Advertisement

Udupi: ನವರಾತ್ರಿಗೆ ವಿಶೇಷ ಅತಿಥಿ ಸಿ/2023 ಎ3 ಧೂಮಕೇತು

12:02 AM Oct 03, 2024 | Team Udayavani |

ಉಡುಪಿ: ಈ ಬಾರಿಯ ನವರಾತ್ರಿಗೆ ಆಕಾಶದಲ್ಲಿ ಅತಿಥಿಯ ದರ್ಶನವಾಗಲಿದೆ. ಅದುವೇ ಇ/2023 ಅ3 ಹೆಸರಿನಿಂದ ಗುರುತಿಸಲ್ಪಟ್ಟ ಧೂಮಕೇತು.

Advertisement

ಒಂದು ಧೂಳು ಹಾಗೂ ಹಿಮ-ಕಲ್ಲಿನ ಉಂಡೆಯು, ಸೌರಮಂಡಲದ ಅಂಚಿನಿಂದ ಸುಮಾರು ಲಕ್ಷ ವರ್ಷಗಳ ಹಿಂದೆ ತನ್ನ ಸ್ಥಾನದಿಂದ ಸೂರ್ಯನ ಸುತ್ತ ಒಂದು ಕಕ್ಷೆಯಲ್ಲಿ ಹೊರಟಿತ್ತು. ಇದನ್ನು ಹಿಂದಿನ ವರ್ಷ ಚೀನದ ತ್ಸುಚಿನ್ಶಾನ್‌ ಒಬ್ಸರ್ವೆಟರಿ ಮತ್ತು ದಕ್ಷಿಣ ಆಫ್ರಿಕಾದ ಅಟ್ಲಾಸ್‌ ಒಬ್ಸರ್ವೆಟರಿಯ ಖಗೋಳಶಾಸ್ತ್ರಜ್ಞರು 2023ರ ಜ. 9ರಂದು ಸೆರೆಹಿಡಿದರು. ಇದು ಆವರ್ತಕವಲ್ಲದ ಧೂಮಕೇತು. ಇದು ಜನವರಿ ತಿಂಗಳ ಮೊದಲಾರ್ಧದಲ್ಲಿ ಮೊದಲನೇ ಬಾರಿ ವೀಕ್ಷಿಸಿರುವ 3ನೇ ಧೂಮಕೇತು.

ಆವರ್ತಕವಲ್ಲದ ಧೂಮಕೇತುಗಳೆಲ್ಲ ಸೌರಮಂಡಲ ಹೊರಭಾಗದಲ್ಲಿ ಊರ್ಟ್‌ ಕ್ಲೌಡ್ ನಿಂದ ಬರುತ್ತವೆ. ಈ ಊರ್ಟ್‌ ಕ್ಲೌಡ್ ಸೂರ್ಯನಿಂದ ಸುಮಾರು 2000 ಖಗೋಳಮಾನ(1 ಖಗೋಳ ಮಾನ = 150 ಮಿಲಿಯ ಕಿ.ಮೀ.: ಭೂಮಿ-ಸೂರ್ಯನ ಮಧ್ಯದ ಅಂತರ)ದಿಂದ ಪ್ರಾರಂಭವಾಗಿ ಸುಮಾರು 2 ಲಕ್ಷ ಖಗೋಳಮಾನದ ವರೆಗೆ ವಿಸ್ತರಿಸುತ್ತದೆ. ಇಲ್ಲಿ ಕೋಟ್ಯಂತರ ಹಿಮ-ಕಲ್ಲಿನ ಉಂಡೆಗಳು ಉಂಟಾಗಿವೆ. ಇ/2023 ಅ3 ಕೂಡ ಈ ಸ್ಥಳದಿಂದಲೇ ಹೊರಟು ಸೂರ್ಯನೆಡೆ ಸಾಗಿದೆ.

ಪ್ರಕಾಶಮಾನ
ಈ ಧೂಮಕೇತುವು ಸೂರ್ಯನ ಸುತ್ತ ಒಂದು ಸುಧೀರ್ಘ‌ ವೃತ್ತಾಕಾರದ ಕಕ್ಷೆಯಲ್ಲಿ ಹಾದು ಹೋಗುತ್ತಿದೆ. ಈ ಕಕ್ಷೆಯಲ್ಲಿ ಸೂರ್ಯನಿಗೆ ಅತೀ ಸಮೀಪವಾಗಿ ಈ ವರ್ಷದ ಸೆ. 27ರಂದು 5.8 ಕೋಟಿ ಕಿ.ಮೀ. ದೂರದಲ್ಲಿತ್ತು. ಈ ಕಕ್ಷೆಯಲ್ಲಿ ಸೂರ್ಯನಿಗೆ ಅತಿ ಸಮೀಪಕ್ಕೆ ಬಂದು ತನ್ನ ಕಕ್ಷೆಯಲ್ಲಿ ಹಾದುಹೋಗುತ್ತಾ ಭೂಮಿಗೆ ಸಮೀಪವಾಗಿ ಈ ಧೂಮಕೇತುವು ಅ.12ರಂದು ಸುಮಾರು 70,67,200ಕಿ. ಮೀ. ದೂರದಲ್ಲಿ 80.5 ಕಿ. ಮೀ. ಪ್ರತಿ ಸೆಕೆಂಡ್‌ನ‌ಷ್ಟು ವೇಗದಲ್ಲಿ ಹಾದು ಹೋಗುತ್ತದೆ. ಈ ಸಮಯವು ಈ ಧೂಮಕೇತು ಗೋಚರಿಸಲು ಪ್ರಕಾಶಮಾನವಾಗಿರುತ್ತದೆ.

ನಕ್ಷತ್ರಗಳ ಗೋಚರ
ಪ್ರಸ್ತುತ ಈ ಧೂಮಕೇತುವು ಮುಂಜಾನೆ 5ರಿಂದ 5.45ರ ನಡುವೆ ಪೂರ್ವ ಕ್ಷಿತಿಜದ ಕಡೆ ಗೋಚರಿಸುತ್ತದೆ. ಮುಂಜಾನೆ ಪೂರ್ವದಲ್ಲಿ ಕ್ಷಿತಿಜದಿಂದ ಸುಮಾರು 25 ಡಿಗ್ರಿ ಎತ್ತರದಲ್ಲಿ ಸಿಂಹ ರಾಶಿಯ ಮಖಾ ನಕ್ಷತ್ರ (ರೆಗ್ಯುಲಸ್‌) ಹಾಗು ಅಜಗರ ನಕ್ಷತ್ರಪುಂಜದ ಅಲ್ಫಾರ್ಡ್‌ ನಕ್ಷತ್ರಗಳು ಗೋಚರಿಸುತ್ತಿವೆ.

Advertisement

ವೀಕ್ಷಣೆ ಸಾಧ್ಯ
ನಮ್ಮ ಕೈಯನ್ನು ನೇರವಾಗಿ, ಕಿರುಬೆರಳು ಹಾಗು ಹೆಬ್ಬೆರಳನ್ನು ಚಾಚಿ ಹಿಡಿದುಕೊಂಡರೆ ಇವೆರಡರ ಮಧ್ಯಾಂತರ 25 ಡಿಗ್ರಿ ಆಗಿರುತ್ತದೆ. ಹಾಗಾಗಿ ಈ ಎರಡು ನಕ್ಷತ್ರಗಳನ್ನು ಕ್ಷಿತಿಜದಿಂದ 25 ಡಿಗ್ರಿ ದೂರದಲ್ಲಿ ಗುರುತಿಸಬಹುದು. ಈ ಎರಡು ನಕ್ಷತ್ರಗಳನ್ನು ಉಪಯೋಗಿಸಿ ಕ್ಷಿತಿಜದ ಕಡೆ ಸಮಬಾಹು ತ್ರಿಕೋನವನ್ನು ಕಲ್ಪಿಸಿದರೆ, ಆ ತ್ರಿಕೋನದ ಮೂರನೆಯ ಶೃಂಗ ಇರುವಲ್ಲಿ ಈ ಧೂಮಕೇತುವನ್ನು ಗುರುತಿಸಬಹುದು. ಈ ಧೂಮಕೇತುವು ಅ.7ರ ವರೆಗೆ ಮ್ಯಾಗ್ನಿಟ್ಯೂಡ್‌ 2.0ರಷ್ಟು ಪ್ರಮಾಣದಲ್ಲಿ ಗೋಚರಿಸುತ್ತದೆ (ಮ್ಯಾಗ್ನಿಟ್ಯೂಡ್‌ ಕಿರಿದಾದಷ್ಟು ಕಾಯವು ಹೆಚ್ಚು ಪ್ರಕಾಶಮಾನವಾಗಿರುತ್ತದೆ). ಬರಿಗಣ್ಣಿನಲ್ಲೂ ನೋಡಲು ಸಾಧ್ಯ. ಈ ಅವಧಿಯಲ್ಲಿ ಈ ಧೂಮಕೇತುವನ್ನು ಗೋಚರಿಸಲು ಸಾಧ್ಯವಾಗದಿದ್ದರೆ ಅ.15ರಿಂದ 30ರ ವರೆಗೆ ಸಂಜೆ ಆಕಾಶದಲ್ಲಿ ಶುಕ್ರ ಗ್ರಹದ ಬಲಬದಿಯಲ್ಲಿ (ಉತ್ತರ ದಿಕ್ಕಿನಲ್ಲಿ) ಗುರುತಿಸಬಹುದು. ದೂರಬಿನ್‌ ಅಥವಾ ಸಣ್ಣ ದೂರದರ್ಶಕದ ಮೂಲಕ ಈ ಧೂಮಕೇತುವನ್ನು ಈ ಅವಧಿಯಲ್ಲಿ ನೋಡಿ ಆನಂದಿಸಬಹುದು ಎಂದು ಹವ್ಯಾಸಿ ಖಗೋಳ ವೀಕ್ಷಕ ಹಾಗೂ ಮಣಿಪಾಲ್‌ ಸೆಂಟರ್‌ ಫಾರ್‌ ನ್ಯಾಚುರಲ್‌ ಸೈನ್ಸಸ್‌ನ ರಿಸರ್ಚ್‌ ಸ್ಕಾಲರ್‌ ಅತುಲ್‌ ಭಟ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next