Advertisement

Puttur:ಇಲ್ಲಿ ವೇಷಗಳಿಗೆ ಪ್ರವೇಶವಿಲ್ಲ;ನೇಮದ ದಿನ ವ್ಯಾಪಾರವಿಲ್ಲ, ಎಲ್ಲವೂ ಉಚಿತವಾಗಿ ವಿತರಣೆ

02:36 PM Oct 10, 2024 | Team Udayavani |

ಪುತ್ತೂರು: ನವರಾತ್ರಿಯ ಹೊತ್ತಲ್ಲಿ ನಾನಾ ಕಡೆಗಳಲ್ಲಿ ಪಿಲಿ, ಸಿಂಹ, ಪ್ರೇತ‌ ವೇಷಧಾರಿಗಳ ಅಬ್ಬರ, ತಾಸೆಪೆಟ್ಟಿನ ಗೌಜಿ ಗದ್ದಲವಿದ್ದರೆ, ಪುತ್ತೂರಿನ ಈ ಗ್ರಾಮದಲ್ಲಿ ಅವೆಲ್ಲವೂ ನಿಷಿದ್ಧ. ಇಲ್ಲಿ ಅನಾದಿ ಕಾಲದ ನಂಬಿಕೆ, ಕಟ್ಟುಪಾಡುಗಳ ಪರಿಪಾಲನೆ ಎಲ್ಲಕ್ಕಿಂತಲೂ ಮಿಗಿಲು..!

Advertisement

ತುಳುನಾಡಿನ ದೈವಾರಾಧನೆಯ ನಂಬಿಕೆಯನ್ನು ಇಂದಿಗೂ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿರುವ ಗ್ರಾಮ ಬಲ್ನಾಡು. ಶ್ರೀ ಉಳ್ಳಾಲ್ತಿ- ದಂಡನಾಯಕ ದೈವಸ್ಥಾನದ ನಂಬಿಕೆಗಳನ್ನು ಇಂದಿಗೂ ಇಲ್ಲಿನ ಜನ ಮರೆಯದೇ ಪಾಲಿಸುತ್ತಾರೆ. ಹೀಗಾಗಿ ವರ್ಷದ ಯಾವುದೇ ದಿನಗಳಲ್ಲಿ ಇಲ್ಲಿ ಪಿಲಿ, ಸಿಂಹ, ಪ್ರೇತ ಸಹಿತ ಯಾವುದೇ ಬಣ್ಣ ಬಳಿಯುವ ವೇಷ ಗ್ರಾಮದ ಗಡಿಯೊಳಗೆ ಪ್ರವೇಶಿಸುವುದಿಲ್ಲ.

ದಂಡನಾಯಕನ ಮತ್ಸರದ ತಂಗಿ.!
ಈ ನಂಬಿಕೆಗೆ ಕಾರಣವೂ ಇದೆ. ‘ಯಾನ್‌ ದಂಡನಾಯಕನ ಮಚ್ಚರದ ತಂಗಡಿ’ ಎಂದು ಬಲಾ°ಡ್‌ ಉಳ್ಳಾಲ್ತಿ ತನ್ನ ನುಡಿಕಟ್ಟಿನಲ್ಲಿ ಹೇಳುತ್ತದೆ. ಈ ಮತ್ಸರದ ಪ್ರತೀಕವೋ ಎಂಬಂತೆ ಇಲ್ಲಿ ಮಹಿಳೆಯರು ಉಳ್ಳಾಲ್ತಿ ನೇಮ ನೋಡುವುದಿಲ್ಲ. ಪರಿಸರದಲ್ಲಿ ಕಾಲಿಗೆ ಬೆಳ್ಳಿ ಗೆಜ್ಜೆ ಕಟ್ಟಬಾರದು, ತಲೆಗೆ ಮಲ್ಲಿಗೆಯ ಜಲ್ಲಿ ಬಿಡಬಾರದು, ಮುಖಕ್ಕೆ ಬಣ್ಣ ಹಚ್ಚಿ ಅಭಿನಯ ಮಾಡಬಾರದು, ಮನೆಯಲ್ಲಿ ಜೋಕಾಲಿ ಕಟ್ಟಬಾರದು ಇತ್ಯಾದಿ ನಂಬಿಕೆಗಳಿವೆ.

ಬಲ್ನಾಡು ನೇಮದ ದಿನ ಈ ಪರಿಸರದಲ್ಲಿ ಯಾವುದೇ ರೀತಿಯ ಸಂತೆ ವ್ಯಾಪಾರ ವಹಿವಾಟು ನಡೆಯುವುದಿಲ್ಲ. ಇಲ್ಲಿ ಯಾವುದೇ ವಸ್ತುವನ್ನು ಇಲ್ಲಿ ಮಾರಾಟ ಮಾಡಬಾರದು ಎಂಬ ನಂಬಿಕೆ ಇದೆ. ಸಂಘ ಸಂಸ್ಥೆಗಳು, ದಾನಿಗಳು ಮಜ್ಜಿಗೆ, ಎಳನೀರು, ನೀರು ಉಚಿತವಾಗಿ ಭಕ್ತರಿಗೆ ಹಂಚುತ್ತಾರೆ. ನೇಮಕ್ಕೆ ಹೋಗುವವರಿಗೆ ವಾಹನದವರು ಬಾಡಿಗೆ ಕೂಡ ಪಡೆಯುವುದಿಲ್ಲ. ಪುತ್ತೂರು ನಗರದಿಂದ ಐದು ಕಿ.ಮೀ.ದೂರ ತನಕ ಅಟೋಗಳದ್ದು ಉಚಿತ ಸೇವೆ. ಕ್ಷೇತ್ರಕ್ಕೆ ಭಕ್ತರು ಸಮರ್ಪಿಸಿದ ಸಾವಿರಾರು ಸೀರೆಗಳನ್ನು ಏಲಂ ಮಾಡದೆ ಭಕ್ತರಿಗೆ ಉಚಿತವಾಗಿ ಹಂಚಲಾಗುತ್ತದೆ.

9 ದಿನ 9 ಮನೆತನದ ಪೂಜೆ
ಬಲ್ನಾಡಿನ ಉಳ್ಳಾಲ್ತಿ ದೈವಸ್ಥಾನದಲ್ಲಿ ಒಂಭತ್ತು ದಿನಗಳ ನವರಾತ್ರಿ ವಿಶೇಷ ರೀತಿಯಲ್ಲಿ ನಡೆಯುತ್ತದೆ. ಅನಾದಿ ಕಾಲದಿಂದ 9 ದಿನ ರಂಗಪೂಜೆ, ದುರ್ಗಾಪೂಜೆ ಸಲ್ಲಿಸಲು ಒಂಭತ್ತು ಮನೆತನೆಗಳನ್ನು ನಿಗದಿಪಡಿಸಲಾಗಿದೆ. ನೆಲ್ಲಿತ್ತಾಯ-ಕಾಂತಿಲ (1 ನೇ ದಿನ), ಕಟ್ಟೆಮನೆ (2), ಮೊದಲಾಜೆ-ಹಾರಕೆರೆ-ಮೇಲಿನ ಬಲಾ°ಡು (3), ಮೊದಲಾಜೆ (4), ಮೊದಲಾಜೆ(5), ಓಟೆ ಮನೆ (6), ನೆಕ್ಕರೆ (7), ಕಬ್ಬಿನ ಹಿತ್ತಿಲು (8), ಭಂಡಾರದ ಸ್ಥಾನ (9) ಈ ಮನೆತನಗಳು. ನಾಲ್ಕು ಮನೆತನೆಗಳಿಗೆ ರಂಗಪೂಜೆ, ಐದು ಮನೆತನೆಗಳಿಗೆ ದುರ್ಗಾ ಪೂಜೆ. ಉಳಿದ ದಿನ ಇತರ ಭಕ್ತರಿಗೆ ಅವಕಾಶ.

Advertisement

ಬಲ್ನಾಡು ಗ್ರಾಮದಲ್ಲಿ ಮುಖಕ್ಕೆ ಬಣ್ಣ ಹಚ್ಚಿ ಅಭಿನಯ ಮಾಡಬಾರದು ಎಂಬ ನಂಬಿಕೆ ಇಲ್ಲಿನದ್ದು. ಜತೆಗೆ ನವರಾತ್ರಿ ಸಂದರ್ಭದಲ್ಲಿ ಒಂಭತ್ತು ದಿನಗಳ ಕಾಲ ಮನೆತನೆಗಳು ಬೇರೆ-ಬೇರೆ ದಿನ ಸೇವೆ ಸಮರ್ಪಿಸುತ್ತದೆ. ಇದು ಸಾವಿರಾರು ವರ್ಷ ಹಿಂದಿನ ನಂಬಿಕೆ. ಇದನ್ನು ಈಗಲೂ ಶ್ರದ್ಧೆ, ಭಕ್ತಿಯಿಂದ ಪಾಲಿಸಲಾಗುತ್ತಿದೆ.
-ಪರಮೇಶ್ವರ ಗೌಡ ಕಟ್ಟೆಮನೆ, ದಂಡನಾಯಕನ ಪಾತ್ರಿ

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next