ಬೆಂಗಳೂರು: “ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ದೊಡ್ಡ ತಿಮಿಂಗಿಲಗಳನ್ನು ಬಿಟ್ಟುಬಿಡುವ ನೀವು ಕಾನೂನಿನ ನೆಪದಲ್ಲಿ ಬಡಪಾಯಿಗಳಿಗೆ ಏಕೆ ಶಿಕ್ಷೆ ನೀಡುತ್ತೀರಿ? ರೌಡಿಶೀಟ್ ತೆರೆಯುವುದು ತಮಾಷೆ ಎಂದುಕೊಂಡಿದ್ದೀರಾ?’ ಆರೋಪಿಗಳನ್ನು ರೌಡಿ ಪಟ್ಟಿಗೆ ಸೇರಿಸುವ ಕುರಿತ ಪೊಲೀಸರ ಕಾರ್ಯವೈಖರಿಗೆ ಹೈಕೋರ್ಟ್ ಕಿಡಿಕಾರಿದ್ದು ಹೀಗೆ.
ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ತಮ್ಮನ್ನು ರೌಡಿ ಪಟ್ಟಿಗೆ ಸೇರಿಸಿದ್ದು, ಆ ಪಟ್ಟಿಯಿಂದ ಕೈಬಿಡುವಂತೆ ಕೋರಿ ಸೊಣ್ಣೇಗೌಡ ಎಂಬುವವರೂ ಸೇರಿ 10 ಮಂದಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಅವರಿದ್ದ ಏಕ ಸದಸ್ಯ ಪೀಠ, ಪೊಲೀಸರ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಅರ್ಜಿದಾರರ ವಿರುದ್ಧ ರೌಡಿ ಪಟ್ಟಿ ತೆರೆದ ಸಂಬಂಧ ಸೂಕ್ತ ದಾಖಲೆ ಒದಗಿಸಲು ವಿಫಲರಾದ ಪೊಲೀಸ್ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ, ಕಾನೂನು ಸುವ್ಯವಸ್ಥೆ ನೆಪದಲ್ಲಿ ರೌಡಿ ಪಟ್ಟಿ ತೆಗೆಯುವುದನ್ನು ನೀವು ತಮಾಷೆ ಎಂದು ತಿಳಿದುಕೊಂಡಿದ್ದೀರಾ? ಅದಕ್ಕೆ ಒಂದು ಪರಿಪಾಠ ಇಲ್ಲವೇ? ದೊಡ್ಡ ತಿಮಿಂಗಿಲಗಳನ್ನು ಬಿಟ್ಟುಬಿಡುವ ನೀವು, ಕಾನೂನು ಸುವ್ಯವಸ್ಥೆ ನೆಪದಲ್ಲಿ ಬಡಪಾಯಿಗಳಿಗೇಕೆ ಶಿಕ್ಷೆ ಕೊಡುತ್ತೀರಿ ಎಂದು ಕಟುವಾಗಿ ಪ್ರಶ್ನಿಸಿತು.
ಪ್ರಕರಣ ಏನು?: ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದೊಡ್ಡಬೆಟ್ಟಹಳ್ಳಿ ಗ್ರಾಮದ ಸೊಣ್ಣೇಗೌಡ ಎಂಬುವವರ ಕುಟುಂಬದವರು ಅದೇ ಗ್ರಾಮದ ನಾರಾಯಣಪ್ಪ ಸೇರಿದಂತೆ ಹಲವರ ಮೇಲೆ ಹಲ್ಲೆ, ಕೊಲೆಯತ್ನ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ 2014ರಲ್ಲಿ ಪ್ರಕರಣ ದಾಖಲಾಗಿತ್ತು.
ಹೀಗಾಗಿ ಸೊಣ್ಣೆಗೌಡ, ಚಂದ್ರು, ನಾಗರಾಜು ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಿದ್ದ ಪೊಲೀಸರು, ಇವರ ವಿರುದ್ಧ ರೌಡಿ ಪಟ್ಟಿ ತೆರೆದಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿ ಅನ್ವಯ ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಹತ್ತು ಮಂದಿಯನ್ನು ಖುಲಾಸೆಗೊಳಿಸಿ 2016ರ ಜೂ.21ರಂದು ತೀರ್ಪು ನೀಡಿತ್ತು.
ಕ್ರಿಮಿನಲ್ ಪ್ರಕರಣದಲ್ಲಿ ಖುಲಾಸೆಗೊಂಡ ಬಳಿಕವೂ 10 ಮಂದಿಯ ಹೆಸರನ್ನು ರೌಡಿ ಪಟ್ಟಿಯಿಂದ ಪೊಲೀಸರು ಕೈ ಬಿಟ್ಟಿರಲಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪೊಲೀಸರು ಸ್ಪಂದಿಸಿಲ್ಲ ಎಂದು ಆರೋಪಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ದಾಖಲೆ ಒದಗಿಸದಿದ್ದರೆ 5 ಲಕ್ಷ ಪರಿಹಾರ!: ಅಲ್ಲದೆ, ಅರ್ಜಿದಾರರ ವಿರುದ್ಧ ರೌಡಿಶೀಟ್ ತೆರೆದಿರುವ ಸಂಬಂಧ ಏ.24ರಂದು ನ್ಯಾಯಪೀಠಕ್ಕೆ ಸೂಕ್ತ ದಾಖಲೆ ಸಲ್ಲಿಸಬೇಕು. ಇಲ್ಲವಾದರೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಖುದ್ದು ಹಾಜರಿಗೆ ಹಾಗೂ ಅರ್ಜಿದಾರರಿಗೆ ತಲಾ 5 ಲಕ್ಷ ರೂ. ಪರಿಹಾರ ಕೊಡಿಸಲು ಆದೇಶ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ, ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದರು.