Advertisement

ಪುತ್ತೂರು; ಪಕ್ಷೇತರ ಅಭ್ಯರ್ಥಿ ನಮಗೆ ಎದುರಾಳಿಯೇ ಅಲ್ಲ- ರಘುಪತಿ ಭಟ್‌

03:40 PM May 02, 2023 | Team Udayavani |

ಪುತ್ತೂರು : ಹಿಂದುತ್ವದ ಪರ ಗಟ್ಟಿಯಾಗಿ ನಿಂತಿರುವ ಏಕೈಕ ಪಕ್ಷ ಬಿಜೆಪಿ. ಹಿಂದುತ್ವ ಮತ್ತು ಬಿಜೆಪಿ ಒಂದಕ್ಕೊಂದು ವಿರುದ್ಧವಲ್ಲ. ಹಾಗಾಗಿ ಪುತ್ತೂರಿನಲ್ಲಿ ನಮಗೆ ಪ್ರತಿಸ್ಪರ್ಧಿ ಕಾಂಗ್ರೆಸ್‌ ಪಕ್ಷ ಹೊರತು ಪಕ್ಷೇತರ ಅಭ್ಯರ್ಥಿ ಎದುರಾಳಿಯೇ ಅಲ್ಲ ಎಂದು ಉಡುಪಿ ಮಾಜಿ ಶಾಸಕ, ಬಿಜೆಪಿ ಮುಖಂಡ ರಘುಪತಿ ಭಟ್‌ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಪಕ್ಷೇತರ ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಬಿಜೆಪಿ ಮತ್ತು ಹಿಂದುತ್ವದ ನಡುವಿನ ಸ್ಪರ್ಧೆಯಲ್ಲ. ಅರುಣ್‌ ಕುಮಾರ್‌ ಪುತ್ತಿಲ ಅವರಿಗೆ ಪಕ್ಷದ ಟಿಕೆಟ್‌ ಸಿಕ್ಕಿಲ್ಲ ಎಂಬ ಬೇಸರ ಇರಬಹುದು. ಬಿಜೆಪಿಯಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಎಲ್ಲರೂ ಟಿಕೆಟ್‌ಗೆ ಅರ್ಹರೆ. ಹಾಗೆಂದು ಎಲ್ಲರಿಗೂ ಟಿಕೆಟ್‌ ನೀಡಲು ಸಾಧ್ಯವೇ? ಎಲ್ಲರನ್ನೂ ಎಲ್ಲ ಕಾಲದಲ್ಲಿ ಸಮಾಧಾನ ಮಾಡಲು ಸಾಧ್ಯವಿಲ್ಲ ಎಂದರು.

ಘೋಷಣೆಗೆ ಗ್ಯಾರೆಂಟಿ ಇಲ್ಲ..!
ಕಾಂಗ್ರೆಸ್‌ ಪಕ್ಷ ಒಂದರ ಹಿಂದೆ ಒಂದರಂತೆ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದೆ. ಇವೆಲ್ಲವೂ ಅನುಷ್ಠಾನ ಮಾಡಲು ಸಾಧ್ಯವಿಲ್ಲದೇ ಇರುವಂಥದ್ದು. ಹಾಗಾಗಿ ಆ ಪಕ್ಷದ ಘೋಷಣೆಗಳಿಗೆ ಗ್ಯಾರೆಂಟಿಯೇ ಇಲ್ಲ ಎಂದು ರಘುಪತಿ ಭಟ್‌ ಟೀಕಿಸಿದರು.

ಕಾಂಗ್ರೆಸ್‌ ಪಕ್ಷ ನೀಡುತ್ತಿರುವ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಬೇಕಾದರೆ ಅಷ್ಟೊಂದು ಹಣ ಎಲ್ಲಿಂದ ತರಲಾಗುತ್ತದೆ. ಸರಕಾರದ ಈಗಿನ ಖಜಾನೆಯ ಸಾಮರ್ಥ್ಯ ನೋಡಿದರೆ ಇಷ್ಟೆಲ್ಲ ಉಚಿತಗಳನ್ನು ನೀಡಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್‌ ಪಕ್ಷ ತನ್ನ ಉಚಿತಗಳನ್ನು ಯಾವ ರೀತಿ ಅನುಷ್ಠಾನ ಮಾಡುತ್ತದೆ ಮತ್ತು ಅದಕ್ಕೆ ಹಣದ ಮೂಲ ಯಾವುದು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಕುಮ್ಕಿ ಹಕ್ಕು ಶೀಘ್ರ ವಿತರಣೆ
ರೈತರಿಗೆ ಕುಮ್ಕಿ ಹಕ್ಕು ನೀಡಲು ಬಿಜೆಪಿ ಬದ್ಧವಾಗಿದೆ. ಅರಣ್ಯ ಕಾಯಿದೆ ವಿಚಾರದಲ್ಲಿ ಕೆಲವೊಂದು ತಾಂತ್ರಿಕ ಅಡಚಣೆಗಳಿರುವ ಕಾರಣ ವಿಳಂಬವಾಗಿದೆ. ಇತ್ತೀಚೆಗಷ್ಟೇ ಸಂಪುಟ ಉಪ ಸಮಿತಿ ಸಭೆ ಸೇರಿ ರೈತರಿಗೆ ಗರಿಷ್ಠ 5 ಎಕರೆಯಷ್ಟು ಕುಮ್ಕಿ ಭೂಮಿಯ ಹಕ್ಕನ್ನು 30 ವರ್ಷಗಳ ಅವಧಿಗೆ ಲೀಸ್‌ ಆಧಾರದಲ್ಲಿ ನೀಡುವ ಬಗ್ಗೆ ಶಿಫಾರಸು ಮಾಡಿದೆ. ಇದು ಕಾನೂನು ರೂಪ ಪಡೆಯಬೇಕಿದೆ. ಬಿಜೆಪಿ ಸರಕಾರ ಬಂದರೆ ಅನುಷ್ಠಾನವಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್‌, ಪಕ್ಷದ ಮುಖಂಡರಾದ ಪ್ರೇಮಲತಾ ರಾವ್‌, ಶ್ರೀಕಾಂತ್‌, ಸುರೇಶ್‌ ಕಣ್ಣರಾಯ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next