ಕೆಲ ವರ್ಷಗಳ ಹಿಂದೆ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ “ರಾವಣ್’ ಎಂಬ ಸಿನಿಮಾ ತೆರೆಗೆ ಬಂದು ಸೂಪರ್ ಹಿಟ್ ಆಗಿದ್ದು, ಅನೇಕರಿಗೆ ಗೊತ್ತಿರಬಹುದು. ಈಗ ಅದೇ “ರಾವಣ್’ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾವೊಂದು ತೆರೆಗೆ ಬರಲು ತಯಾರಾಗುತ್ತಿದೆ.
ಹೌದು, ಈ ಹಿಂದೆ ಪ್ರಿಯಾಂಕಾ ಉಪೇಂದ್ರ ಅಭಿನಯದ “ಮಿಸ್ ನಂದಿನಿ’ ಸಿನಿಮಾವನ್ನು ನಿರ್ದೇಶಿಸಿದ್ದ ಗುರುದತ್ ಎಸ್. ಆರ್ ಕನ್ನಡದಲ್ಲಿ ತೆರೆಗೆ ಬರುತ್ತಿರುವ ಈ “ರಾವಣ್’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಸರಳವಾಗಿ ಮುಹೂರ್ತವನ್ನು ಆಚರಿಸಿಕೊಂಡು “ರಾವಣ್’ ಸಿನಿಮಾ ಸೆಟ್ಟೇರಿದೆ.
ಒಂದು ಕೇಸನ್ನು ಹತ್ತು ರೀತಿಯಲ್ಲಿ ಯೋಚಿಸಿ ಹೇಗೆ ಆರೋಪಿಯನ್ನು ಕಂಡು ಹಿಡಿಯುತ್ತಾರೆ ಎಂಬ ವಿಷಯದ ಸುತ್ತ “ರಾವಣ್’ ಸಿನಿಮಾದ ಕಥೆ ಸಾಗುತ್ತದೆ. ಕ್ಲೈಮಾಕ್ಸನಲ್ಲಿ “ರಾವಣ್’ ಯಾರು ಎಂಬುದು ತಿಳಿಯಲಿದೆ. ನೀವು ಮಾಡಿದ ಪಾಪಗಳು ಯಾವತ್ತಿದ್ದರೂ ನಿಮಗೆ ಮುಳುವಾಗುತ್ತದೆ ಅದನ್ನೇ ಈ ಸಿನಿಮಾದಲ್ಲೂ ಹೇಳುತ್ತಿದ್ದೇವೆ’ ಎಂಬುದು ಚಿತ್ರದ ಕಥಾಹಂದರದ ಬಗ್ಗೆ ಚಿತ್ರತಂಡದ ವಿವರಣೆ.
ಈಗಾಗಲೇ “ಕಬ್ಜ’ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಖಳನಟನಾಗಿ ಅಭಿನಯಿಸಿದ್ದ ರತನ್ ಚೆಂಗಪ್ಪ “ರಾವಣ್’ ಸಿನಿಮಾದ ಮೂಲಕ ನಾಯಕನಾಗಿ ಬಡ್ತಿ ಪಡೆದುಕೊಂಡಿದ್ದಾರೆ. “ರಾವಣ್’ ಸಿನಿಮಾದಲ್ಲಿ ನಾಯಕ ರತನ್ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ “ಹರಿಕಥೆ ಅಲ್ಲ ಗಿರಿಕಥೆ’, “ಗಜರಾಮ’ ಸಿನಿಮಾಗಳಲ್ಲಿ ಅಭಿನಯಿಸಿರುವ ತಪಸ್ವಿನಿ ಪೂಣಚ್ಚ ನಾಯಕಿಯಾಗಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಉಳಿದಂತೆ ಸಮೀಕ್ಷಾ, ಸಿದ್ಲಿಂಗು ಶ್ರೀಧರ್, ಪ್ರಮೋದ್ ಶೆಟ್ಟಿ, ರಂಗಾಯಣ ರಘು, ತ್ರಿವೇಣಿ ರಾವ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಾರ್ತಿಕ್ ಮತ್ತು ಜಗ್ಗಪ್ಪ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಸಿನಿಮಾದಲ್ಲಿ ಎರಡು ಹಾಡುಗಳಿದ್ದು, ಚಿತ್ರಕ್ಕೆ ಮನು ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ. ಸಂಭಾಷಣೆ ಕೀರ್ತಿ ಅವರದಾಗಿದೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ “ರಾವಣ್’ ಸಿನಿಮಾಕ್ಕೆ ಕಡೂರು ಮೂಲದ ನೀಲಕಂಠಸ್ವಾಮಿ ಮತ್ತು ಜಗದೀಶ್ ಬಂಡವಾಳ ಹೂಡಿದ್ದಾರೆ. ಕೇರಳ, ಸಾಗರ, ಮಡಕೇರಿ, ಮಂಗಳೂರು ಸುತ್ತಮುತ್ತ “ರಾವಣ್’ ಸಿನಿಮಾದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.