ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿ ಯ ಗೆದ್ದಲಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರ 7ನೇ ಮಹಡಿಯಿಂದ ಜಿಗಿದು ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಅತ್ಮಹತ್ಯೆ ಮಾಡಿ ಕೊಂಡಿದ್ದಾನೆ.
ಗೆದ್ದಲಹಳ್ಳಿಯ ನಿವಾಸಿ ಆದೀವ್ (16) ಸಾವನ್ನಪ್ಪಿದ ವಿದ್ಯಾರ್ಥಿ. ಈತ ಆದೀವ್ ನಗರದ ಖಾಸಗಿ ಕಾಲೇಜಿ ನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಈತನ ತಂದೆ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರೆ, ತಾಯಿ ಗೃಹಿಣಿಯಾಗಿದ್ದಾರೆ. ಕಳೆದ 15 ವರ್ಷಗಳಿಂದ ಗೆದ್ದಲಹಳ್ಳಿಯ ಅಪಾರ್ಟ್‌ಮೆಂಟ್ ವೊಂದರಲ್ಲಿ ವಾಸಿಸುತ್ತಿದ್ದಾರೆ. ಕಾಲೇಜಿನಲ್ಲಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿಲ್ಲ ಎಂದು ನೊಂದಿದ್ದ. ಬೇರೆ ಕಾಲೇಜಿಗೆ ಸೇರಿಸುವಂತೆ ಪಾಲಕರನ್ನು ಒತ್ತಾಯಿಸಿದ್ದ. ಮುಂದಿನ ವರ್ಷ ಬೇರೆ ಕಾಲೇಜಿಗೆ ಸೇರಿಸುವ ಬಗ್ಗೆ ಆಲೋಚಿಸೋಣ ಎಂದು ಪಾಲಕರು ಆದೀವ್‌ಗೆ ಸಮಾಧಾನಪಡಿಸಿದ್ದರು.
ಇದೇ ವಿಚಾರವಾಗಿ ಭಾನುವಾರ ಮಧ್ಯಾಹ್ನ ಮನೆಬಿಟ್ಟು ಹೋಗಿದ್ದ. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಬಳಿಕ ರಾತ್ರಿ ಮನೆಗೆ ಬಂದಿದ್ದ. ಮದ್ಯರಾತ್ರಿ 1.30ರ ಸುಮಾರಿಗೆ ಮನೆಯಲ್ಲಿ ಎಲ್ಲರೂ ನಿದ್ದೆಗೆ ಜಾರಿದ ಸಮಯದಲ್ಲಿ ಅಪಾರ್ಟ್‌ಮೆಂಟ್‌ನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿದ್ದ ಸದ್ದು ಕೇಳಿ ನೆರೆ-ಹೊರೆಯವರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹೆಣ್ಣೂರು ಠಾಣೆ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಿದ್ದಾರೆ. ಘಟನೆ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.