Advertisement

Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!

12:29 AM Apr 23, 2024 | Team Udayavani |

ಮಂಗಳೂರು: ದ.ಕ. ಲೋಕಸಭಾ ಕಣ ಜಿದ್ದಾಜಿದ್ದಿನ ಹಣಾಹಣಿಗೆ ಸಿದ್ಧವಾಗಿದ್ದು, ಅದರಲ್ಲೂ ಕ್ಷೇತ್ರದ ಹೃದಯ ಭಾಗ ಮಂಗಳೂರು ದಕ್ಷಿಣದಲ್ಲಿ ರಾಜಕೀಯ ಲೆಕ್ಕಾಚಾರ ಇತರ ಕ್ಷೇತ್ರಗಳಿಗಿಂತ ತುಸು ಭಿನ್ನ!

Advertisement

ಜಿಲ್ಲೆಗೆ ಸಂಬಂಧಿಸಿ ಯಾವುದೇ ಚಟುವಟಿಕೆ ಮಂಗಳೂರು ದಕ್ಷಿಣದಲ್ಲೇ ನಡೆಯುವುದರಿಂದ ರಾಜಕೀಯ ಹಾರ್ಟ್‌ಸಿಟಿ ಇದು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ನಡೆಸಿದ ರೋಡ್‌ ಶೋ “ದಕ್ಷಿಣ’ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದಂತಿದೆ. ಜತೆಗೆ ಮೊನ್ನೆ ಮೊನ್ನೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ ನಾಮಪತ್ರ ಸಲ್ಲಿಕೆಯ ಮೆರವಣಿಗೆ ಹವಾ ಸೃಷ್ಟಿಸಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್‌. ಪೂಜಾರಿ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯೂ ರಾಜಕೀಯವಾಗಿ ಹೊಸ ಅಧ್ಯಾಯ ರೂಪಿಸಿದೆ.ಇಷ್ಟಿದ್ದರೂ ಇಲ್ಲಿ ಮತದಾರರು ಚುನಾವಣೆ ಬಗ್ಗೆ ಹೆಚ್ಚು ತಲೆ ಕೆಡಿಸಿ ಕೊಂಡಂತೆ ಕಾಣುವುದಿಲ್ಲ. ಉದಯವಾಣಿ ಸಂಗ್ರಹಿಸಿದ ಕೆಲವರ ಅಭಿಪ್ರಾಯ ಇದನ್ನು ಪ್ರತಿಧ್ವನಿಸುತ್ತಿತ್ತು.

ನಗರಲ್ಲಿ ಅತೀ ಹೆಚ್ಚು ವಹಿವಾಟು ನಡೆಯುವ ಮೀನುಗಾರಿಕ ಬಂದರು, ಸ್ಟೇಟ್‌ಬ್ಯಾಂಕ್‌, ಕಂಕನಾಡಿ, ಮಂಗಳಾದೇವಿ, ಬಿಜೈ, ಕಾವೂರು ಕುದ್ರೋಳಿ, ಪಂಪ್‌ವೆಲ್‌ ಭಾಗದಲ್ಲಿ ಜನ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದು ಬಿಟ್ಟರೆ ಚುನಾವಣೆಯ ಬಗ್ಗೆ ಚರ್ಚೆ ನಡೆಸುವುದು ಬಿಡಿ ಈ ಬಗ್ಗೆ ಮಾತನಾಡಲು ಉತ್ಸಾಹವಿಲ್ಲದ ವಾತಾವರಣ ಕಂಡುಬಂತು.

ಬಿಜೈನಿಂದ ಪ್ರಯಾಣ ಆರಂಭಿಸಿದ ನಮ್ಮ ತಂಡ ರಿಕ್ಷಾ ಚಾಲಕ ಸಂದೀಪ್‌ ಅವರೊಂದಿಗೆ ಮಾತು ಆರಂಭಿಸಿತ್ತು. “ಯಾರಿಗೆ ಓಟ್‌ ಹಾಕಿದರೂ ನಮಗೇನು ಪ್ರಯೋಜನ ವಿಲ್ಲ. ಮಹಿಳೆಯರಿಗೆ ಫ್ರಿ ಬಸ್‌ ಪ್ರಯಾಣದಿಂದ ನಮಗೆ ಬಾಡಿಗೆ ಇಲ್ಲ. ವಿಪರೀತ ಬೆಲೆ ಏರಿಕೆಯಾಗುತ್ತಿದೆ. 20 ರೂ. ಇದ್ದ ಸಣ್ಣ ಕೇಬಲ್‌ವೊಂದರ ಬೆಲೆ 80ಕ್ಕೇರಿಕೆಯಾಗಿದೆ. ಎಲ್ಲರೂ ಒಂದೇ. ಇವರಿಗೆ ಓಟು ಹಾಕುವ ಬದಲು ನೋಟ ಚಲಾಯಿಸಿತ್ತೇವೆ ಎಂದರು.

ಹೊಟೇಲ್‌ಗೆ ತೆರಳಿದ ವೇಳೆ ಗ್ರಾಹಕರು ಯಾರೂ ಚುನಾವಣ ಮೂಡ್‌ನ‌ಲ್ಲಿರಲಿಲ್ಲ. ಹೊಟೇಲ್‌ ಸಿಬಂದಿ ದುರ್ಗಾ ಅವರನ್ನು ಮಾತ ನಾಡಿಸಿದಾಗ ನಗರದಲ್ಲಿ ಹೆಚ್ಚಿನ ಜನ ಮತದಾನದ ಬಗ್ಗೆ ಉತ್ಸಾಹ ಹೊಂದಿಲ್ಲ. ಮತದಾನ ಮಾಡುವುದಾದರೆ ಎಲ್ಲರೂ ಮಾಡಬೇಕು. ಆ ರೀತಿಯ ಕಾನೂನು ಜಾರಿಗೊಳ್ಳಬೇಕು ಎಂದು ತಿಳಿಸಿದರು.

Advertisement

ಕಾವೂರು ಸಮೀಪ ಪೌರ ಕಾರ್ಮಿಕ ರೊಬ್ಬರು ಹೇಳುವ ಪ್ರಕಾರ “ಜನ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ. ಆ ಬಳಿಕ ಮರೆತು ಬಿಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಇನ್ಯಾರಿಗೋ ಮತ ಹಾಕುತ್ತಾರೆ’ ಎಂದರು.
“ಯಾರೇ ಗೆದ್ದರೂ ನಮಗೆ ಪ್ರಯೋ ಜನಕ್ಕೆ ಬರುವುದಿಲ್ಲ. ಗೆಲ್ಲುವ ತನಕ ನಮ್ಮವರು. ಗೆದ್ದ ಬಳಿಕ ನಾಯಕರು ನಮ್ಮತ್ತ ಮುಖ ಮಾಡುವುದಿಲ್ಲ ಎಂದು ಬಂದರು ಸಮೀಪದಲ್ಲಿ ಎದು ರಾದ ಮೀನು ವ್ಯಾಪಾರಿ ಹಸನಬ್ಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅಧಿಕಾರಿಗಳು ಮನೆಗೆ ಬಂದು ಚುನಾವಣೆ ಹಬ್ಬದಲ್ಲಿ ಭಾಗವಹಿಸು ವಂತೆ ಮನವಿ ಮಾಡಿದ್ದಾರೆ. ಯಾರಿಗೆ ಓಟು ಹಾಕೋದು ಎಂದು ಹೇಳಲ್ಲ. ಮತದಾನ ಮಾಡಬೇಕು ಎಂದು ಉರ್ವ ನಿವಾಸಿ ಜಸಿಂತಾ ತಿಳಿಸಿದರು.

- ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next