Advertisement

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

01:27 AM Dec 26, 2024 | Team Udayavani |

ಉಡುಪಿ/ಮಂಗಳೂರು: ಕ್ರಿಸ್ಮಸ್‌ ರಜೆ, ಶಾಲಾ ಮಕ್ಕಳ ಪ್ರವಾಸ, ಅಯ್ಯಪ್ಪ ಸ್ವಾಮಿ ವ್ರತಧಾರಿಗಳ ತೀರ್ಥಕ್ಷೇತ್ರ ಸಂದರ್ಶನ, ವಿವಿಧ ಉದ್ಯೋಗಿಗಳ ವಾರ್ಷಿಕ ಪ್ರವಾಸದ ಹಿನ್ನೆಲೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ದೇವಸ್ಥಾನ, ಬೀಚ್‌ ಸಹಿತ ಪ್ರವಾಸ ಹಾಗೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಜನ ಸಂದಣಿ ಹೆಚ್ಚಿದೆ.

Advertisement

ಭಾರೀ ವಾಹನಗಳಿಂದಾಗಿ ಕಲ್ಲಡ್ಕ, ಪಂಪ್‌ವೆಲ್‌, ನಂತೂರು, ಕೂಳೂರು, ಪಣಂಬೂರು, ಉಡುಪಿಯ ಕಲ್ಸಂಕ, ಸಂತಕಟ್ಟೆಯಲ್ಲಿ ಆಗಾಗ್ಗೆ ತಾಸುಗಟ್ಟಲೆ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

ದ.ಕ. ಜಿಲ್ಲೆಯ ಪ್ರಮುಖ ದೇಗುಲಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಸೌತಡ್ಕ ಶ್ರೀ ಮಹಾಗಣಪತಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಕದ್ರಿ ದೇಗುಲ, ಮಂಗಳಾದೇವಿ ದೇಗುಲ, ಉಡುಪಿಯ ಶ್ರೀಕೃಷ್ಣ ದೇಗುಲ, ಕೊಲ್ಲೂರು ಶ್ರೀ ಮುಕಾಂಬಿಕಾ ದೇಗುಲದಲ್ಲಿ ಭಕ್ತ ಸಾಗರವೇ ಕಂಡು ಬಂತು. ಪಣಂಬೂರು, ಮಲ್ಪೆ ಬೀಚ್‌ನಲ್ಲಿಯೂ ಅಪಾರ ಸಂಖ್ಯೆಯ ಜನರು ಸೇರಿದ್ದರು.

ಕುಕ್ಕೆ ಕ್ಷೇತ್ರದಲ್ಲಿ ಭಕ್ತ ಸಂದಣಿ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕ್ರಿಸ್ಮಸ್‌ ರಜೆಯ ದಿನ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ದೇವರ ದರುಶನ ಪಡೆದರು. ಇಲ್ಲಿಗೆ ಕಳೆದ 4 ದಿನಗಳಿಂದ ಅಧಿಕ ಭಕ್ತರು ಆಗಮಿಸಿದ್ದರು. ಸರದಿ ಸಾಲಿನಲ್ಲಿ ಸಾಗಿ ಬಂದು ಭಕ್ತರು ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇಗುಲದ ಹೊರಾಂಗಣದಲ್ಲಿ 8 ಸಾಲುಗಳಲ್ಲಿ ಭಕ್ತರು ಸರದಿ ನಿಂತರು. ಷಣ್ಮುಖ ಪ್ರಸಾದ ಭೋಜನ ಶಾಲೆ, ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಭೋಜನ ವ್ಯವಸ್ಥೆ ಮಾಡಲಾಯಿತು.

ಉಡುಪಿಯಲ್ಲೂ ಜನಸಂದಣಿ
ಉಡುಪಿ ಜಿಲ್ಲೆಯ ವಿವಿಧ ದೇಗುಲ, ಮಲ್ಪೆ ಬೀಚ್‌ ಹಾಗೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಬುಧವಾರ ಜನ ಸಂದಣಿ ಹೆಚ್ಚಿದೆ.

Advertisement

ಉಡುಪಿ ಶ್ರೀ ಕೃಷ್ಣಮಠ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಸಹಿತ ವಿವಿಧ ದೇವಸ್ಥಾನಗಳಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬರುವ ಭಕ್ತರ ಈ ತಿಂಗಳ ಆರಂಭದಿಂದಲೇ ಹೆಚ್ಚಾಗಿದೆ. ಹಾಗೆಯೇ ಮಲ್ಪೆ, ಮರವಂತೆ, ಕಾಪು, ಪಡುಬಿದ್ರಿ, ಬೈಂದೂರು ಸೋಮೇಶ್ವರ ಬೀಚ್‌ಗಳಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ದೇವಸ್ಥಾನಗಳಲ್ಲಿ ದರ್ಶನಕ್ಕೆ ಭಕ್ತರು ಸರತಿ ಸಾಲು ಕಾಣಸಿಗುತ್ತಿದೆ. ಪಾರ್ಕಿಂಗ್‌ ಪ್ರದೇಶಗಳಲ್ಲಿ ವಾಹನ ಹೆಚ್ಚಿದ್ದು, ಟ್ರಾಫಿಕ್‌ ಸಮಸ್ಯೆಯೂ ಅಲ್ಲಲ್ಲಿ ಕಂಡು ಬರುತ್ತಿದೆ. ಒಟ್ಟಾರೆಯಾಗಿ ವರ್ಷಾಂತ್ಯದಲ್ಲಿ ಉಡುಪಿಯ ದೇವಸ್ಥಾನ, ಪ್ರವಾಸಿ ತಾಣಗಳಿಗೆ ಬರುವ ಭಕ್ತರು, ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next