Advertisement

ಯಾರಿಂದಲೂ ದುರಸ್ತಿಯಾಗದ ಬದಿಯಡ್ಕ-ಏತಡ್ಕ-ಸುಳ್ಯಪದವು ರಸ್ತೆ

06:00 AM May 25, 2018 | |

ಬದಿಯಡ್ಕ: ಸರಕಾರ ಹಾಗೂ ಜನಪ್ರತಿನಿಧಿಗಳಿಂದ ಅತಿ ಹೆಚ್ಚು ಅವಗಣನೆಗೆ ತುತ್ತಾಗುವ ಕಾಸರಗೋಡಿನ ರಸ್ತೆಗಳು ಜನರನ್ನು ಕಂಗೆಡಿಸುತಿವೆ. ಬದಿಯಡ್ಕ-ಏತಡ್ಕ-ಸುಳ್ಯಪದವು ರಸ್ತೆ ಸ್ಥಿತಿಯಂತೂ ಗಂಭೀರವಾಗಿದೆ.

Advertisement

ಜಿಲ್ಲೆಯ ಪ್ರಮುಖ ಪಟ್ಟಣವಾದ ಬದಿಯಡ್ಕದಿಂದ ಏತಡ್ಕ-ಕಿನ್ನಿಂಗಾರು ಮೂಲಕ ಕರ್ನಾಟಕದ ಪುತ್ತೂರು, ಈಶ್ವರಮಂಗಲ, ಸುಳ್ಯ ಪೇಟೆಗಳಿಗೆ ಸಂಪರ್ಕ ಕಲ್ಪಿಸುವ, ಲೋಕಪಯೋಗಿ ಇಲಾಖೆಯ ಕಡತಗಳಲ್ಲಿ 2009 ಅ.14ರಂದು ಮುಖ್ಯ ಜಿಲ್ಲಾ (ಮೇಜರ್‌ ಡಿಸ್ಟ್ರಿಕ್ಟ್ ರೋಡ್‌) ಶ್ರೇಣಿಯೊಂದಿಗೆ ಮಾನ್ಯತೆ ಪಡೆದಿರುವ 20.140ಕಿ. ಮೀ. ಉದ್ದದ ಬದಿಯಡ್ಕ – ಏತಡ್ಕ – ಸುಳ್ಯಪದವು ಜಿ.ಒ. (ಎಂ.ಎಸ್‌.) ನಂ52/2009 ರಸ್ತೆಯು ಸಂಪೂರ್ಣವಾಗಿ ದುರಸ್ತಿ ಕಾಣದೆ ದಶಕವೇ ಕಳೆದಿದೆ.  

ಕೆಲವು ಭಾಗಗಳಲ್ಲಿ ನಡೆದ ತೇಪೆ ಕಾರ್ಯಗಳು ಸಂಪೂರ್ಣವಾಗಿ ಕಿತ್ತು ಹೋಗಿದ್ದು, ವಿದ್ಯಾಗಿರಿ-ಏತಡ್ಕ, ಕೂಟೇಲು-ಬೀಜದ ಕಟ್ಟೆ ಕಿನ್ನಿಂಗಾರು-ನೆಟ್ಟಣಿಗೆ ತನಕ ಹಾಗೂ ನೆಟ್ಟಣಿಗೆ-ಸುಳ್ಯಪದವು ಜಂಕ್ಷನ್‌ನಿಂದ ಕಾಯರ್‌ ಪದವು ತನಕ ವಾಹನಗಳಿಗೆ ಸಂಚಾರ ತೀರಾ ಸಾಧ್ಯವಲ್ಲದ ಪರಿಸ್ಥಿತಿ ಬಂದೊದಗಿದೆ.

ಕಿನ್ನಿಂಗಾರು ಏತಡ್ಕ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಆರೇಳು ಕಿ.ಮೀ. ಅಧಿಕ ದೂರದ ಬೆಳಿಂಜ – ನಾಟೆಕಲ್ಲು, ಪೆರ್ಲ – ಸ್ವರ್ಗ – ಕಿನ್ನಿಂ ಗಾರು, ಮುಳ್ಳೇರಿಯ-ಕಿನ್ನಿಂಗಾರು ಮೂಲಕ ಪ್ರಯಾಣ ಬೆಳೆಸಬೇಕಾಗಿದೆ. ಆದರೆ ಏತಡ್ಕ, ಬೀಜದಕಟ್ಟೆ ಭಾಗದ ಜನರು ಅನ್ಯ ಮಾರ್ಗ ಲ್ಲದೆ ಈ ರಸ್ತೆಯಲ್ಲೇ ಸಂಚರಿಸಬೇಕಾಗಿದೆ.

ಅನುದಾನ ಮಂಜೂರಾದರೂ ಗುತ್ತಿಗೆ ಸ್ವೀಕರಿಸುವವರಿಲ್ಲ!
ಬದಿಯಡ್ಕ – ಏತಡ್ಕ – ಸುಳ್ಯಪದವು ರಸ್ತೆಯ ಸಂಪೂರ್ಣ ಹಾನಿಗೊಂಡಿರುವ ಸುಮಾರು 7 ಕಿ. ಮೀ. ಭಾಗಕ್ಕೆ ತೇಪೆ ಕಾಮಗಾರಿಗೆ ತಾಂತ್ರಿಕ ಅನುಮತಿ ಹಾಗೂ ಆಡಳಿತಾನುಮತಿ ಲಭಿಸಿ 25 ಲಕ್ಷ ರೂಗಳ ಅನುದಾನ ಮಂಜೂರಾಗಿದ್ದರೂ ಗುತ್ತಿಗೆ ಪಡೆಯಲು ಯಾರೂ ಮುಂದಾ ಗದ ಕಾರಣ ಈಗ ಎರಡನೇ ಬಾರಿ ಟೆಂಡರ್‌ ಅಹ್ವಾನಿಸಲಾಗಿದೆ ಎಂದು ಲೋಕೋಪ ಯೋಗಿ ಇಲಾಖೆ ಆಧಿಕಾರಿಗಳು ತಿಳಿಸಿರುತ್ತಾರೆ.

Advertisement

ಬಸ್‌ ಯಾನ ಮೊಟಕು
ಗಡಿಪ್ರದೇಶದ ಜನರು ಹೆಚ್ಚಿನ ಅಗತ್ಯಗಳಿಗಾಗಿ  ಪುತ್ತೂರು-ಸುಳ್ಯವನ್ನು ಆಶ್ರಯಿಸುತ್ತಿದ್ದು, ಇಲ್ಲಿಂದ ಪುತ್ತೂರಿನ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ.  ಧಾರ್ಮಿಕ,  ಆರೋಗ್ಯ … ಹೀಗೆ ಪುತ್ತೂರು – ಸುಳ್ಯದೊಂದಿಗೆ ಇಲ್ಲಿನವರಿಗೆ ಹತ್ತಿರದ ಸಂಬಂಧವಿದೆ. 

ಕಾಸರಗೋಡಿನಿಂದ ನೆಲ್ಲಿಕಟ್ಟೆ ಮಾರ್ಗವಾಗಿ ಕಿನ್ನಿಂಗಾರು ಸಂಚರಿಸುತ್ತಿದ್ದ ಕೇರಳ ಸಾರಿಗೆ ನಿಗಮದ ಬಸ್‌ ಹಾಗೂ ಮುಳ್ಳೇರಿಯ ನೆಟ್ಟಣಿಗೆ-ಸುಳ್ಯಪದವು ಜಂಕ್ಷನ್‌ ಮೂಲಕ ಪುತ್ತೂರಿಗೆ ಸಂಚರಿಸುತ್ತಿದ್ದ ಕರ್ನಾಟಕ ಸಾರಿಗೆ ನಿಗಮದ ಬಸ್‌ ವರ್ಷದಿಂದ  ಸಂಚಾರ ಮೊಟಕುಗೊಳಿಸಿದೆ. ಬದಿಯಡ್ಕ  ಏತಡ್ಕ ಮೂಲಕ ಕಿನ್ನಿಂಗಾರು ಸಂಚರಿಸುತ್ತಿದ್ದ ಬಸ್ಸುಗಳೆಲ್ಲ ಸಂಪೂರ್ಣ ನಿಲುಗಡೆಗೊಂಡಿದ್ದು, ಕಿನ್ನಿಂಗಾರಿನಿಂದ ಏಕೈಕ ಬಸ್‌ ಬೆಳಗ್ಗೆ 6.50ಕ್ಕೆ ಬದಿಯಡ್ಕ ತೆರಳಿ ಮಧ್ಯಾಹ್ನ 1.15ಕ್ಕೆ ಮರಳಿ ಸಂಜೆ 6.20ಕ್ಕೆ ಕಿನ್ನಿಂಗಾರಿಗೆ ಬರುತ್ತಿದೆ.   ಕಾಸರ ಗೋಡಿನಿಂದ ಮುಳ್ಳೇರಿಯ ಮೂಲಕ ಕಿನ್ನಿಂಗಾರಿಗೆ ಬರುವ  ಕೆಲವು ಬಸ್ಸುಗಳು ಕೂಡ   ಟ್ರಿಪ್‌ಗ್ಳನ್ನು ಸ್ಥಗಿತಗೊಳಿಸುತ್ತಿವೆ.   ಸಂಜೆ 5 ಗಂಟೆ ಬಳಿಕ ಸಂಚಾರ ವ್ಯವಸ್ಥೆಯಿಲ್ಲದೆ ಕಿನ್ನಿಂಗಾರು ವಸ್ತುಶಃ ಅಂಡಮಾನ್‌ ಪ್ರದೇಶದಂಗಾಗುತ್ತಿದೆ.

ಲಘು ವಾಹನದವರು ಬರುತ್ತಿಲ್ಲ
ಎಂಡೋಸಲ್ಫಾನ್‌ ಪೀಡಿತ ಪ್ರದೇಶವೂ ಆಗಿರುವ  ಈ ಭಾಗದಲ್ಲಿ   ಡೆಂಗ್ಯೂ ಜ್ವರ ಪೀಡಿತರ ಸಂಖ್ಯೆಯೂ ಹೆಚ್ಚುತ್ತಿದ್ದು, ತುರ್ತು ಚಿಕಿತ್ಸೆಗೆ ಬದಿಯಡ್ಕ – ಮುಳ್ಳೇರಿಯ  ಆಸ್ಪತ್ರೆಗಳಿಗೆ ತೆರಳುವ ಸ್ವಂತ ವಾಹನಗಳಿಲ್ಲದ  ಜನರ ಪಾಡು ಅಷ್ಟಿಷ್ಟಲ್ಲ. ಆ್ಯಂಬುಲೆನ್ಸ್‌  ಸಹಿತ ಯಾವುದೇ ಲಘು ವಾಹನದವರು ಇಲ್ಲಿಗೆ ಬರಲು  ಒಪ್ಪುತ್ತಿಲ್ಲ.  ಶಾಲಾ ವಾಹನಗಳು ಇಲ್ಲಿ ಕಸರತ್ತು ಮಾಡುವ ರೀತಿಯಲ್ಲಿ ಸಂಚರಿಸುತ್ತಿದ್ದು, ಮಕ್ಕಳ ಜೀವಕ್ಕೂ ಅಪಾಯ ಸಾಧ್ಯತೆಯಿದೆ.

ಪ್ರತಿಭಟನೆಗಳೂ ನಿಷ#ಲ
ಬದಿಯಡ್ಕ-ಏತಡ್ಕ-ಸುಳ್ಯಪದವು ರಸ್ತೆಯ  ಶೋಚನೀಯಾವಸ್ಥೆ ಪರಿಹರಿಸಲು ಹಲವು ಕ್ರಿಯಾ ಸಮಿತಿಗಳು ಹೋರಾಟ ಹಾಗೂ ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ನಡೆಸಿದ್ದು, 2016 ಜನವರಿ 28ರಂದು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ, ಸಾಮಾಜಿಕ ಹೋರಾಟಗಾರ ಡಾ| ಮೋಹನ್‌ ಕುಮಾರ್‌ ವೈ.ಎಸ್‌., ಗ್ರಾಮ ಪಂಚಾಯತ್‌ ಸದಸ್ಯೆ ಎಂ.ಶೈಲಜಾ ಭಟ್‌, ಕೃಷ್ಣ ಶರ್ಮಾ, ನಾರಾಯಣನ್‌ ನಂಬಿಯಾರ್‌ ಮತ್ತಿತರರು ಪ್ರತ್ಯೇಕವಾಗಿ ಪ್ರತಿಭಟನೆ ಹಾಗೂ ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕಿದ್ದರಲ್ಲದೆ ಕಾಸರಗೋಡು ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಬಳಿಕ ಶಾಸಕರು ಹಾಗೂ ಲೋಕೋಪಯೋಗಿ ಇಲಾಖೆ ಆಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು  ಹಿಂದೆಗೆಯಲಾಗಿತ್ತು.

ಬಿಜೆಪಿ  ಜಿಲ್ಲಾಧ್ಯಕ್ಷ  ಕೆ. ಶ್ರೀಕಾಂತ್‌ ನೇತೃತ್ವದಲ್ಲಿ 2016 ಜು.9ರಂದು ಪಂಪು ಚಳವಳಿ, 2016 ಅ. 9ರಂದು ಯುವ ಮೋರ್ಚಾ ವತಿಯಿಂದ ಪಂಕ್ಚರ್‌ ಚಳವಳಿ, ಕಳೆದ ವರ್ಷ ಅ.1ರಂದು ಬಿಜೆಪಿ ಕುಂಬಾxಜೆ ಪಂಚಾಯತ್‌ ಸಮಿತಿ ನೇತೃತ್ವದಲ್ಲಿ ಕರುವಲ್ತಡ್ಕದಿಂದ ಏತಡ್ಕವರೆಗೆ ಪಾದಯಾತ್ರೆಯನ್ನು  ಶ್ರೀಕಾಂತ್‌ ಉದ್ಘಾಟಿಸಿದ್ದು, ರಾಜ್ಯ ಸಮಿತಿ ಸದಸ್ಯರಾದ ರವೀಶ ತಂತ್ರ ಕುಂಟಾರು, ಎಂ. ಸಂಜೀವ ಶೆಟ್ಟಿ, ಸುಧಾಮ ಗೋಸಾಡ ಮೊದಲಾದವರು ಪಾಲ್ಗೊಂಡಿದ್ದರು.  ತಿರುವನಂತಪುರಂನಲ್ಲಿ ಬದಿಯಡ್ಕ ಮಾಜಿ ಪಂಚಾಯತ್‌ ಅಧ್ಯಕ್ಷ ಮಾನ್‌ ಕೇಳ್ಳೋಟ್‌ ಹಾಗೂ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ, ಊರವರು,  ಚಾಲಕರು, ವಿವಿಧ ಪಕ್ಷಗಳ ನೇತಾರರು, ಸಾಮಾಜಿಕ ಕಾರ್ಯಕರ್ತರು, ಸಾರ್ವಜನಿಕರು ಕರಚ್ಚಲ್‌ ಸಮರಂ(ಅಳುವ ಚಳವಳಿ) ನಡೆಸಿದ್ದರು. ಇದು ಕೇರಳದಲ್ಲೇ ಭಾರೀ ಅಲೆ ಎಬ್ಬಿಸಿತ್ತು. ಮಳೆಗಾಲ ಆರಂಭವಾಗಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ.

ಹಲವು ಬಾರಿ ನಾಗರಿಕರಿಂದ ದುರಸ್ತಿ
ಏತಡ್ಕದಿಂದ ಬೀಜದಕಟ್ಟೆ ವರೆಗಿನ ರಸ್ತೆಯನ್ನು ಕಳೆದ ಮಳೆಗಾಲದಲ್ಲಿ ಗ್ರಾಮೀಣ ಅಭಿವೃದ್ಧಿ ಕ್ರಿಯಾ ಸಮಿತಿ ಸುದರ್ಶನ,  ಶ್ರೀ ದುರ್ಗಾ ಪರಮೇಶ್ವರಿ ಭಕ್ತವೃಂದ ಏತಡ್ಕ, ಸ್ಟಾರ್‌ ಮೆಟಲ್ಸ್‌ ನೀರ್ಚಾಲು ಇವುಗಳ ನೇತೃತ್ವದಲ್ಲಿ ಸುಮಾರು 50ರಷ್ಟು  ನಾಗರಿಕರು  ಸೇರಿ  ಹೊಂಡಗಳನ್ನು ಮುಚ್ಚಿದ್ದರು.  ಹಲವು ಬಾರಿ ಸ್ಥಳೀಯರು ರಸ್ತೆ ದುರಸ್ತಿ ಕಾರ್ಯ ನಡೆಸಿದ್ದರು ಹಾಗೂ ಕಳೆದ ಶನಿವಾರವಷ್ಟೇ ಸ್ಥಳೀಯ ಕಗ್ಗಲ್ಲು ಕೋರೆ ಮಾಲಿಕ-ಕಾರ್ಮಿಕರ ನೇತೃತ್ವದಲ್ಲಿ ಬೀಜದಕಟ್ಟೆ ಶಾಂತಿಯಡಿ ಬಳಿಯಲ್ಲಿ  ಸೃಷ್ಟಿಯಾಗಿದ್ದ ದೊಡ್ಡ ಗಾತ್ರದ ಹೊಂಡಗಳನ್ನು ವೆಟ್‌ ಮಿಕ್ಸ್‌ ಉಪಯೋಗಿಸಿ ಮುಚ್ಚಲಾಗಿತ್ತು.

ಬದಿಯಡ್ಕ-ಏತಡ್ಕ-ಸುಳ್ಯಪದವು ರಸ್ತೆಯು ಜಿಲ್ಲೆಯಲ್ಲೇ ಅತ್ಯಂತ ಕೆಟ್ಟ ರಸ್ತೆಯಾಗಿದ್ದು, ಇದರ ದುರಸ್ತಿ ಬಗ್ಗೆ  ಸರಕಾರ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಶಾಸಕರ ಭರವಸೆ  ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನಾದರೂ  ಮುತುವರ್ಜಿ ವಹಿಸಿ  ಈ ರಸ್ತೆಯನ್ನು ದುರಸ್ತಿ ಮಾಡಬೇಕಾಗಿದೆ.
– ಹರೀಶ್‌ ನಾರಂಪಾಡಿ, 
ಬಿ.ಜೆ.ಪಿ. ಕಾಸರಗೋಡು ಮಂಡಲ ಪ್ರಧಾನ  ಕಾರ್ಯದರ್ಶಿ.

ಈ ರಸ್ತೆಯ ಶೋಚನೀಯಾವಸ್ಥೆ  ವಿರುದ್ಧ  ಎರಡು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಾ ಬಂದಿದ್ದೇವೆ. ಲೋಕೋಪಯೋಗಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ರಾಜ್ಯ ರಾಜಧಾನಿಯಲ್ಲಿ   ಪ್ರತಿಭಟನೆ ನಡೆಸಿದ್ದೇವೆ. ಅಧಿಕಾರಿಗಳು, ಶಾಸಕರು ಹಲವು ಬಾರಿ ರಸ್ತೆ ದುರಸ್ತಿಯ ಭರವಸೆ ಕೊಟ್ಟಿದ್ದರೂ ಇದುವರೆಗೆ ಯಾವುದೇ ದುರಸ್ತಿ ನಡೆದಿಲ್ಲ.  ಇಲ್ಲಿನ ನಾಗರಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಶೀಘ್ರದಲ್ಲೇ  ಈ ರಸ್ತೆಗೆ ಕಾಯಕಲ್ಪವಾಗಬೇಕಾಗಿದೆ.
– ಮಾಹಿನ್‌ ಕೇಳ್ಳೋಟ್‌
ಬದಿಯಡ್ಕ ಪಂಚಾಯತ್‌ ಮಾಜಿ ಅಧ್ಯಕ್ಷರು. 

ರಸ್ತೆ ಸಮಸ್ಯೆಯಿಂದಾಗಿ ಯಾವುದೇ ಬಸ್‌ ಸುಳ್ಯಪದವು ಮಾರ್ಗವಾಗಿ ಸಂಚರಿಸುವುದಿಲ್ಲ ಇದರಿಂದಾಗಿ ವಿದ್ಯಾರ್ಥಿಗಳಿಗೆ ಕ್ಲಪ್ತ ಸಮಯ ದಲ್ಲಿ ತರಗತಿಗಳಿಗೆ ತಲುಪಲು ಸಾಧ್ಯವಾಗು ತ್ತಿಲ್ಲ. ಪರೀಕ್ಷಾ ಸಮಯಗಳಲ್ಲಂತೂ ಬಹಳ ತೊಂದರೆಯಾಗುತ್ತಿದ್ದು, ದುಬಾರಿ ಬಾಡಿಗೆ ತೆತ್ತು  ರಿಕ್ಷಾಗಳಲ್ಲಿ ತೆರಳಬೇಕಾಗುತ್ತಿದೆ.
– ಸುರಕ್ಷಾ  ಸಬುರ್ಕಜೆ ಎಂ.ಎಸ್‌. 
ವಿದ್ಯಾರ್ಥಿನಿ, ಸೈಂಟ್‌ ಫಿಲೋಮಿನಾ ಕಾಲೇಜು ಪುತ್ತೂರು.

ಬದಿಯಡ್ಕ-ಏತಡ್ಕ-ಸುಳ್ಯಪದವು ರಸ್ತೆಯು ರಾಜ್ಯ ಹಾಗೂ ಜಿಲ್ಲೆಯ ಗಡಿ ಭಾಗದಲ್ಲಿ ಇರುವುದರಿಂದ ಅಧಿಕಾರದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳ ನೇತಾರರ ನಿರಂತರ ಅವಗಣನೆಗೆ ಪಾತ್ರವಾಗಿದೆ.  ಸಾರಿಗೆ ಸಚಿವರು ಸಾಧ್ಯವಾದರೆ ಒಂದು ಬಾರಿ ಈ ರಸ್ತೆಯಲ್ಲಿ ಸಂಚರಿಸಿ ನೋಡಬೇಕಾಗಿದೆ.
– ಅಜಿತ್‌ ಸ್ವರ್ಗ
ಸುದರ್ಶನ ಗ್ರಾಮೀಣ ಅಭಿವೃದ್ಧಿ ಸಮಿತಿ

– ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next