Advertisement
ಭಾರತ, ಜಪಾನ್, ಅಮೆರಿಕ ಹಾಗೂ ಆಸ್ಟ್ರೇಲಿಯಾದ ವಿದೇಶಾಂಗ ಸಚಿವರ ನಡುವೆ ನಡೆದಿರುವ ಈ ಸಭೆಯು ಚೀನದ ರಾಜತಾಂತ್ರಿಕ ಉದ್ಧಟತನ, ಸಾಗರ ಪ್ರಾಂತ್ಯದಲ್ಲಿ ಅದರ ಆಕ್ರಮಣ ವರ್ತನೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಬಹುದೇ ಎನ್ನುವ ನಿರೀಕ್ಷೆ ಹೆಚ್ಚಿಸಿದೆ.
Related Articles
Advertisement
ಅದರಲ್ಲೂ ದಕ್ಷಿಣ ಚೀನ ಸಮುದ್ರ ಪ್ರಾಂತ್ಯದಲ್ಲಿ ಏಕಸ್ವಾಮ್ಯ ಸಾಧಿಸಬೇಕೆಂದು ಚೀನ ಪ್ರಯತ್ನಿಸುತ್ತಿದ್ದು, ತನ್ಮೂಲಕ ಆ ಕ್ಷೇತ್ರದಲ್ಲಿನ ವ್ಯಾಪಾರ ಶಕ್ತಿ ತಾನಾಗಬೇಕು ಎಂದು ಡ್ರ್ಯಾಗನ್ ರಾಷ್ಟ್ರ ಬಯಸುತ್ತದೆ. ಮುಖ್ಯವಾಗಿ ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರದ ನಡುವೆ ಇರುವ ಜಲಮಾರ್ಗವು ಅತೀ ಮಹತ್ವಪೂರ್ಣ ವ್ಯಾಪಾರ ಮಾರ್ಗವಾಗಿದ್ದು, ಜಗತ್ತಿನ 20 ಪ್ರತಿಶತಕ್ಕೂ ಅಧಿಕ ಸಾಗರ ವ್ಯಾಪಾರದ ಪಾಲನ್ನು ಈ ಪ್ರದೇಶವೇ ಹೊಂದಿದೆ.
ಈ ಕಾರಣಕ್ಕಾಗಿಯೇ 7 ದೇಶಗಳಿಂದ ಸುತ್ತುವರಿದಿರುವ ದಕ್ಷಿಣ ಚೀನ ಸಮುದ್ರದ ವಿಚಾರವಾಗಿ ಚೀನದೊಂದಿಗೆ ಉಳಿದ ದೇಶಗಳ ನಡುವೆ ಬಿಕ್ಕಟ್ಟು ಹೆಚ್ಚುತ್ತಲೇ ಇದೆ. ಆ ಪ್ರದೇಶದಲ್ಲಿನ ಚಿಕ್ಕ ರಾಷ್ಟ್ರಗಳನ್ನು ತನ್ನ ಮಿಲಿಟರಿ ಸಾಮರ್ಥ್ಯದ ಮೂಲಕ ಬೆದರಿಸುವ ಪ್ರಯತ್ನ ನಡೆಸಿದೆ ಚೀನ. ಕೇವಲ ವ್ಯವಹಾರದ ದೃಷ್ಟಿಯಿಂದಷ್ಟೇ ಅಲ್ಲದೆ, ಸಾಮರಿಕ ಆಯಾಮದಲ್ಲೂ ದಕ್ಷಿಣ ಚೀನ ಸಮುದ್ರವನ್ನು ಚೀನ ಪ್ರಮುಖವೆಂದು ಭಾವಿಸುತ್ತದೆ. ಹೀಗಾಗಿ ಈಗಾಗಲೆ ಆ ಪ್ರಾಂತ್ಯದಲ್ಲಿ ಹಲವೆಡೆ ದೊಡ್ಡ ಮಟ್ಟದಲ್ಲಿ ಸೇನಾ ಘಟಕಗಳನ್ನೂ ಸ್ಥಾಪಿಸಿದೆ.
ಕೆಲವು ಸಮಯಗಳ ಹಿಂದೆ ಈ ಸಾಗರ ಪ್ರಾಂತ್ಯದಲ್ಲಿ ಚೀನ ಯುದ್ಧ ವಿಮಾನ ನಿರೋಧಿ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸುವ ಮೂಲಕ ಅಮೆರಿಕದ ನಿದ್ದೆಗೆಡಿಸಿದೆ. ಇತ್ತ ಲಡಾಖ್‌ನಲ್ಲಿ ಬಿಕ್ಕಟ್ಟು ಸೃಷ್ಟಿಸಿದೆ.
ಅತ್ತ ಆಸ್ಟ್ರೇಲಿಯಾವನ್ನು ವ್ಯಾವಹಾರಿಕವಾಗಿ ಕಟ್ಟಿಹಾಕಲು ಪ್ರಯತ್ನಿಸುತ್ತಿದೆ. ಇನ್ನು ತನ್ನ ಹಳೆಯ ಶತ್ರು ಜಪಾನ್‌ಗೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಮಾಡುತ್ತಲೇ ಇದೆ.
ಈ ಕಾರಣಕ್ಕಾಗಿಯೇ ಚೀನದ ಹೆಡೆಮುರಿಕಟ್ಟಲು ಈ ನಾಲ್ಕೂ ರಾಷ್ಟ್ರಗಳು ಪ್ರಬಲ ವ್ಯೂಹಾತ್ಮಕ ತಂತ್ರವನ್ನು ರಚಿಸಲೇಬೇಕಿರುವುದು ಅಗತ್ಯವಾಗಿದೆ.
ಕ್ವಾಡ್ ಸಮೂಹ ಸಭೆಯು ಕೇವಲ ಅಮೆರಿಕ, ಭಾರತ, ಜಪಾನ್ ಆಸ್ಟ್ರೇಲಿಯಾಕ್ಕಷ್ಟೇ ಅಲ್ಲದೇ, ಜಾಗತಿಕ ವ್ಯಾಪಾರ ವಲಯ ಹಾಗೂ ಏಷ್ಯನ್ ರಾಷ್ಟ್ರಗಳ ಸುರಕ್ಷತೆಯ ಹಿತದೃಷ್ಟಿಯಿಂದಲೂ ಮುಖ್ಯವಾಗಿದೆ.