ವಿಜಯಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಹಿಂದ, ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಡಾ.ಅಂಬೇಡ್ಕರ್ ವಿಚಾರವಾದಿಗಳ ಬಳಗದ ವತಿಯಿಂದ ಡಿ.28ರಂದು ಕರೆ ನೀಡಲಾಗಿದ್ದ ವಿಜಯಪುರ ಜಿಲ್ಲಾ ಬಂದನ್ನು ಡಿ.30ಕ್ಕೆ ಮುಂದೂಡಲಾಗಿದೆ ಎಂದು ಮಾಜಿ ಶಾಸಕ ರಾಜು ಆಲಗೂರ ತಿಳಿಸಿದರು.
ಬಂದ್ ವಿಚಾರವಾಗಿ ಶುಕ್ರವಾರ ವಿವಿಧ ಸಂಘಟನೆಗಳ ಮುಖಂಡರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ವ್ಯಂಗ್ಯ, ಅಪಹಾಸ್ಯವಾಗಿ ಮಾತನಾಡಿದ್ದ ಅಮಿತ್ ಶಾ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಡಿ.28ರಂದು ಬಂದ್ಗೆ ಕರೆ ಕೊಡಲಾಗಿತ್ತು. ಆದರೆ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನ ಹಿನ್ನೆಲೆಯಲ್ಲಿ ಬಂದ್ ಮುಂದೂಡಿಕೆ ಮಾಡಲಾಗಿದೆ. ಮುಖ್ಯವಾಗಿ ಶನಿವಾರವೇ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಆದ್ದರಿಂದ ಇಂತಹ ನೋವಿನ ಸಂದರ್ಭದಲ್ಲಿ ಬಂದ್ ಆಚರಣೆ ಸರಿಯಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.
ಡಿ.28ರ ಬಂದ್ಗೆ ರೈತ, ಕಾರ್ಮಿಕ, ಮಹಿಳಾ, ದಲಿತ, ಹಿಂದುಳಿದ ವರ್ಗ, ಅಂಬೇಡ್ಕರ್ವಾದಿ ಹಾಗೂ ಪ್ರಗತಿಪರ ಸಂಘಟನೆಗಳು ಸೇರಿ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಜತೆಗೆ ಎಲ್ಲ ರೀತಿಯಲ್ಲೂ ಅನೇಕ ಸಿದ್ಧತೆಗಳನ್ನೂ ಮಾಡಿದ್ದವು. ಡಾ.ಸಿಂಗ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಈ ದಿನದ ಹೋರಾಟವನ್ನು ಮುಂದೂಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಡಿ.30ರಂದು ಜಿಲ್ಲಾ ಹಾಗೂ ಎಲ್ಲ ತಾಲೂಕು ಕೇಂದ್ರಗಳಲ್ಲೂ ಬೆಳಗ್ಗೆ 8ರಿಂದ 5ರವರೆಗೆ ಬಂದ್ ನಡೆಸಲಾಗುತ್ತದೆ ಎಂದು ವಿವರಿಸಿದರು.
ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಡಾ.ಮನಮೋಹನ್ ಸಿಂಗ್ ನಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಿದ್ದರು. ದೇಶದ ಪ್ರಧಾನಿಯಾಗಿ 10 ವರ್ಷಗಳ ಕಾಲ ಆಡಳಿತ ನಡೆಸಿದವರು. ಅವರ ನಿಧನ ಹಿನ್ನೆಲೆಯಲ್ಲಿ ಡಿ.28ರ ಬದಲಿಗೆ 30ಕ್ಕೆ ಬಂದ್ ಆಚರಣೆಗೆ ತೀರ್ಮಾನಿಸಲಾಗಿದೆ. ನಿಗದಿಯಂತೆ ಸಿದ್ದೇಶ್ವರ ದೇವಸ್ಥಾನದಿಂದ ಗಣಪತಿ ಚೌಕ್, ವಾಜಪೇಯಿ ಚರ್ಕಲ್, ಕಿರಾಣ ಬಜಾರ್, ಗಾಂಧಿ ವೃತ್ತ, ಬಸವೇಶ್ವರ ವೃತದ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಜರುಗಲಿದೆ. ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮುಖಂಡ ಸೋಮನಾಥ ಕಳ್ಳಿಮನಿ, ಈ ಹೋರಾಟವು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಲ್ಲ. ಡಾ.ಅಂಬೇಡ್ಕರ್ ಅವರಿಗೆ ಕೇಂದ್ರ ಸಚಿವ ಅಮಿತ್ ಶಾ ಮಾಡಿರುವ ಅಪಮಾನ ಖಂಡಿಸಿ ರೈತ, ಕಾರ್ಮಿಕ, ಮಹಿಳಾ ಹಾಗೂ ವಿದ್ಯಾರ್ಥಿ ಸಂಘಟನೆಗಳು, ಬೀದಿಬದಿ ವ್ಯಾಪಾರಸ್ಥರು ಸೇರಿ ಎಲ್ಲ ಸಂಘಟನೆಗಳು ಒಂದಾಗಿ ಬಂದ್ಗೆ ಕರೆ ಕೊಟ್ಟಿವೆ. ಅನೇಕ ಸಂಘಟನೆಗಳ ಪ್ರಮುಖರು ಒಟ್ಟಾಗಿ ಬಂದ್ ಹಾಗೂ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.
ಮುಖಂಡರಾದ ರಮೇಶ ಆಸಂಗಿ, ಅನಿಲ ಹೊಸಮನಿ, ಸಿದ್ದು ರಾಯಣ್ಣನವರ, ಮಲ್ಲಿಕಾರ್ಜುನ ಬಟಗಿ, ಮಹಾದೇವಿ ಗೋಕಾಕ್, ಫಯಾಜ್ ಕಲಾದಗಿ ಸೇರಿದಂತೆ ಹಲವರು ನಾಯಕರು ಉಪಸ್ಥಿತರಿದ್ದರು.