Advertisement

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

12:26 AM Apr 24, 2024 | Team Udayavani |

ಪುತ್ತೂರು: ಸೇನೆಯ ಗೂರ್ಖಾರೆಜಿಮೆಂಟಿನಲ್ಲಿ ದೇಶ ಸೇವೆ ಮಾಡಿದ ಕ್ಯಾ. ಬ್ರಿಜೇಶ್‌ ಚೌಟ ಅವರನ್ನು ದಾಖಲೆಯ ಅಂತರದಲ್ಲಿ ಗೆಲ್ಲಿಸಿ ಮೋದಿಯವರ ಕೈಬಲಪಡಿಸ ಬೇಕು ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಕರೆ ನೀಡಿದ್ದಾರೆ.

Advertisement

ಪುತ್ತೂರಿನಲ್ಲಿ ಬೃಹತ್‌ ರೋಡ್‌ ಶೋ ನಡೆಸಿದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ದೊಡ್ಡ ಕನಸನ್ನು ಇಟ್ಟುಕೊಂಡ ವ್ಯಕ್ತಿ ಚೌಟರು ಎಂದರು.

ಮೋದಿಯವರು ಮತ್ತೊಮ್ಮೆ ಪ್ರಧಾನಿ ಹೇಗೂ ಆಗುತ್ತಾರೆ ಎಂದು ಉದಾಸೀನ ತಾಳಬೇಡಿ. ಕಳೆದ ಬಾರಿ ಶೇ. 79 ಮತದಾನ ಆಗಿತ್ತು. ಈ ಬಾರಿ ಅದನ್ನು ಶೇ. 85 ಕ್ಕೆ ಮುಟ್ಟಿಸಬೇಕಿದೆ ಎಂದರು.

ಯಾರಿಗೆಲ್ಲ ನಮ್ಮ ಪ್ರಧಾನಿ ಮೋದಿ ಮೇಲೆ ಪ್ರೀತಿ ಇದೆಯೋ ಅವರೆಲ್ಲ ಮತದಾನ ಮಾಡಲೇಬೇಕು. ಮುಂದಿನ 25 ವರ್ಷದ ಕನಸಿನೊಂದಿಗೆ ಕೊಟ್ಟಿರುವ 400 ಸ್ಥಾನಗಳನ್ನು ಗೆಲ್ಲಿಸುವ ಗುರಿಯನ್ನು ನಾವೆಲ್ಲ ಸೇರಿ ಮುಟ್ಟಬೇಕು.

ಉತ್ಸಾಹಕ್ಕೆ ಋಣಿ : ಚೌಟ:
ಕ್ಯಾ| ಬ್ರಿಜೇಶ್‌ ಚೌಟ ಮಾತನಾಡಿ, ಇಷ್ಟೊಂದು ಬಿಸಿಲಿನ ಮಧ್ಯೆಯೂ ಉತ್ಸಾಹದಿಂದ ಸೇರಿದ ನಿಮ್ಮೆಲ್ಲರಿಗೆ ನಾನು ಋಣಿ. ಹಿಂದುತ್ವಕ್ಕಾಗಿ, ಪ್ರಧಾನಿ ಮೋದಿಗಾಗಿ, ಈ ದೇಶದ ಭವಿಷ್ಯಕ್ಕಾಗಿ ಪುತ್ತೂರಿನಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದೀರಿ.ನಿಮ್ಮ ಆಶೋತ್ತರಗಳನ್ನು ಈಡೇರಿಸಲು ಕಟಿಬದ್ಧನಾಗಿದ್ದೇನೆ. ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯಾಗಿಸಲು ಅತಿ ಹೆಚ್ಚು ಮತದಾನವಾಗುವಂತೆ ಮಾಡೋಣ ಎಂದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ, ಮಾಜಿ ಶಾಸಕ ಸಂಜೀವ ಮಠಂದೂರು, ಮುಖಂಡರಾದ ಅರುಣ್‌ ಪುತ್ತಿಲ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌, ಶಾಸಕರಾದ ಹರೀಶ್‌ ಪೂಂಜ, ರಾಜೇಶ್‌ ನಾಯ್ಕ… ರೋಡ್‌ ಶೋದಲ್ಲಿದ್ದರು.

ಸುಡುವ ಬಿಸಿಲನ್ನೂ ಲೆಕ್ಕಿಸದೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು. ದರ್ಬೆಯಿಂದ ತೊಡಗಿ ಅಣ್ಣಾಮಲೈ ಮತ್ತು ಪ್ರಮುಖರು ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದರು. ಇದಕ್ಕೂ ಮುನ್ನ ಕಡಬ ಪೇಟೆಯಲ್ಲಿ ರೋಡ್‌ ಶೋ ನಡೆದಿದ್ದು ಅಲ್ಲಿಯೂ ಸಾಕಷ್ಟು ಮಂದಿ ಸೇರಿದ್ದರು. ಬೆಳಗ್ಗೆ ಹೆಲಿಕಾಪ್ಟರ್‌ಮೂಲಕ ಕಡಬದ ಬಿಳಿನೆಲೆ ಶಾಲೆಯ ಹೆಲಿಪ್ಯಾಡ್‌ಗೆ ಆಗಮಿಸಿದ ಅಣ್ಣಾಮಲೈ ಅವರನ್ನು ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್‌ ಚೌಟ ಸೇರಿದಂತೆ ಬಿಜೆಪಿ ನಾಯಕರು ಸ್ವಾಗತಿಸಿದರು. ಮಂಗಳೂರಿಗೆ ಹಿಂದಿರುಗುವ ಸಂದರ್ಭ ಫರಂಗಿಪೇಟೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಶ್ರಮ ಪಡಬೇಕಿದೆ ಎಂದರು. ಪುತ್ತೂರಿನಲ್ಲಿ ಬಿಂದು ಫ್ಯಾಕ್ಟರಿಗೆ ಭೇಟಿ ನೀಡಿ ಕಾರ್ಮಿಕರನ್ನು ಮಾತನಾಡಿಸಲಾಯಿತು.

ಕಾಂಗ್ರೆಸ್‌ನವರೇಕೆ ಇನ್ನೂ ಚೊಂಬು ಹಿಡಿದಿದ್ದಾರೆ ?
ಮೋದಿಯವರು ದೇಶಾದ್ಯಂತ ಇಷ್ಟೊಂದು ಸಂಖ್ಯೆಯಲ್ಲಿ ಶೌಚಾಲಯ ಕಟ್ಟಿಸಿಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್‌ನವರು ಈಗಲೂ ಯಾಕೆ ಚೊಂಬು ಹಿಡಿದು ಓಡಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಕಾಂಗ್ರೆಸಿಗೆ ವಾರಂಟಿ ಇಲ್ಲ, ಅವರಿಗೆ ಗ್ಯಾರಂಟಿಯೂ ಇಲ್ಲ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next