ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ವೇಲ್ನಿಂದ ಆಕೆಯ ಕುತ್ತಿಗೆ ಬಿಗಿದು ಹತ್ಯೆಗೈದು ಪತಿ ಪರಾರಿಯಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಂಗೊಂಡನಹಳ್ಳಿ 3ನೇ ಮುಖ್ಯರಸ್ತೆ ನಿವಾಸಿ ಗೌಸಿಯಾ ಖಾನಂ (31) ಕೊಲೆಯಾದ ಮಹಿಳೆ. ಕಳೆದ ಶುಕ್ರವಾರ ಕೊಲೆ ನಡೆದಿದ್ದು, ಶನಿವಾರ ತಡರಾತ್ರಿ ಘಟನೆ ಬೆಳಕಿಗೆ ಬಂದಿದೆ.
ಕೊಲೆ ಬಳಿಕ ಆರೋಪಿ ಪತಿ ಇಮ್ರಾನ್ ಖಾನ್ ತನ್ನ 4 ವರ್ಷದ ಮಗು ಜತೆ ಪರಾರಿಯಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಏನಿದು ಘಟನೆ?: ಪರಾರಿಯಾಗಿರುವ ಆರೋಪಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, 5 ವರ್ಷದ ಹಿಂದೆ ಗೌಸಿಯಾ ಖಾನಂಳನ್ನು ಮದುವೆಯಾಗಿದ್ದ. ದಂಪತಿಗೆ 4 ವರ್ಷದ ಗಂಡು ಮಗುವಿದೆ. ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡಿದ್ದ ಆರೋಪಿ, ಪದೇ ಪದೆ ಮನೆಯಲ್ಲಿ ಜಗಳ ಮಾಡುತ್ತಿದ್ದ. ಕಳೆದ ಶುಕ್ರವಾರ ಇದೇ ವಿಚಾರಕ್ಕೆ ಪತ್ನಿ ಗೌಸಿಯಾ ಖಾನಂ ಜತೆ ಜಗಳ ತೆಗೆದು ಗಲಾಟೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ವೇಲ್ನಿಂದ ಪತ್ನಿಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ನಾಲ್ಕು ವರ್ಷದ ಮಗುವನ್ನು ಕರೆದುಕೊಂಡು ಮನೆಯ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದಾನೆ.
ಸಹೋದರ ಫೋನ್ ಮಾಡಿದಾಗ ಘಟನೆ ಬೆಳಕಿಗೆ: ಶನಿವಾರ ರಾತ್ರಿ ಗೌಸಿಯಾ ಖಾನಂ ಮೊಬೈಲ್ಗೆ ಆಕೆಯ ಸಹೋದರ ಹಲವು ಬಾರಿ ಕರೆ ಮಾಡಿದ್ದಾನೆ. ಆದರೆ, ಈಕೆ ಕರೆ ಸ್ವೀಕರಿಸಿಲ್ಲ. ಈ ಬಗ್ಗೆ ಅನುಮಾನಗೊಂಡು ಶನಿವಾರ ರಾತ್ರಿ ಮನೆಗೆ ಬಳಿ ಬಂದಾಗ ಬಾಗಿಲು ಮುಚ್ಚಿರುವುದು ಕಂಡು ಬಂದಿದೆ. ಬಳಿಕ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಸಹೋದರಿ ಗೌಸಿಯಾ ಖಾನಂ ಮೃತದೇಹ ಪತ್ತೆಯಾಗಿದೆ. ಅವರ ಅವರ ಸಹೋದರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲಿಸಿ, ಮತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಈ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.