Advertisement

Mangaluru: ಈ ಮೇಸ್ಟ್ರು ಹುಲಿ ತಂಡಗಳ ತಾಯಿ ಹುಲಿ!

01:50 PM Oct 09, 2024 | Team Udayavani |

ಮಹಾನಗರ: ತುಳುನಾಡಿನಲ್ಲಿ ಹುಲಿ ವೇಷ ಕುಣಿತಕ್ಕೆ ರಾಜ ಮರ್ಯಾದೆ. ಎಲ್ಲ ಹುಲಿ ತಂಡಗಳು ಎಲ್ಲ ಕಡೆಯಲ್ಲಿ ಕುಣಿಯುವುದಿಲ್ಲ. ಒಂದು ಕಡೆ ಒಂದೆರಡು ಮಾತ್ರ. ಆದರೆ, ನಗರದ ನಿವೃತ್ತ ಪ್ರಾಂಶುಪಾಲರೋರ್ವರ ಮನೆ ಅಂಗಳದಲ್ಲಿ ಬರೋಬ್ಬರಿ 45 ವರ್ಷದಿಂದ ನಿರಂತರವಾಗಿ 15ಕ್ಕೂ ಅಧಿಕ ಹುಲಿ ವೇಷದ ತಂಡಗಳು ಬಂದು ಕುಣಿಯುತ್ತವೆ!

Advertisement

ಮಂಗಳಾದೇವಿ ಸಮೀಪದಲ್ಲಿರುವ ಪ್ರೊ| ಉದಯ್‌ ಕುಮಾರ್‌ ಅವರ ಮನೆ ಹುಲಿ ವೇಷದ ತಂಡಗಳಿಗೆ ಅರಮನೆ ಇದ್ದ ಹಾಗೆ. ಇಲ್ಲಿ ಮೊದಲು ಕುಣಿದರೆ ಶುಭವಾಗುತ್ತದೆ ಎಂಬ ನಂಬಿಕೆ ಬಹು ಕಾಲದಿಂದ ಇದೆ. ಹೀಗಾಗಿ ಬಹುತೇಕ ತಂಡಗಳಿಗೆ ಈ ಮನೆಯೇ ಆಧಾರ ಶಕ್ತಿ. ವಿವಿಧ ಕ್ಷೇತ್ರದಲ್ಲಿ ಒಂದು, ಎರಡು, ಮೂರನೇ ಮರ್ಯಾದಿ (ಗೌರವ) ಸ್ವೀಕರಿಸುವ ತಂಡಗಳ ಸಹಿತ ಬಲಾಡ್ಯ ಹುಲಿ ತಂಡಗಳು ಪ್ರೊ|ಉದಯ್‌ ಕುಮಾರ್‌ ಅವರ ಮನೆಯ ಅಂಗಳವನ್ನು ಮೆಟ್ಟಿಯೇ ಮುಂದೆ ಹೋಗುವುದು. ಎಲ್ಲ ತಂಡಗಳೂ ಉದಯ್‌ ಕುಮಾರ್‌ ಅವರು ‘ಮೇಸ್ಟ್ರು’ ಎಂದು ಗೌರವಿಸುತ್ತವೆ.

ಇವರು ಒಂದು ರೀತಿಯ ಹುಲಿ ವೇಷ ಮತ್ತು ತಂಡಗಳಿಗೆ ಸಂಬಂಧಿಸಿ ಡಿಕ್ಷನರಿ ಇದ್ದ ಹಾಗೆ. ಹುಲಿ ವೇಷಗಳ ಇತಿಹಾಸ ಮತ್ತು ವರ್ತಮಾನಗಳಿಗೆ ಕೊಂಡಿ. ಹಿಂದಿನ ಅವಧಿಯಲ್ಲಿ ಹುಲಿ ವೇಷ ಹೇಗಿತ್ತು ಎಂಬ ಪ್ರಶ್ನೆಗೆ ಮೇಷ್ಟ್ರು ಹೇಳುವುದು ಹೀಗೆ: ‘1970ರ ಸುಮಾರಿನಲ್ಲಿ ರೈಲ್ವೇ ಟ್ರ್ಯಾಕ್‌ನಲ್ಲಿ ಚಪ್ಪಲು ಹಾಕದೆ ನಡೆದುಕೊಂಡು ಬಂದು ಹುಲಿ ವೇಷ ಕುಣಿಯುತ್ತಿದ್ದರು. 6 ಸ್ಟ್ಯಾಂಡ್ ಗ್ಯಾಸ್‌ಲೈಟ್‌ ಹಿಡಿದುಕೊಂಡು ಬರುತ್ತಿದ್ದರು. ಆಗ ಕುಣಿಯುವ ಚಂದವೇ ಅದ್ಬುತ. ಅರಸಿನ, ಚಿಮಿಣಿ ಕರಿ, ಮೊಟ್ಟೆಯ ಬಿಳಿ ಸಿಪ್ಪೆ ಹಾಕಿ ಅರೆದು ಬಿಸಿ ಮಾಡಿ ದೇಹಕ್ಕೆ ಬಳಿದು ರಂಗ್‌ ಹಾಕಲಾಗುತ್ತಿತ್ತು. ಅದಕ್ಕೂ ಮುನ್ನ ಕಡ್ಲೆಹಿಟ್ಟಿನ ಸ್ನಾನ ಆಗಬೇಕು. ಬಳಿಕ ಸಾಬೂನು ಸ್ನಾನ ಮಾಡಿ ರಂಗ್‌ಗೆ ನಿಲ್ಲುತ್ತಿದ್ದರು. ಗ್ಯಾಸ್‌ಲೈಟ್‌ ಬೆಳಕಿಗೆ ಕುಣಿತ ನೋಡುವುದು ಅಂದ. ಮನೆಯ ಮುಂಭಾಗ ಹುಲಿ ವೇಷಧಾರಿ ಕುಣಿಯುವ ಮನೆಯ ಛಾವಡಿಯಲ್ಲಿ ಏನೋ ಒಂದು ‘ವೈಬ್ರೇಶನ್‌’ ಆಗುತ್ತಿತ್ತು.

ರಜೆಯೇ ಮಾಡದ, ಮೊಬೈಲ್‌ ಹಿಡಿಯದ ಶಿಕ್ಷಕ!
ದೇಶದೆಲ್ಲೆಡೆ ದೊಡ್ಡ ಶಿಷ್ಯ ಸಮೂಹ ಹೊಂದಿರುವ ಪ್ರೊ| ಉದಯ್‌ ಕುಮಾರ್‌ ಅವರು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲರು. 33 ವರ್ಷಗಳ ಶಿಕ್ಷಣ ಸೇವೆ. ವಿಶೇಷವೆಂದರೆ ಅವರು ಒಂದು ದಿನವೂ ರಜೆ ತೆಗೆದುಕೊಳ್ಳದ ಹಾಗೂ ತರಗತಿ ಮಿಸ್‌ ಮಾಡದ ಟೀಚರ್‌. ಆಗಿನಿಂದ ಇಂದಿನವರೆಗೆ ನಡಿಗೆಗೇ ಒಗ್ಗಿಕೊಂಡಿರುವ ಅವರು ದೂರ ಪ್ರಯಾಣಕ್ಕೆ ಮಾತ್ರ ಬಸ್‌ ಹಿಡಿಯುತ್ತಾರೆ. ಈಗಲೂ ಮೊಬೈಲ್‌ ಹಿಡಿದುಕೊಳ್ಳದ ಅವರು ಲ್ಯಾಂಡ್‌ ಲೈನ್‌ ಫೋನ್‌ನಲ್ಲಿ ಮಾತ್ರ ಸಂಪರ್ಕಕ್ಕೆ ಸಿಗುತ್ತಾರೆ.

Advertisement

ಯಕ್ಷಗಾನದಂತೆ ಹುಲಿವೇಷಕ್ಕೆ ಕೂಡಾ ಮಾನ್ಯತೆ ಸಿಗುವಂತಾಗಲಿ
ಬಾಲ್ಯದಿಂದಲೂ ನನಗೆ ಹುಲಿ ವೇಷದ ಬಗ್ಗೆ ಭಾರೀ ಆಸಕ್ತಿ. ಆ ಕುಣಿತದ ಗತ್ತು ಗೈರತ್ತು ನೋಡುವುದೇ ಚಂದ. ನಮ್ಮ ಮನೆಗೆ ಅಂದಿನಿಂದ ಇಂದಿನವರೆಗೂ ಪ್ರತೀ ವರ್ಷವೂ ಹಲವಾರು ತಂಡಗಳು ಬಂದು ಪ್ರದರ್ಶನ ನೀಡುತ್ತವೆ. ಬಹಳಷ್ಟು ನಿಷ್ಠೆಯಿಂದ ಹುಲಿ ವೇಷ ಹಾಕುವ ಜನರಿದ್ದಾರೆ. ಸಸ್ಯಹಾರ ಸೇವಿಸುತ್ತ ನಿಷ್ಠೆ ಪಾಲಿಸುವವರು ಇದ್ದಾರೆ. ಹುಲಿ ವೇಷ ಗ್ರೇಟ್‌ ಆರ್ಟ್‌. ಯಕ್ಷಗಾನಕ್ಕೆ ಮಾನ್ಯತೆ ಸಿಕ್ಕಿದೆ. ಆದರೆ, ಹುಲಿ ವೇಷಕ್ಕೆ ಯಾವ ಮಾನ್ಯತೆಯೂ ಇಲ್ಲ. ಇದರ ಬಗ್ಗೆ ಮಾತನಾಡುವವರೂ ಇಲ್ಲ ಎನ್ನುತ್ತಾರೆ ಉದಯ್‌ ಕುಮಾರ್‌.

ಫ್ರಾನ್ಸ್‌ನ ಅಧ್ಯಕ್ಷರ ಮೆರವಣಿಗೆಯಲ್ಲಿ ಹುಲಿ ವೇಷ!
ಫ್ರಾನ್ಸ್‌ನ ಪ್ರವಾಸಿಗರು ಮಂಗಳೂರಿಗೆ ಬಂದಿದ್ದಾಗ ಪ್ರೊ|ಉದಯ್‌ ಕುಮಾರ್‌ ಅವರ ಮನೆಯಲ್ಲಿ ನಡೆದಿದ್ದ ಹುಲಿ ಕುಣಿತವನ್ನು ಗಮನಿಸಿದ್ದರು. ಅದರಂತೆ ಹುಲಿ ವೇಷವನ್ನು ಜರ್ಮನ್‌ಗೆ ಕರೆದುಕೊಂಡು ಬರುವ ವ್ಯವಸ್ಥೆಯನ್ನು 2000ರಲ್ಲಿ ಮಾಡಲಾಗಿತ್ತು. ಆಗ ಫ್ರಾನ್ಸ್‌ನ ಅಧ್ಯಕ್ಷರ ಮೆರವಣಿಗೆಗೆ ಹುಲಿ ವೇಷವೇ ಪ್ರಧಾನವಾಗಿತ್ತು. ಜರ್ಮನ್‌ಗೂ ತೆರಳಿದ್ದರು. ಅಲ್ಲಿನ ಪತ್ರಿಕೆಯಲ್ಲಿ ಕರಾವಳಿಯ ಹುಲಿ ವೇಷದ ಸುದ್ದಿ ಬಂದಿತ್ತು!

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next