ಬೆಂಗಳೂರು : ಬೆಂಗಳೂರು : “ಬಾನದಾರಿಯಲ್ಲಿ ಜಾರಿ ಹೋದ ಯುವರತ್ನ, ಸಹೃದಯಿ, ಸಮಾಜಸೇವಕ, ಯುವಕರ ಕಣ್ಮಣಿ, ಕನ್ನಡದ ಹೆಸರಾಂತ ನಟ, ನಮ್ಮ ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಭೌತಿಕವಾಗಿ ಮಾತ್ರ ಅಗಲಿದ್ದಾರೆ. ಅವರ ಸಮಾಜ ಸೇವೆಯಿಂದಾಗಿ ನಮ್ಮ ನಡುವೆ ಯಾವಾಗಲೂ ಇರುತ್ತಾರೆ, ಒಳ್ಳೆಯ ಕೆಲಸಕ್ಕೆ ಅವರು ರಾಯಭಾರಿಯಾಗಿದ್ದರು ಎಂದು ಸಚಿವ ಆರ್. ಅಶೋಕ್ ಹೇಳಿದರು.
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಹೆಚ್ ಎನ್ ಕಲಾಕ್ಷೇತ್ರದಲ್ಲಿ ನಡೆದ ‘ಅಪ್ಪು ಅಮರ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಆರ್ ಅಶೋಕ್
ಸಹಾಯ ಹೇಗೆ ಮಾಡಬೇಕು ಎನ್ನುವುದನ್ನು ಪುನೀತ್ ನೋಡಿ ನಾವು ಕಲಿಯಬೇಕು. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅವರು ಗಳಿಸಿದ ಪ್ರೀತಿ, ಅಭಿಮಾನ ಆಶ್ಚರ್ಯ ಉಂಟುಮಾಡುತ್ತದೆ. ಈಗಲೂ ಅಪ್ಪು ಸಮಾಧಿ ನೋಡಲು ಜನ ತಂಡೋಪತಂಡವಾಗಿ ಬರುತ್ತಿದ್ದಾರೆ. “ತಲೆ ಎತ್ತಿ ಬದುಕಬೇಕಾದರೆ, ತಲೆ ತಗ್ಗಿಸಿ ನಡೆಯಬೇಕು” ಎಂಬುದನ್ನು ಬದುಕಿ ತೋರಿಸಿದ್ದಾರೆ.
ಕರ್ನಾಟಕ ರಾಜ್ಯವೇ ಅವರ ಸಾವಿಗೆ ಕಣ್ಣೀರಿಟ್ಟಿದೆ. ಪುನೀತ್ ಕುಟುಂಬ ಅವರ ಅಂತಿಮ ಯಾತ್ರೆಯ ಸಂದರ್ಭದಲ್ಲಿ ತೋರಿದ ತಾಳ್ಮೆ, ಸಹಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಅಷ್ಟು ದೊಡ್ಡ ನಟನಾದರೂ ಅಪ್ಪು ಅವರ ನಯ-ವಿನಯ ಎಲ್ಲರಿಗೂ ಮಾದರಿ. ಎಷ್ಟು ದಿನ ಬದುಕಿದ್ದೇವೆ ಎನ್ನುವುದು ಮುಖ್ಯವಲ್ಲ, ಹೇಗೆ ಬದುಕಿದ್ದೇವೆ ಎನ್ನುವುದು ಮುಖ್ಯ ಅದಕ್ಕೆ ಪುನೀತ್ ಮಾದರಿ ಅಲ್ಲದೆ ಎಲ್ಲ ಭಾಷೆಯ ಕಲಾವಿದರ ಪ್ರೀತಿಯನ್ನು ಗಳಿಸಿಕೊಂಡಿದ್ದರು.
ನಮ್ಮ ಸರ್ಕಾರ ಈಗಾಗಲೇ ‘ಕರ್ನಾಟಕ ರತ್ನ’ ನೀಡಿದೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಒಂದು ರಸ್ತೆಗೆ ಅವರ ಹೆಸರನ್ನು ಇಡುತ್ತೇವೆ ಅಪ್ಪು ಅವರ ಒಳ್ಳೆಯ ಕಾರ್ಯ ನಮ್ಮ ನಡುವೆ ಸದಾ ಇರುತ್ತದೆ” ಎಂದು ಅಶೋಕ್ ಹೇಳಿದರು.
ಇದನ್ನೂ ಓದಿ : ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ಉಸಿರುಗಟ್ಟಿ ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ