ಹೆಣ್ಮಕ್ಕಳು ತಮ್ಮ ಮದುವೆ ಬಗ್ಗೆ ಅಸಂಖ್ಯ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. “ನನಗೆ ಹಾಗೇನಿಲ್ಲಪ್ಪಾ… ಸಿಂಪಲ್ ಮದುವೆಯಾದರೂ ನಡೆಯುತ್ತದೆ’ ಎಂದು ಹುಡುಗಿ ಹೇಳುತ್ತಿದ್ದಾಳೆಂದರೆ ಆಕೆ ಸುಳ್ಳು ಹೇಳುತ್ತಿದ್ದಾಳೆಂದೇ ಗ್ರಹಿಸಬಹುದು. ಇಷ್ಟಕ್ಕೂ ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಮದುವೆ ಸಮಾರಂಭ ಅದ್ದೂರಿಯಾಗಿ ನಡೆಯಬೇಕು, ಬಂದವರೆಲ್ಲರೂ ಮೆಚ್ಚುಗೆಯಿಂದ ತಲೆದೂಗಬೇಕು ಎಂದುಕೊಳ್ಳುವುದರಲ್ಲಿ ಹೆಣ್ಮಗಳ ತಪ್ಪೇನೂ ಇಲ್ಲ. ಈಗೀಗ ಥೀಮ್ಡ್ ಮದುವೆಗಳು ಫ್ಯಾಷನ್ ಆಗಿಬಿಟ್ಟಿವೆ.
ಇಲ್ಲೊಂದು ಜೋಡಿಯ ಮದುವೆ ಇತ್ತೀಚೆಗೆ ಎಲ್ಲೆಡೆ ಚರ್ಚೆ ಆಯಿತು. ಗಂಡು ಹೆಣ್ಣು ಇಬ್ಬರೂ ಗಣಿತ ಉಪನ್ಯಾಸಕರು. ಹೀಗಾಗಿ ಮದುವೆಗೆ ಬಂದ ಅತಿಥಿಗಳ ಕೈಯಲ್ಲಿ ಗಣಿತ ಪರೀಕ್ಷೆ ಬರೆಸುವ ಇಚ್ಛೆ ಅವರದು. ಮುಖ್ಯವಾಗಿ ಅವಳದು. ಗಂಡಿನದೇನಿದ್ದರೂ ಭಾವೀ ಪತ್ನಿ ಹೇಳಿದ್ದಕ್ಕೆಲ್ಲಾ ಹೂಂ ಹೂಂ ಎಂದು ತಲೆಯಾಡಿಸುವುದಷ್ಟೆ.
ಆ ವಿನೂತನ ಉಪಾಯ ಏನು ಗೊತ್ತಾ? ಮಧ್ಯಾಹ್ನ ಊಟದ ಕುರ್ಚಿ ಬೇಕು ಎಂದರೆ ಅತಿಥಿಗಳೆಲ್ಲರೂ ಲೆಕ್ಕ ಬಿಡಿಸಬೇಕಿತ್ತು. ಸರಿಯಾದ ಉತ್ತರ ಬಂದರೆ ಮಾತ್ರ ಊಟ, ಇಲ್ಲದಿದ್ದರೆ ಇಲ್ಲ. ಪುಣ್ಯಕ್ಕೆ ಆ ಪುಣ್ಯಾತಿತ್ತಿ ಮದುಮಗಳು ಈ ಉಪಾಯವನ್ನು ಅನುಷ್ಠಾನಕ್ಕೆ ತರುವ ಮೊದಲು “ನೋಡ್ರಪ್ಪಾ ನಮ್ಮ ಹೊಸ ಐಡಿಯಾ’ ಅಂತ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಳು. ಶಹಬ್ಟಾಸ್‌ಗಿರಿಯನ್ನು ನಿರೀಕ್ಷಿಸುತ್ತಿದ್ದವಳಿಗೆ ತಪರಾಕಿ ಸಿಕ್ಕವೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಮದುವೆ ಅನ್ನೋದೇ ಸತ್ವ ಪರೀಕ್ಷೆ ಎನ್ನುತ್ತಾರೆ, ಈ ಮದುಮಗಳು ಅದನ್ನೂ ಮೀರಿದ ಗಣಿತ ಪರೀಕ್ಷೆಯನ್ನು ಬರೆಸಲು ಹೊರಟಿದ್ದಳಲ್ಲಾ, ಅದಕ್ಕೇನೆನ್ನಬೇಕು?