Advertisement

Sullia: ಹುಲಿಗಳಿಗೆ ಸಡ್ಡು ಹೊಡೆವ ಸಿಂಹಗಳು!; ನವರಾತ್ರಿ ಆರಂಭದಿಂದ ಕೊನೆವರೆಗೆ ಮಾತ್ರ ಸೇವೆ

12:49 PM Oct 07, 2024 | Team Udayavani |

ಸುಳ್ಯ: ನವರಾತ್ರಿ ಸಂದರ್ಭದಲ್ಲಿ ಕರಾವಳಿ, ತುಳುನಾಡು ಭಾಗದಲ್ಲಿ ಹುಲಿ ವೇಷ ಕುಣಿತವೇ ಎಲ್ಲರ ಗಮನ ಸೆಳೆಯುತ್ತದೆ. ಆದರೆ ಸುಳ್ಯ, ಕಡಬ ಭಾಗದಲ್ಲಿ ಹುಲಿಗಳಿಗಿಂತ ಸಿಂಹಗಳ ಅಬ್ಬರವೇ ಹೆಚ್ಚು!

Advertisement

ದೇವಿಯನ್ನು ಸಿಂಹವಾಸಿನಿ ಎಂದೇ ಕರೆಯುತ್ತೇವೆ. ನವರಾತ್ರಿ ವೇಳೆ ಸಿಂಹಗಳು ಸಂಭ್ರಮಿಸುತ್ತವೆ ಎಂಬ ಕಾರಣಕ್ಕೆ ಶಾರ್ದೂಲ ಕುಣಿತ ಸೇವೆ ಹಿಂದಿನಿಂದಲೂ ಪ್ರಸಿದ್ಧ. ಇದು ಈಗಲೂ ಮುಂದುವರಿದಿದೆ. ಅಚ್ಚರಿ ಎಂದರೆ ಹುಲಿ ಕುಣಿತ ಎಲ್ಲೆಡೆ ವ್ಯಾಪಕತೆಯನ್ನು ಪಡೆಯುತ್ತಿರುವ ನಡುವೆ ಸಿಂಹ ನೃತ್ಯದ ತಂಡಗಳೂ ಹೆಚ್ಚುತ್ತಿವೆ.

ಸಿಂಹದ ಬಣ್ಣದ ಅಂಗಿ ಮತ್ತು ಪ್ಯಾಂಟ್‌ ಧರಿಸಿ, ಬಾಲ ಸಿಕ್ಕಿಸಿ, ತಲೆಗೆ ಸಿಂಹದಂತಹ ಮುಖವಾಡ ಧರಿಸಿ ಕುಣಿಯುವ ಶಾರ್ದೂಲ ನೃತ್ಯ ಹಿಂದೆ ದೇವರ ಸೇವೆಯ ಅವಿಭಾಜ್ಯ ಅಂಗವಾಗಿತ್ತು. ಶಾರ್ದೂಲ ಟೀಮ್‌ಗಳೇ ಇದ್ದವು. ಸಿಂಹದೊಂದಿಗೆ ಕೈಯಲ್ಲಿ ಕೋವಿ ಹಿಡಿದ ಬೇಟೆಗಾರ. ಸಿಂಹ ಮತ್ತು ಬೇಟೆಗಾರನ ಜುಗಲ್ಬಂದಿ ಭಾರಿ ಮನರಂಜನೆ ನೀಡುತ್ತದೆ. ಕೆಲವು ಕಡೆಗಳಲ್ಲಿ ಬೇಟೆಗಾರನ ಬದಲು ಜೋಕರ್‌ ವೇಷ ಧರಿಸಿದ ವ್ಯಕ್ತಿಯನ್ನೂ ಕಾಣಬಹುದಾಗಿದೆ.

ಇತ್ತೀಚೆಗೆ ಹಳದಿ ಸಿಂಹದ ಜತೆಗೆ ಬಿಳಿ ಸಿಂಹ, ಕಪ್ಪು ಸಿಂಹಗಳೂ ಇವೆ. ಕೆಲವರು ಇದೇ ಮಾದರಿಯಲ್ಲಿ ಕರಡಿ ವೇಷ ಹಾಕುತ್ತಾರೆ. ಗ್ರಾಮೀಣ ಭಾಗದಲ್ಲಿ ದಿರಸಿನ ಹುಲಿಗಳೂ ಇವೆ. ಇದಕ್ಕೆ ಬೊಂಬೆ ಮತ್ತು ಮತ್ತಿತರ ವೇಷ ಧರಿಸಿ ಸಾಥ್‌ ಸಿಗುತ್ತದೆ. ಕುಣಿತಕ್ಕೆ ತಾಸೆ, ಡೋಲು ನುಡಿಸುವವರು ಹಿಮ್ಮೇಳದಲ್ಲಿರುತ್ತಾರೆ.

ತಂಡಗಳ ಸಂಖ್ಯೆ ಹೆಚ್ಚಳ

  • ಕೆಲವು ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ನವರಾತ್ರಿ ಸಂದರ್ಭದಲ್ಲಿ ಊರಿನಲ್ಲಿ ಒಂದು ಶಾರ್ದೂಲ ತಿರುಗಾಡುತ್ತಿದ್ದರೆ ಈಗ 4-5 ಶಾರ್ದೂಲ ತಂಡಗಳು ಭೇಟಿ ನೀಡುತ್ತಿದೆ. ಪೇಟೆಗಳಲ್ಲಿ ಸುಮಾರು 20-30 ತಂಡಗಳನ್ನು ಕಾಣಬಹುದಾಗಿದೆ.
  • ಶಾರ್ದೂಲಕ್ಕೆ ಹುಲಿ ವೇಷಕ್ಕಿಂತ ಕಡಿಮೆ ಶ್ರಮ, ಕಡಿಮೆ ಖರ್ಚು. ತಂಡದಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನ ಸಾಕು.
  • ಯಕ್ಷಗಾನದಲ್ಲಿ ಸಿಂಹ ಮತ್ತು ಮಹಿಷಾಸುರನ ನಡುವೆ ಯುದ್ಧ ನಡೆಯುವ ಮಾದರಿಯಲ್ಲಿ ಕೆಲವು ತಂಡಗಳು ಪ್ರದರ್ಶನ ನೀಡುವುದು ಉಂಟು.
  • ಇತ್ತೀಚೆಗೆ ಹುಲಿ ಕುಣಿತದ ಹಾಗೆ ಸಿಂಹಗಳೂ ಕಸರತ್ತು ಪ್ರದರ್ಶನಕ್ಕೆ ಆರಂಭಿಸಿವೆ.
Advertisement

ಕೆಲವು ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ಸಿಂಹ ವೇಷ ಧರಿಸಿ ಕುಣಿಯುವ ತಂಡಗಳ ಸಂಖ್ಯೆ ಹೆಚ್ಚುತ್ತಿದೆ. ಈ ಮೊದಲು ಒಂದೆರಡು ತಂಡಗಳು ಮಾತ್ರವೇ ಮನೆ ಮನೆಗೆ ಭೇಟಿ ನೀಡಿ ಕುಣಿಯುತ್ತಿದ್ದರೆ ಇಂದು ತಂಡಗಳ ಸಂಖೆಯ 10-20ಕ್ಕೂ ಅಧಿಕ ಏರಿಕೆಗೊಂಡಿದೆ. ನವರಾತ್ರಿ ಸಂದರ್ಭದಲ್ಲಿ ಸಿಂಹ ವೇಷ ಧರಿಸಿ ಕುಣಿಯುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
-ಎ.ಕೇಪು ಅಜಿಲ, ಸುಳ್ಯ, ವಿದ್ವಾಂಸರು, ಅರೆಭಾಷೆ-ತುಳು ಸಾಹಿತಿ, ಜಾನಪದ ಕಲಾವಿದರು, ದೆ„ವ ನರ್ತಕರು ಸುಳ್ಯ

ಶಾರ್ದೂಲ ನವರಾತ್ರಿಗೆ ಸೀಮಿತ
ಹುಲಿ ವೇಷವನ್ನು ನವರಾತ್ರಿ, ಕೃಷ್ಣ ಜನ್ಮಾಷ್ಟಮಿ ಸೇರಿ ಹಲವು ಸಂದರ್ಭಗಳಲ್ಲಿ ಕಾಣಬಹುದು. ಆದರೆ, ಶಾರ್ದೂಲ ವೇಷ ನವರಾತ್ರಿಯ ಒಂಬತ್ತು ದಿನಗಳು ಮಾತ್ರ. ನವರಾತ್ರಿಯ ಮೊದಲ ದಿನ ಶಾರ್ದೂಲ ವೇಷ ತಂಡ ಕುಣಿತ ಆರಂಭಿಸಿದರೆ, 9ನೇ ದಿನ ದೇವಿ ಕ್ಷೇತ್ರದಲ್ಲಿ ಸೇವೆ ನೀಡುವಲ್ಲಿಗೆ ಕುಣಿತ ಆ ವರ್ಷಕ್ಕೆ ಅಂತ್ಯವಾಗುತ್ತದೆ. ಇದರಲ್ಲೂ ಹರಕೆ ಸಮರ್ಪಿಸಲು ವೇಷ ಧರಿಸಿ ಕುಣಿಯುವುದು ಇದೆ.

-ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next