Advertisement

ಗುಣಮಟ್ಟದ ಹಾಲಿನ ದೇಸಿ ಹಸುಗಳ ಸಂತತಿ ಕ್ಷೀಣ

09:22 AM Oct 18, 2022 | Team Udayavani |

ಉಡುಪಿ: ಗುಣಮಟ್ಟದ ಹಾಲಿಗೆ ಹೆಸರಾದ, ಆದರೆ ಪ್ರಮಾಣದಲ್ಲಿ ಕಡಿಮೆ ಹಾಲು ಕೊಡುವ ದೇಸಿ ಹಸುಗಳು ಕಡಿಮೆಯಾಗುತ್ತಿದ್ದು ಮಿಶ್ರ ತಳಿಗಳ ಹಸುಗಳನ್ನು ಸಾಕುವವರ ಸಂಖ್ಯೆ ಅಧಿಕವಾಗುತ್ತಿದೆ. ಒಟ್ಟಾರೆ ಹಸುಗಳ ಪ್ರಮಾಣ ಕಡಿಮೆಯಾಗುತ್ತಿದ್ದರೂ ಹಾಲಿನ ಉತ್ಪಾದನೆಯಲ್ಲಿ ಏರಿಕೆಯಾಗುತ್ತಿದೆ.

Advertisement

ಸರಕಾರ ನಡೆಸಿರುವ ಜಾನುವಾರು ಗಣತಿಯ ಪ್ರಕಾರ ಜಿಲ್ಲೆಯ 1.16 ಲಕ್ಷ ದೇಸಿ ತಳಿಯ ಹಸು, ಕರುಗಳು ಹಾಗೂ 1.38 ಲಕ್ಷ ಮಿಶ್ರತಳಿಯ ಹಸುಕರುಗಳು ಇವೆ. ಇದರ ಜತೆಗೆ 2,408 ಎಮ್ಮೆಯೂ ಇದೆ. ಬೈಂದೂರು ತಾಲೂಕಿನಲ್ಲಿ ಅತೀ ಹೆಚ್ಚು ದೇಸಿ ತಳಿಯ ಹಸು ಹಾಗೂ ಅತೀ ಕಡಿಮೆ ಮಿಶ್ರ ತಳಿಯ ಹಸುಗಳು ಇರುವುದು ಕಂಡುಬಂದಿದೆ ಮತ್ತು ಅತೀ ಹೆಚ್ಚು ಎಮ್ಮೆ ಕೂಡ ಇದೆ ತಾಲೂಕಿನಲ್ಲಿದೆ.

ಬ್ರಹ್ಮಾವರ ತಾಲೂಕಿನಲ್ಲಿ ಅತೀ ಹೆಚ್ಚು ಮಿಶ್ರ ತಳಿಯ ಹಸುಗಳು ಇವೆ. ಕಾರ್ಕಳ ಮತ್ತು ಕುಂದಾಪುರ ತಾಲೂಕಿನಲ್ಲೂ ಮಿಶ್ರ ತಳಿಯ ಹಸುಗಳು ಹೆಚ್ಚಿವೆ. ಇಡೀ ಜಿಲ್ಲೆಯಲ್ಲಿ ಕುಂದಾಪುರದಲ್ಲೇ ಅತೀ ಹೆಚ್ಚು ಅಂದರೆ 62 ಸಾವಿರಕ್ಕೂ ಅಧಿಕ ಹಸುಗಳಿವೆ. ಹಿಂದೆಲ್ಲ ಪ್ರತೀ ಮನೆಯಲ್ಲೋ ಒಂದೆರಡು ಹಸು ಇರುತಿತ್ತು. ಈಗ ಬಹುತೇಕ ಮನೆಯಲ್ಲಿ ಹಸುಗಳು ಇಲ್ಲ. ಮನೆಯ ಬಳಕೆಗೆ ಹಾಲಿನ ಆವಶ್ಯಕತೆಗೆ ಮಾತ್ರ ಕೆಲವರು ಹಸುವನ್ನು ಸಾಕುತ್ತಿದ್ದಾರೆ.

ಹಾಲು ಉತ್ಪಾದನೆಗೆ ಹೆಚ್ಚಿಸಲು ಮಿಶ್ರತಳಿ

ಜಿಲ್ಲೆಯ ಸ್ಥಳೀಯ ತಳಿಯ ಹಸುಗಳಲ್ಲಿ ಮಲೆನಾಡು ಗಿಡ್ಡ ಅಗ್ರಗಣ್ಯವಾಗಿದೆ. ಮಿಶ್ರತಳಿಗಳ ಪರಿಚಯವಾಗುವ ಮೊದಲು ಬಹುತೇಕ ಮನೆಗಳಲ್ಲಿ ಮಲೆನಾಡು ಗಿಡ್ಡ ಇದ್ದಿತ್ತು. ಕ್ರಮೇಣ ಆ ಜಾಗವನ್ನು ಮಿಶ್ರತಳಿಗಳ ಹಸುಗಳು ಆಕ್ರಮಿಸಿಕೊಂಡಿವೆ. ಮಿಶ್ರತಳಿಗಳಲ್ಲಿ ಜೆರ್ಸಿ ಮತ್ತು ಎಚ್‌. ಎಫ್. ತಳಿಯ ಹಸುಗಳನ್ನು ಹೆಚ್ಚಾಗಿ ಸಾಕುತ್ತಿದ್ದಾರೆ.

Advertisement

ಈ ಹಸುಗಳು ನಿತ್ಯ ಸುಮಾರು 10ರಿಂದ 20 ಲೀ.ಗೂ ಅಧಿಕ ಹಾಲು ನೀಡುತ್ತವೆ. ಅಲ್ಲದೆ ಆರೈಕೆಯನ್ನು ಅಷ್ಟೇ ಜಾಗರೂಕವಾಗಿ ಮಾಡಬೇಕು. ಆದರೆ ಮಲೆನಾಡು ಗಿಡ್ಡದಂತಹ ದೇಸಿ ತಳಿಯ ಹಸುಗಳಿಗೆ ವಿಶೇಷ ಆರೈಕೆ ಬೇಕಾಗುವುದಿಲ್ಲ. ದೇಸಿ ಹಸುಗಳು ನೀಡುವ ಹಾಲಿನ ಪ್ರಮಾಣ ಕಡಿಮೆಯಾದರೂ ಗುಣಮಟ್ಟ ಚೆನ್ನಾಗಿರುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

2.25 ಲಕ್ಷ ಲೀ

ಗೋಮಾಳ ಇಲ್ಲ, ಮನೆಯಲ್ಲೂ ಹಸುವಿನ ಆರೈಕೆಗೆ ಜನ ಇಲ್ಲದೆ ಇರುವುದರಿಂದ ದೇಸಿ ಹಸುಗಳ ಸಾಕುವಿಕೆ ಕಡಿಮೆಯಾಗುತ್ತಿದೆ. ಮುಂದೆ ಇನ್ನೂ ಕಡಿಮೆಯಾಗಬಹುದು. ಆದರೆ ಹಾಲಿನ ಉತ್ಪಾದನೆಯಲ್ಲಿ ಕಡಿಮೆಯಾಗಿಲ್ಲ. ಜಿಲ್ಲೆಯಲ್ಲಿ ನಿತ್ಯವೂ 2.25 ಲಕ್ಷ ಲೀಟರ್‌ ಹಾಲನ್ನು ಉತ್ಪಾದಿಸಲಾಗುತ್ತಿದೆ. ಜೆರ್ಸಿ ಮತ್ತು ಎಚ್‌. ಎಫ್. ತಳಿಯ ಹಸುಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡುತ್ತವೆ. ಹೀಗಾಗಿ ಮಿಶ್ರತಳಿ ಸಾಕುವವರ ಪ್ರಮಾಣವೂ ಹೆಚ್ಚಾಗಿದೆ. ಹೈನುಗಾರಿಕೆ ರೈತರ ಆದಾಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕುರಿ, ಹಂದಿ, ಮೇಕೆ…

ಜಿಲ್ಲೆಯಲ್ಲಿ ಸ್ಥಳೀಯ ತಳಿಯ 350 ಹಾಗೂ ಮಿಶ್ರ ತಳಿಯ 80 ಕುರಿಗಳಿವೆ. 2,676 ಮೇಕೆಗಳು ಇವೆ. ವಿಶೇಷವೆಂದರೆ ಜಿಲ್ಲೆಯ ಬೈಂದೂರು, ಕಾಪು ಮತ್ತು ಉಡುಪಿಯಲ್ಲಿ ಹಂದಿ ಸಾಕುವವರ ಸಂಖ್ಯೆಯೂ ಹೆಚ್ಚಿದೆ. ಉಡುಪಿಯಲ್ಲಿ 700, ಬೈಂದೂರಿನಲ್ಲಿ 354, ಕಾಪುವಿನಲ್ಲಿ 340 ಹಂದಿಗಳನ್ನು ಸಾಕುತ್ತಿದ್ದಾರೆ. ಜಿಲ್ಲೆಯಲ್ಲಿ ವಿವಿಧ ತಳಿಯ 11 ಲಕ್ಷಕ್ಕೂ ಅಧಿಕ ಕೋಳಿ ಇವೆ. ಬ್ರಹ್ಮಾವರದಲ್ಲಿ 1.89 ಲಕ್ಷ ಕೋಳಿಯಿದ್ದರೆ, ಕಾಪುವಿನಲ್ಲಿ 2.50 ಲಕ್ಷ, ಕಾರ್ಕಳದಲ್ಲಿ 2 ಲಕ್ಷ ಕೋಳಿ ಇದೆ.

ಬೇಡಿಕೆಯಷ್ಟೇ ಉತ್ಪಾದನೆ: ಜಿಲ್ಲೆಯಲ್ಲಿ ಮಲೆನಾಡು ಗಿಡ್ಡ ತಳಿಯೇ ಹೆಚ್ಚಾಗಿ ಇರುವುದು. ಈಗ ಹಾಲಿನ ಉತ್ಪಾದನೆಗೆ ಹೆಚ್ಚಿಸುವ ಸಲುವಾಗಿ ಮಿಶ್ರ ತಳಿಗಳನ್ನು ಸಾಕುತ್ತಿದ್ದಾರೆ. ಹಾಲಿನ ಉತ್ಪಾದನೆ ಬೇಡಿಕೆಗೆ ಸಮಾನಾಗಿದೆ. –ಡಾ| ಶಂಕರ್‌ ಶೆಟ್ಟಿ, ಉಪ ನಿರ್ದೇಶಕ, ಪಶುವೈದ್ಯಕೀಯ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next