Advertisement

ನಾಭಾಗ

03:45 AM Apr 20, 2017 | Harsha Rao |

ನಭಗ ಎನ್ನುವ ರಾಜನಿಗೆ ಹಲವರು ಮಕ್ಕಳು. ಕೊನೆಯವನು ನಾಭಾಗ. ಅವನು ಗುರುಕುಲಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋದವನು ಅಲ್ಲಿಯೇ ವ್ಯಾಸಂಗ ಮಾಡುತ್ತ ಬಹುಕಾಲವನ್ನು ಕಳೆದ. ಈ ಕಡೆ ಅವನ ತಂದೆಯು ತಪಸ್ಸಿಗೆ ಹೋದ. ಅವನ ಮಕ್ಕಳು ನಾಭಾಗನನ್ನು ಬಿಟ್ಟು ತಾವೇ ಎಲ್ಲ ರಾಜ್ಯವನ್ನೂ ಹಂಚಿಕೊಂಡರು. 

Advertisement

ನಾಭಾಗನು ಹಿಂದಿರುಗಿ ಬಂದಾಗ ಅಣ್ಣಂದಿರಲ್ಲಿ ತನ್ನ ಭಾಗವನ್ನು ಕೇಳಿದ. ಅವರು “ನಿನ್ನನ್ನು ಮರೆತೇಬಿಟ್ಟೆವು. ಈಗ ನೀನು ನಮ್ಮ ತಂದೆಯನ್ನೇ ನಿನ್ನ ಪಾಲಾಗಿ ತೆಗೆದುಕೋ’ ಎಂದರು. ನಾಭಾಗನು ತಂದೆಯ ಬಳಿಗೆ ಹೋಗಿ ನಡೆದಿದ್ದನ್ನು ಹೇಳಿದ. ಅವನು “ನಾಭಾಗ, ನಿನ್ನ ಅಣ್ಣಂದಿರು ನಿನಗೆ ಮೋಸ ಮಾಡಿದ್ದಾರೆ. ನಾನು ಹೇಳಿದಂತೆ ಮಾಡು.

ಹತ್ತಿರದಲ್ಲಿಯೇ ಅಂಗೀರಸರೆನ್ನುವ ಋಷಿಗಳು ಹನ್ನೆರಡು ದಿನಗಳ ಯಾಗವನ್ನು ಪ್ರಾರಂಭಿಸಿದ್ದಾರೆ. ಅವರು ದೊಡ್ಡ ಪಂಡಿತರು. ಆದರೆ, ಆರನೆಯ ದಿನದ ಕರ್ಮವನ್ನು ಮಾಡಲು ತಿಳಿಯದೆ ದಿಕ್ಕುಗೆಟ್ಟಿದ್ದಾರೆ. ನೀನುಹೋಗಿ ಆರನೆಯ ದಿನದ ಕರ್ಮಕ್ಕೆ ಅಗತ್ಯವಾದ ಎರಡು ಮಂತ್ರಗಳನ್ನು ಹೇಳಿಕೊಡು. ಯಾಗವು ಮುಗಿದಾಗ ಅವರು ಸ್ವರ್ಗಕ್ಕೆ ತೆರಳುತ್ತಾರೆ. ನಿನಗೆ ಅಪಾರ ಧನವನ್ನು ಕೊಡುತ್ತಾರೆ’ ಎಂದು ಹೇಳಿದ.

ನಾಭಾಗನು ಅದರಂತೆಯೇ ಮಾಡಿದ. ಋಷಿಯು ಅವನಿಗೆ ಅಪಾರ ಧನವನ್ನು ಕೊಟ್ಟ. ಅವನು ಹೊರಡಬೇಕೆಂದಿದ್ದಾಗ ಕಪ್ಪು ದೇಹದ ವ್ಯಕ್ತಿಯು ಕಾಣಿಸಿಕೊಂಡು, “ಈ ಧನವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತೀಯಾ? ಅದು ನನ್ನದು’ ಎಂದು ತಡೆದ.

ನಾಭಾಗನು “ಯಾಗವನ್ನು ಮಾಡಿದ ಅಂಗೀರಸರೇ ಇದನ್ನು ನನಗೆ ಕೊಟ್ಟಿದ್ದಾರೆ’ ಎಂದ. ಇಬ್ಬರಿಗೂ ವಾದ ನಡೆಯಿತು. ಕಡೆಗೆ ಆ ದೀರ್ಘ‌ ದೇಹಿಯು, “ನಾಭಾಗ, ನಾವಿಬ್ಬರೂ ಜಗಳವಾಡುವುದು ಬೇಡ. ನಿನ್ನ ತಂದೆಯನ್ನೇ ಕೇಳ್ಳೋಣ, ಅವನ ತೀರ್ಮಾನವನ್ನು ಇಬ್ಬರೂ ಒಪ್ಪಿಕೊಳ್ಳೋಣ’ ಎಂದ.

Advertisement

ಇಬ್ಬರೂ ನಭಗನ ಬಳಿಗೆ ಹೋದರು. ಅವನು ಇಬ್ಬರ ಮಾತನ್ನು ಕೇಳಿದ. ಅನಂತರ ಮಗನಿಗೆ, “ಮಗೂ, ಈತ ಸಾಕ್ಷಾತ್‌ ರುದ್ರ ದೇವರು. ಹಿಂದೆ ದಕ್ಷನು ಯಾಗ ಮಾಡಿದಾಗಲೇ ಯಾಗದಲ್ಲಿ ಉಳಿದದ್ದೆಲ್ಲ ರುದ್ರ ದೇವನಿಗೆ ಸೇರುತ್ತದೆ ಎಂದು ಋಷಿಗಳು ತೀರ್ಮಾನ ಮಾಡಿದ್ದಾರೆ’ ಎಂದು ಹೇಳಿದ. ನಾಭಾಗನು ಸಂಪತ್ತನ್ನೆಲ್ಲ ರುದ್ರ ದೇವನಿಗೆ ಅರ್ಪಿಸಿ ನಮಸ್ಕರಿಸಿದ. ರುದ್ರನು “ನೀನು ನಿನ್ನ ತಂದೆ ಇಬ್ಬರೂ ಧರ್ಮದಂತೆ ನಡೆದುಕೊಳ್ಳುವವರು. ಈ ದ್ರವ್ಯವನ್ನು ನೀನೇ ಇಟ್ಟುಕೋ. ನಾನು ನಿನಗೆ ಬ್ರಹ್ಮಜ್ಞಾನವನ್ನು ಉಪದೇಶಿಸುತ್ತೇನೆ. ನೀನು ಸಾರ್ವಕಾಲಿಕವಾಗಿ ಸತ್ಯವಂತನಾಗಿರು’ ಎಂದು ಹೇಳಿ ಬ್ರಹ್ಮಜ್ಞಾನವನ್ನು ಉಪದೇಶಿಸಿದ.

– ಪ್ರೊ. ಎಲ್‌.ಎಸ್‌. ಶೇಷಗಿರಿ ರಾವ್‌
(“ಕಿರಿಯರ ಭಾಗವತ’ ಕೃತಿಯಿಂದ)

Advertisement

Udayavani is now on Telegram. Click here to join our channel and stay updated with the latest news.

Next