Advertisement

ಕರಾಳ ಕೃಷಿ ಕಾಯ್ದೆ ಕೈಬಿಡಲು ಸರ್ಕಾರಕ್ಕೆ ಒತ್ತಡ ಹೇರಿ

02:41 PM Mar 12, 2022 | Team Udayavani |

ದಾವಣಗೆರೆ: ಕರ್ನಾಟಕ ಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಖರೀದಿ ಖಾತ್ರಿಗೊಳಿಸಬೇಕು ಎಂಬ ಬೇಡಿಕೆಗಳ ಬಗ್ಗೆ ಪ್ರತಿ ಗ್ರಾಮಸಭೆಯಲ್ಲಿ ಠರಾವು ಆಗಬೇಕು. ಈ ಠರಾವುಗಳನ್ನು ಜಿಲ್ಲಾ ಪಂಚಾಯಿತಿ ಮತ್ತು ಶಾಸಕರ ಮೂಲಕ ಮುಖ್ಯಮಂತ್ರಿಗಳಿಗೆ ತಲುಪಿಸಬೇಕು.

Advertisement

ಶಾಸಕರ ಜತೆ ಸಂವಾದ ನಡೆಸಿ ಕರಾಳ ಕಾಯ್ದೆಯನ್ನು ವಾಪಸ್‌ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸುವ ಕೆಲಸವಾಗಬೇಕು ಎಂದು ಜನಾಂದೋಲನ ಮಹಾಮೈತ್ರಿ ಜಾಥಾ ಸಂಚಾಲಕ ಎಸ್‌.ಆರ್‌. ಹಿರೇಮಠ ಹೇಳಿದರು.

ಕರಾಳ ಕಾಯ್ದೆಗಳ ವಾಪಸಾತಿಗಾಗಿ ಒತ್ತಾಯಿಸಿ ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ಜನಾಂದೋಲನ ಮಹಾಮೈತ್ರಿಯಿಂದ ಹಮ್ಮಿಕೊಂಡಿರುವ ಜನಜಾಗೃತಿ ಜಾಥಾ ಶುಕ್ರವಾರ ನಗರಕ್ಕೆ ಆಗಮಿಸಿದ ವೇಳೆ ಜಯದೇವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಈಗಾಗಲೇ ಮೂರು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿದೆ. ಆದರೆ, ರಾಜ್ಯ ಸರ್ಕಾರ ಅಂತಹುದೇ ಕರಾಳ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಇದು ಜನವಿರೋಧಿ ನೀತಿಯಾಗಿದೆ. ಉಳುವವನೇ ಭೂ ಒಡೆಯನಾಗಬೇಕು ಎಂಬ ಆಶಯವನ್ನು ಸ್ವಾತಂತ್ರ್ಯದ ಕಾಲದಲ್ಲಿಯೇ ಹೊಂದಲಾಗಿತ್ತು. ಅದಕ್ಕೆ ವಿರುದ್ಧವಾಗಿ ಉಳ್ಳವರಿಗೆ ಎಲ್ಲ ಭೂಮಿ ಎಂಬ ನೀತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಇದರಿಂದ ಭೂಗಳ್ಳ ಮಾಫಿಯಾಗಳನ್ನು ರಕ್ಷಿಸಿ, ರಿಯಲ್‌ ಎಸ್ಟೇಟ್‌ ದಂಧೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಮಾಲೀಕರಾಗಿರುವ ಕಾರಣ ನಮ್ಮ ಕೈಯಲ್ಲಿಯೇ ಅಧಿಕಾರವಿದೆ. ಪ್ರತಿನಿಧಿಗಳು ನಮ್ಮ ಸೇವಕರಾಗಿದ್ದಾರೆ. ಹೀಗಾಗಿ ಜನರ ಹಿತ ಕಾಯುವುದು ಜನಪ್ರತಿನಿಧಿಗಳ ಕೆಲಸ ಆಗಬೇಕು. ಒಂದು ವೇಳೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರಾಳವಾಗಿರುವ ಮೂರು ಕೃಷಿ ಕಾಯ್ದೆ ವಾಪಸ್‌ ಪಡೆಯದಿದ್ದರೆ ಹಾಗೂ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡದಿದ್ದರೆ ಜನರು ಬರುವ ಚುನಾವಣೆಯಲ್ಲಿ ಬಳಸಲು ಬ್ರಹ್ಮಾಸ್ತ್ರ ಸಿದ್ಧಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

Advertisement

ಜನಸಂಗ್ರಾಮ ಪರಿಷತ್‌ನ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಬೀದರ್‌ ಜಿಲ್ಲೆ ಬಸವಕಲ್ಯಾಣದಿಂದ ಶಿವಮೊಗ್ಗ ಜಿಲ್ಲೆಯ ಕಾಗೋಡು ಹಾಗೂ ಚಾಮರಾಜನಗರ ಜಿಲ್ಲೆಯ ಮಲೆಮಹಾದೇಶ್ವರ ಬೆಟ್ಟದಿಂದ ಆರಂಭವಾಗಿರುವ ಮೂರು ಜಾಥಾಗಳು ಮಾ.15ರಂದು ಬೆಂಗಳೂರು ತಲುಪಲಿವೆ. ಅಂದು ಅಲ್ಲಿ ಸಮಾವೇಶ ನಡೆಸಲಾಗುವುದು. ಜಾಥಾಕ್ಕೆರೈತ ಸಂಘಟನೆಗಳು, ಜನ ಸಂಗ್ರಾಮ ಪರಿಷತ್‌, ಅಖೀಲ ಭಾರತ ಪ್ರಜಾಸತ್ತಾತ್ಮಕ ಯುವ ಸಂಘಟನೆ, ಗ್ರಾಮೀಣ ಕೂಲಿಕಾರರ ಸಂಘ ಸೇರಿ ಹಲವು ಸಂಘಟನೆಗಳು ಸಾಥ್‌ ನೀಡಿವೆ. ಕಾರ್ಪೋರೆಟ್‌ ವಾದಿ, ಜಾತಿವಾದಿ, ಕೋಮುವಾದಿ, ಭ್ರಷ್ಟ ಹಾಗೂ ಲಿಂಗ ತಾರತಮ್ಯದ ಶಕ್ತಿಗಳನ್ನು, ನೀತಿಗಳನ್ನು, ಆಚರಣೆಗಳನ್ನು ಹಿಮ್ಮೆಟ್ಟಿಸುವುದು. ಸಮಾನ, ಸ್ವತಂತ್ರ, ಜಾತ್ಯತೀತ, ಭ್ರಷ್ಟಾಚಾರರಹಿತ ಸಮಾಜ ಕಟ್ಟುವುದು ಜಾಥಾದ ಧ್ಯೇಯವಾಗಿದೆ ಎಂದರು.

ಪ್ರಾಧ್ಯಾಪಕ ಎಂ. ಬಸವರಾಜ್‌ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಅನಿಷ್‌ ಪಾಷಾ, ರೈತ ಮುಖಂಡ ಬಲ್ಲೂರು ರವಿಕುಮಾರ್‌, ಹೊನ್ನೂರು ಮುನಿಯಪ್ಪ, ರಂಗನಾಥ್‌ ಆವರಗೆರೆ, ಎಚ್‌. ಮಲ್ಲೇಶಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next