Advertisement

Punjalkatte; ಸರಕಾರಿ ಶಾಲೆ ಉಳಿಸಲು ನವರಾತ್ರಿ ವೇಷ!

04:59 PM Oct 11, 2024 | Team Udayavani |

ಪುಂಜಾಲಕಟ್ಟೆ: ಸರಕಾರಿ ಶಾಲೆಗಳನ್ನು ಉಳಿಸಲು ಶಿಕ್ಷಕರು, ಪೋಷ ಕರು ಶಾಲಾಭಿವೃದ್ಧಿ ಸಮಿತಿ ದಾನಿಗಳ ನೆರವು ಯಾಚನೆ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸುವುದನ್ನು ನೋಡಿದ್ದೇವೆ. ಇಲ್ಲೊಂದು ಶಾಲೆಯ ಶಾಲಾಭಿವೃದ್ಧಿ ಸಮಿತಿ ನವರಾತ್ರಿ ವೇಷ ಧರಿಸಿ ನಿಧಿ ಸಂಗ್ರಹಿಸಿ ಶಾಲೆಯ ಅಭಿವೃದ್ಧಿಗೆ ಮುಂದಾಗಿದೆ.

Advertisement

ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶವಾದ ದೇವಸ್ಯಮೂಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಸಂತ ಮುದಿಮಾರ ಮತ್ತು ಇಬ್ಬರು ಸದಸ್ಯರು ಹಾಗೂ ಹಿರಿಯ ವಿದ್ಯಾರ್ಥಿಗಳ ತಂಡ ವಿದ್ಯಾ ದೇಗುಲ ಸೇವಾ ಯೋಜನೆ ಎಂಬ ಹೆಸರಿನಲ್ಲಿ ಶಾರ್ದೂಲವೇಷ ಧರಿಸಿ ಗಮನ ಸೆಳೆದಿದ್ದಾರೆ.

ನವರಾತ್ರಿ ಪ್ರಾರಂಭದ ದಿನ ಅ. 3ರಂದು ಶಾಲಾ ಆವರಣದಲ್ಲಿ ಶಾರ್ದೂಲವೇಷ ಧಾರಣೆ ಮತ್ತು ಪರ್ಯಟನೆಗೆ ಚಾಲನೆ ನೀಡಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ, ಶಾಲಾಭಿವೃದ್ಧಿ ಸಮಿತಿಸದಸ್ಯೆ ಪ್ರಮೀಳಾ, ಮೇಲ್ಪತ್ತರ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಸೀತಾರಾಮ ಬಿ.ಕೆ. ಮತ್ತಿತರರು ಉಪಸ್ಥಿತರಿದ್ದರು.

ಶಾಲೆಗೆ ಸೌಕರ್ಯ ಕೊರತೆ
1955ರಲ್ಲಿ ಆರಂಭಗೊಂಡ ದೇವಸ್ಯ ಮೂಡೂರು ಶಾಲೆಗೆ ಈಗ 70ರ ಹರೆಯ. ಈ ಶಾಲೆಗೆ ಸುಮಾರು 1.20 ಎಕ್ರೆ ಸ್ವಂತ ಜಮೀನು ಇದೆಯಾದರೂ ಹತ್ತಾರು ಸಮಸ್ಯೆಗಳಿಂದ ಅದು ಕಷ್ಟದಲ್ಲಿ ಸಿಲುಕಿಕೊಂಡಿದೆ. ರಾಜ್ಯದಲ್ಲಿ ಅದೆಷ್ಟೋ ಶಾಲೆಗಳು ಮೂಲ ಸೌಕರ್ಯದ ಕೊರತೆಯಿಂದ, ವಿದ್ಯಾರ್ಥಿಗಳ ಸಂಖ್ಯೆ ಕುಸಿತದಿಂದ ಮುಚ್ಚಿಹೋಗಿವೆ. ತಮ್ಮ ಊರಿನ ಶಾಲೆ ಕೂಡಾ ಹಾಗಾಗಬಾರದು ಎಂಬ ಕಾಳಜಿಯನ್ನು ಎಸ್‌ಡಿಎಂಸಿ ಮತ್ತು ಊರವರು ಹೊಂದಿದ್ದಾರೆ.

ಈ ಶಾಲೆಯ ಕಟ್ಟಡ ಶಿಥಿಲವಾಗಿದೆ. ಜಾಗದ ಸುತ್ತ ಆವರಣ ಗೋಡೆಯೂ ಇಲ್ಲ. ಶಾಲೆಗೆ ಬೇಕಾದ ಪರಿಕರಗಳು ಕೂಡಾ ಇಲ್ಲ. ಆದರೂ ಈ ಶಾಲೆಯಲ್ಲಿ 84 ವಿದ್ಯಾರ್ಥಿಗಳಿದ್ದಾರೆ. ಈ ಸಂಖ್ಯೆಯನ್ನು ಉಳಿಸಿ ಬೆಳೆಸಬೇಕು ಎಂದರೆ ಮೂಲ ಸೌಕರ್ಯ ಹೆಚ್ಚಬೇಕು ಎನ್ನುವುದು ಎಸ್‌ಡಿಎಂಸಿ ನಿಲುವು.

Advertisement

ಶಾಲೆ ಉಳಿಸುವುದು ಊರಿನ ಹೊಣೆ
ಸರಕಾರಿ ಶಾಲೆ ಉಳಿಸಲು ಜನಪ್ರತಿನಿಧಿಗಳು ಮತ್ತು ಸರಕಾರವನ್ನು ನಂಬಿಕೊಳ್ಳುವ ಬದಲು ಊರವರೇ ತೊಡಗಿಸಿಕೊಳ್ಳುವುದು ಅನಿವಾರ್ಯ ಎನ್ನುತ್ತಾರೆ ಇಲ್ಲಿನ ಶಾಲಾಭಿವೃದ್ಧಿ ಸಮಿತಿಯವರು. ಶಾಲಾಭಿವೃದ್ಧಿ ಸಮಿತಿ ಮತ್ತು ಹಳೆ ವಿದ್ಯಾರ್ಥಿಗಳ ತಂಡ ಈಗಾಗಲೇ ದಾನಿಗಳ ನೆರವಿನಿಂದ ಮೂಲ ಸೌಕರ್ಯಕ್ಕಾಗಿ ಪ್ರಯತ್ನಿಸುತ್ತಿದೆ. ಅದರ ಜತೆಗೆ ಈಗ ನವರಾತ್ರಿ ವೇಷ ಧರಿಸಿ ಹೊರಟಿದೆ. ಎಸ್‌ಡಿಎಂಸಿ ಅಧ್ಯಕ್ಷ ವಸಂತ ಮುದಿಮಾರ ಅವರು ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿದ್ದು ಈ ಕೆಲಸದಲ್ಲಿ ಆಸಕ್ತರಾಗಿದ್ದಾರೆ.

ಗ್ರಾಮೀಣ ಜನರ ಶಿಕ್ಷಣ ದೇಗುಲವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ನಿಟ್ಟಿನಲ್ಲಿ ಒಟ್ಟು 5 ದಿನಗಳಲ್ಲಿ ಶಾರ್ದೂಲ ವೇಷ ಧರಿಸಿ ಹಣ ಸಂಗ್ರಹಿಸುತ್ತೇವೆ. ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶವಂತ ಕಾಂದ್ರೋಡಿ ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯ ಹರೀಶ ನಾಯ್ಕ ಹಾಗೂ ಕೆಲವೊಂದು ಹಿರಿಯ ವಿದ್ಯಾರ್ಥಿಗಳು ಕೂಡಾ ನನಗೆ ಸಾಥ್‌ ನೀಡುತ್ತಿದ್ದಾರೆ.
-ವಸಂತ ಮುದಿಮಾರ ಎಸ್‌ಡಿಎಂಸಿ ಅಧ್ಯಕ್ಷರು

-ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next