳೆದುಹೋಗುವನು. ವೃಂದಾವನದಲಿ ಗೋಪಿಕೆಯರೊಡನೆ ರಾಸಲೀಲೆ ಆಡುತ್ತ, ತಂಟೆ-ತಕರಾರು ಮಾಡುತ್ತ, ಕಾಡುತ್ತ-ರಮಿಸುತ್ತ ಕಾಲೆಳೆಯುವ ಗೋಪಾಲನಿಗೆ ಗೋಪಿಯರಲ್ಲಿ ಅಚ್ಚು ಮೆಚ್ಚು ರಾಧೆ.
ರಾಧೆಯೆಂದರೆ ಎಲ್ಲಿಲ್ಲದ ಪ್ರೀತಿ! ಅವಳೊಂದು ಉತ್ಸಾಹ, ಭಕ್ತಿಯ ಚಿಲುಮೆ. ರಾಧೆಯ ಒಲುಮೆಯಲ್ಲಿ ಗೆಲುಮೆಯನ್ನು ಕಾಣುವ ಶ್ಯಾಮನಿಗೆ ಅವಳೊಬ್ಬಳು ಆತ್ಮಸಂಗಿನಿ ಮತ್ತು ಅಗಣಿತ ತಾರೆ. ಎಲ್ಲ ಕಟ್ಟುಪಾಡುಗಳನ್ನು ಮೀರಿ, ಮಡಿವಂತಿಕೆಯನ್ನು ಬದಿಗೊತ್ತಿ ಲೌಕಿಕ ನೆಲೆಯಲ್ಲಿ ಅಲೌಕಿಕ ಪಾರಮಾರ್ಥಿಕವನ್ನು ಮೆರೆದು ಪವಿತ್ರ ಪ್ರೇಮಕ್ಕೆ ಸಾಕ್ಷಿಯಾದಳು. ರಾಧೆಯ ನಿರ್ವಾಜ್ಯ ಪ್ರೇಮಕ್ಕೆ ಮಾಧವ ಸೋತ. ಅವಳ ಪ್ರೀತಿಯ ಮಳೆಯಲ್ಲಿ ನೆನೆದ. ತಿಂಗಳ ರಾತ್ರಿ ತೊರೆಯ ಸಮೀಪ ಉರಿಯುವ ದೀಪದ ನಡುವೆ ಕೃಷ್ಣ ನ ಹುಡುಕಾಟ ರಾಧೆಗಾಗಿ. ಅವಳು ಬಂದೆ ಬರುತ್ತಾಳೆನ್ನುವ ಅಧಮ್ಯ ವಿಶ್ವಾಸ ಗೋಪಿಕಾವಲ್ಲಭನಿಗೆ. ಲೋಕದ ಕಣ್ಣಿಗೆ ರಾಧೆ ಕೇವಲ ಹೆಣ್ಣಾಗಿರಬಹುದು. ಆದರೆ ಶ್ಯಾಮನ ಪಾಲಿಗೆ ಪ್ರೀತಿಯ ಕಣ್ಣು. ರಾಧೆಯ ಸಾಂಗತ್ಯ ಪ್ರೇಮಾರಾಧನೆಯ ಭಕ್ತಿ, ರಾಧೆಗಾಗಿ ಪಡುವ ಪರಿತಾಪ ಪರಮಾತ್ಮನಾದರೂ ಪ್ರೀತಿಯ ಆಳವನ್ನು ಪರಿಚಯಿಸುತ್ತದೆ. ವಯಸ್ಸಿನಲ್ಲಿ ಕೃಷ್ಣ ನಗಿಂತ ದೊಡ್ಡವಳಾದರೂ ನಿಸ್ವಾರ್ಥ ಪ್ರೇಮವನ್ನು ತುಂಬು ಮನದಿಂದ ಧಾರೆಯೆರೆದ ತ್ಯಾಗದ ಮೂರ್ತಿ ಅವಳು. ದೈಹಿಕ ಸಂಬಂಧವನ್ನು ಮೀರಿದ, ಎಲ್ಲಾ ಸಂಬಂಧಗಳಿಗಿಂತಲೂ ಮಿಗಿಲಾದ ಪರಮಾತ್ಮ ಜೀವಾತ್ಮಗಳ ಮಿಲನವದು. ಕೃಷ್ಣನ ಹೃದಯದಲ್ಲಿ ಲೀನವಾಗುವ, ಭಕ್ತಿ-ಭಾವದ ಸಂಕೇತವಾಗಿರುವ ರಾಧೆ ಅಜರಾಮರಳಾಗಿ ಉಳಿಯುತ್ತಾಳೆ.
ರಾಧೆಯಿಲ್ಲದ ಮಾಧವ ಕಲ್ಪನೆಗೂ ನಿಲುಕಲಾರ! ರಾಧೆಯ ಪ್ರೇಮದ ಶಕ್ತಿ ರಾಧಾಕೃಷ್ಣರನ್ನು ಅಗ್ರಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ. ರಾಧೆಯ ಪ್ರೀತಿಗೆ ಅದರ ರೀತಿಗೆ ಬೆಲೆ ಕಟ್ಟಲು ಅಸಾಧ್ಯ. ಜಗತ್ತು ಇರುವ ತನಕ ರಾಧಾಕೃಷ್ಣ ರ ಹೆಸರು ಸದಾ ಜೀವಂತ ಮತ್ತು ಪ್ರೇಮಕ್ಕೆ ಮತ್ತೊಂದು ಭಾಷ್ಯವೇ ರಾಧಾಕೃಷ್ಣ!
ಸುಮಾ ಸತೀಶ್.
(ಸುಮಂಗಲಾ ಸತೀಶ ಭಟ್ಟ, ಶಿರಸಿ)