ಚಾಮರಾಜನಗರ: ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಹಾಗೂ ಸಾಮಾಜಿಕ ಭದ್ರತೆ ಯೋಜನೆಯಡಿ ನೀಡಲಾಗುತ್ತಿರುವ ವಿವಿಧ ಪಿಂಚಣಿ ಫಲಾನುಭವಿಗಳ ದಾಖಲೆ ಭೌತಿಕ ಪರಿಶೀಲನಾ ಕಾರ್ಯ ಜಿಲ್ಲೆಯಲ್ಲಿ ಫೆ.1 ರಿಂದ ಕ್ಷಿಪ್ರಗತಿಯಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಂಗಳೂರಿನಲ್ಲಿ ಇತ್ತೀಚೆಗೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಪಂಸಿಇಒಗಳ ಸಭೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವು, ಅರ್ಹ ಫಲಾನುಭವಿಗಳಿಗೆ ಪಿಂಚಣಿ ತಲುಪಿಸುವ ಕುರಿತು ಸೂಕ್ತ ಕ್ರಮಕ್ಕಾಗಿ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಒತ್ತುವರಿ ತೆರವು ಮತ್ತು ಪಿಂಚಣಿ ಫಲಾನುಭವಿಗಳ ಭೌತಿಕ ಪರಿಶೀಲನೆ ಕಾರ್ಯವನ್ನು ಜಿಲ್ಲೆಯಲ್ಲಿ ಫೆಬ್ರವರಿ 1 ರಿಂದ ಆರಂಭಿಸುತ್ತಿದೆ ಎಂದರು.
ಸಾಮಾಜಿಕ ಭದ್ರತಾ ಯೋಜನೆಯಡಿ ವಿಧವಾ ವೇತನ, ವೃದ್ದಾಪ್ಯ ವೇತನ, ವಿಕಲಚೇತನರ ಮಾಸಾಶನ ಸೇರಿದಂತೆ ಇತರೆ ಪಿಂಚಣಿಗಳನ್ನು ನೀಡಲಾಗುತ್ತಿದೆ. ರಾಜ್ಯ ಮಟ್ಟದಲ್ಲಿ ಚರ್ಚೆಯಾಗಿರುವಂತೆ ಪ್ರತೀ ಜಿಲ್ಲೆಯಲ್ಲೂ ಮರಣ ಹೊಂದಿದವರ ಹೆಸರಿನಲ್ಲೂ ಇನ್ನೂ ಪಿಂಚಣಿ ಪಾವತಿಯಾಗುತ್ತಿದೆ ಎಂಬ ಮಾಹಿತಿ ಇದೆ. ಹೀಗಾಗಿ ಚಾಮರಾಜನಗರ ಜಿಲ್ಲೆಯ್ಲಲೂ ಫೆಬ್ರವರಿ 1 ರಿಂದ ಪಿಂಚಣಿ ಫಲಾನುಭವಿಗಳ ಭೌತಿಕ ಪರಿಶೀಲನಾ ವಿಶೇಷ ಕಾರ್ಯ ನಡೆಯಲಿದೆ.
ಜಿಲ್ಲೆಯಲ್ಲಿ 2,08,366 ಮಂದಿ ಪಿಂಚಣಿ ಪಡೆಯುವ ಫಲಾನುಭವಿಗಳಿದ್ದಾರೆ. ಈ ಪೈಕಿ ಶೇ. 88.43ರಷ್ಟು ಫಲಾನುಭವಿಗಳ ಆಧಾರ್ ಸೀಡಿಂಗ್ ಪೂರ್ಣಗೊಂಡಿದೆ. ತಹಶೀಲ್ದಾರರು, ಶಿರಸ್ತೇದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಪಿಂಚಣಿ ಫಲಾನುಭವಿಗಳ ವಿವರ ಸಂಗ್ರಹಿಸಲಿದ್ದಾರೆ.ಮರಣ ಹೊಂದಿದವರ ಹೆಸರಿನಲ್ಲಿ ಅಥವಾ ಊರು ತೊರೆದು ಹೋಗಿರುವ ಫಲಾನುಭವಿಗಳ ಹೆಸರಿನಲ್ಲಿ ನಕಲಿ ಬೋಗಸ್ ಆಗಿ ಪಿಂಚಣಿ ಪಡೆಯುತ್ತಿದ್ದಲ್ಲಿ ಕೂಡಲೇ ಪಿಂಚಣಿ ಪಡೆಯುವುದನ್ನು ನಿಲ್ಲಿಸಿ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದರು.
ನಕಲಿ ಹೆಸರಿನಲ್ಲಿ ಪಿಂಚಣಿ ಪಡೆಯಲು ಸಹಕರಿಸಿ ಭಾಗಿಯಾಗಿರುವುದು ಕಂಡು ಬಂದಲ್ಲಿ ಸಂಬಂಧ ಪಟ್ಟ ಅಧಿಕಾರಿ ಸಿಬ್ಬಂದಿ ವಿರುದ್ದ ಶಿಸ್ತು ಜರುಗಿಸಲಾಗುತ್ತದೆ. ಪಿಂಚಣಿ ಫಲಾನುಭವಿಗಳ ಪರಿಶೀಲನಾ ಅಭಿಯಾನ ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ:ಅಪರಾಧ ತಡೆಗೆ ಪೊಲೀಸ್ ಇಲಾಖೆ ಕ್ರಮ
ಜಿಲ್ಲೆಯಲ್ಲಿ ಒಟ್ಟು 11,355 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂಬ ಪ್ರಾಥಮಿಕ ವರದಿ ಇತ್ತು. ತದ ನಂತರ ಪರಿಶೀಲಿಸಿದಾಗ ಇದರಲ್ಲಿ 2,158 ಎಕರೆ ಜಮೀನು ಸಕ್ರಮ ಅರ್ಜಿಯಡಿ ಬಂದಿದೆ. ಉಳಿದ 9196 ಸರ್ಕಾರಿ ಜಮೀನಿನ ಪೈಕಿ 5933 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನುಳಿದ 3263ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದರು.