Advertisement

ಪಿಯುಸಿ: ವಾಣಿಜ್ಯ ವಿಭಾಗಕ್ಕೆ ಹೆಚ್ಚಿದ ಬೇಡಿಕೆ

10:16 AM May 19, 2019 | keerthan |

ಮಂಗಳೂರು/ ಉಡುಪಿ: ಈ ಬಾರಿ ಪಿಯು ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಆಯ್ಕೆಯ ಆದ್ಯತೆಯಾಗಿರುವುದು ವಾಣಿಜ್ಯ ವಿಭಾಗ. ವಿಜ್ಞಾನ ಅನಂತರದ ಸ್ಥಾನಕ್ಕಿಳಿದಿದೆ.

Advertisement

ಉಡುಪಿಯಲ್ಲಿ ವಿಜ್ಞಾನ ಮೊದಲ ಆಯ್ಕೆಯಾಗಿ ಇದ್ದರೂ ವಾಣಿಜ್ಯ ವಿಭಾಗಕ್ಕೆ ಬೇಡಿಕೆ ಹೆಚ್ಚಿದೆ. ಎರಡೂ ಜಿಲ್ಲೆಗಳಲ್ಲಿ ಕಲಾವಿಭಾಗ ಕೊನೆಯ ಸ್ಥಾನದಲ್ಲಿದೆ.

ಜಿಲ್ಲೆಯ ಬಹುತೇಕ ಪಿಯು ಕಾಲೇಜುಗಳಲ್ಲಿ ಅರ್ಜಿ ವಿತರಣೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅರ್ಜಿ ಸ್ವೀಕರಿಸುವುದು ಭಾಗಶಃ ಮುಗಿಯುತ್ತಿದೆ. ಮಂಗಳೂರಿನಲ್ಲಿ ಪ್ರಮುಖ ಸರಕಾರಿ ಕಾಲೇಜು ಗಳಲ್ಲೂ ಸೀಟುಗಳು ಭರ್ತಿಯಾಗಿವೆ.

ಕೆಲವು ವರ್ಷಗಳ ಹಿಂದೆ ಎಂಜಿನಿಯರಿಂಗ್‌ ಮತ್ತು ಮೆಡಿಕಲ್‌ನತ್ತ ಮಾತ್ರ ಗಮನ ಹರಿಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಹೆತ್ತವರು ಈಗ ವಾಣಿಜ್ಯ ವಿಷಯವನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿರುವುದು ಹೊಸ ಬೆಳವಣಿಗೆ. ಜತೆಗೆ, ಪ್ಯಾರಾಮೆಡಿಕಲ್‌ನಂತಹ ಹೊಸ ವೃತ್ತಿಪರ ಕೋರ್ಸ್‌ಗಳತ್ತ ಅಧ್ಯಯನ ಮುಂದುವರಿಸುವ ದೃಷ್ಟಿಯಿಂದ ವಿಜ್ಞಾನ ವಿಭಾಗದಲ್ಲಿ ಕಾಂಬಿನೇಶನ್‌ ಆಯ್ಕೆ ಮಾಡುತ್ತಿದ್ದಾರೆ.

ವಾಣಿಜ್ಯ ಉದ್ಯೋಗಾವಕಾಶ ಕಾರಣ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 203 ಪದವಿಪೂರ್ವ ಕಾಲೇಜುಗಳಿದ್ದು, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಅದರಲ್ಲೂ ಪ್ರಸಕ್ತ ಸಾಲಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ವಾಣಿಜ್ಯ ವಿಭಾಗಕ್ಕೆ ದಾಖಲಾಗಿದ್ದಾರೆ. ಪ್ರಸ್ತುತ ಸಿಎ ಸೇರಿದಂತೆ ಇತರ ಅಕೌಂಟ್ಸ್‌ ವಿಭಾಗಗಳಿಗೆ ಸಿಬಂದಿ ಆವಶ್ಯಕತೆ ಹೆಚ್ಚಿರುವುದು ಇದಕ್ಕೆ ಕಾರಣ. ಅಕೌಂಟೆನ್ಸಿ, ಎಕನಾಮಿಕ್ಸ್‌, ಬೇಸಿಕ್‌ ಮ್ಯಾಥ್ಸ್, ಕಂಪ್ಯೂಟರ್‌ ಸೈನ್ಸ್‌ ಕಾಂಬಿನೇಷನ್‌ಗೆ ಬೇಡಿಕೆ ಹೆಚ್ಚಿದೆ. ಇನ್ನುಳಿದಂತೆ ವಿಜ್ಞಾನ ವಿಭಾಗದಲ್ಲಿ ಪಿಸಿಎಂಎಸ್‌, ಪಿಸಿಎಂಬಿ, ಪಿಸಿಬಿ, ಪಿಸಿಎಂ ಕಾಂಬಿನೇಶನ್‌ಗಳನ್ನು ಹೆಚ್ಚು ಆರಿಸಿ ಕೊಂಡಿದ್ದಾರೆ.

Advertisement

ಉಡುಪಿ ಭಾಗದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿ ಪಿಸಿಎಂಬಿ ಕಾಂಬಿನೇಶನ್‌ಗೆ ಹೆಚ್ಚಿನ ಬೇಡಿಕೆ ಇದೆ. ಅನಂತರದ ಸ್ಥಾನದಲ್ಲಿ ಪಿಸಿಎಂಸಿ, ಪಿಸಿಎಂಎಸ್‌, ಪಿಸಿಎಂಇ ಕಾಂಬಿನೇಶನ್‌ಗಳಿವೆ. ವಾಣಿಜ್ಯ ಶಾಸ್ತ್ರದಲ್ಲಿ ಅಕೌಂಟೆನ್ಸಿ, ಕಾಮರ್ಸ್‌, ಅರ್ಥಶಾಸ್ತ್ರದ ಜತೆಗೆ ಬೇಸಿಕ್‌ ಮ್ಯಾತ್ಸ್, ಸಂಖ್ಯಾಶಾಸ್ತ್ರ, ಕಂಪ್ಯೂಟರ್‌ ಸೈನ್ಸ್‌ ಇತ್ಯಾದಿಗಳನ್ನು ಆಯ್ಕೆ ಮಾಡುತ್ತಿದ್ದಾರೆ.

ಎಂಜಿನಿಯರಿಂಗ್‌ ವ್ಯಾಮೋಹ ಕಡಿಮೆ
ಕೆಲವು ವರ್ಷಗಳ ಹಿಂದೆ ಎಂಜಿನಿಯರಿಂಗ್‌ ಮತ್ತು ಮೆಡಿಕಲ್‌ನತ್ತ ಎಲ್ಲ ವಿದ್ಯಾರ್ಥಿಗಳೂ ಮುಖ ಮಾಡುತ್ತಿದ್ದರು. ಆದರೆ ಈಗ ನಿಧಾನವಾಗಿ ಆ ಟ್ರೆಂಡ್‌ ಮಾಯವಾಗುತ್ತಿದೆ. ಬದಲಾಗಿ ವಾಣಿಜ್ಯ ವಿಭಾಗದ ಅವಕಾಶಗಳು, ಪ್ಯಾರಾಮೆಡಿಕಲ್‌ನಂತಹ ಕ್ಷೇತ್ರಗಳತ್ತ ಆಕರ್ಷಣೆ ಹೆಚ್ಚಿದೆ.

ಉದ್ಯೋಗಾವಕಾಶ ಕಡಿಮೆಯಾಗಿರುವುದರಿಂದ ವಿಜ್ಞಾನ ವಿಭಾಗಕ್ಕೆ ವಾಣಿಜ್ಯ ವಿಭಾಗ ಪೈಪೋಟಿ ನೀಡುವಂತಾಗಿದೆ ಎಂದು ಖಾಸಗಿ ಕಾಲೇಜೊಂದರ ಪ್ರಾಂಶುಪಾಲ ಫಾ| ಮೆಲ್ವಿನ್‌ ಮೆಂಡೋನ್ಸಾ ಅವರು ಹೇಳುತ್ತಾರೆ.

ಖಾಸಗಿಯಲ್ಲಿ ಕಲಾ ವಿಭಾಗ ಇಲ್ಲ!
ಬಹುತೇಕ ಎಲ್ಲ ಖಾಸಗಿ ಪ.ಪೂ. ಕಾಲೇಜುಗಳಲ್ಲಿ ಕಲಾ ವಿಭಾಗ ಇಲ್ಲವೇ ಇಲ್ಲ ಎನ್ನಬಹುದು. ಸರಕಾರಿ ಪ.ಪೂ. ಕಾಲೇಜುಗಳಲ್ಲಿ ವಾಣಿಜ್ಯ ಮತ್ತು ಕಲಾ ವಿಭಾಗಗಳು ಭರ್ತಿಯಾಗುತ್ತಿವೆ. ಖಾಸಗಿ ಪ.ಪೂ. ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದರೆ, ಸರಕಾರಿ ಪ.ಪೂ. ಕಾಲೇಜುಗಳಲ್ಲಿ ಅರ್ಜಿ ವಿತರಣೆ ನಡೆಯುತ್ತಿದೆ. ಈಗ ಕಾಲೇಜುಗಳ ಸಂಖ್ಯೆ ಹೆಚ್ಚಿಗೆ ಆಗಿರುವುದರಿಂದ ಹಿಂದೆ ಕನಿಷ್ಠ ಶೇ.80, ಶೇ.90 ಅಂಕಗಳಿಗೆ ಕಟ್‌ ಆಫ್ ಮಾಡುತ್ತಿದ್ದ ಸಂಸ್ಥೆಗಳು ಸ್ಪರ್ಧೆಯಿಂದಾಗಿ ಕಟ್‌ ಆಫ್ ಅಂಕವನ್ನು ಶೇ.70ಕ್ಕೂ ಇಳಿಸಿಕೊಂಡಿವೆ. ಮೆರಿಟ್‌ ಸೀಟು ಭರ್ತಿಗೊಂಡ ಬಳಿಕ ಮೆನೇಜ¾ಂಟ್‌ ಸೀಟಿಗಾಗಿ ಪೈಪೋಟಿ ಈ ಬಾರಿಯೂ ಇದೆ.

ಈಗ ಎಲ್ಲೆಡೆ ಖಾಸಗಿ ಅನುದಾನರಹಿತ ಪ.ಪೂ. ಕಾಲೇಜುಗಳು ಇರುವುದರಿಂದ ಹೆಚ್ಚಿನ ಶುಲ್ಕ ತೆತ್ತಾದರೂ ಆ ಕಾಲೇಜುಗಳಿಗೆ ಹೋಗಬೇಕೆಂಬ ಧಾವಂತ ಕಂಡುಬರುತ್ತಿದೆ. ಇದಕ್ಕೆ ಇಂಬು ಕೊಡುವಂತೆ ಸರಕಾರದ ತಪ್ಪು ನೀತಿಯಿಂದ ಸರಕಾರಿ ಪ.ಪೂ. ಕಾಲೇಜುಗಳಲ್ಲಿ ಉಪನ್ಯಾಸಕರು, ಸಿಬಂದಿ ಕೊರತೆ ಇದೆ. ಅನುದಾನಿತ ಪ.ಪೂ. ಕಾಲೇಜುಗಳಲ್ಲಿ ಸರಕಾರಿ ಅನುದಾನಿತ ಹುದ್ದೆಗಳನ್ನು ಭರ್ತಿಗೊಳಿಸದೆ ಇದ್ದರೂ ಆಡಳಿತ ಮಂಡಳಿಗಳು ಖಾಸಗಿಯಾಗಿ ನೇಮಿಸಿಕೊಳ್ಳುತ್ತವೆ.

ಈಗಿನ್ನೂ ಪ.ಪೂ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಆರಂಭವಾಗಿದೆಯಷ್ಟೆ. ಇನ್ನೊಂದು ವಾರದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಸದ್ಯದ ಮಟ್ಟಿಗೆ ವಾಣಿಜ್ಯ ವಿಷಯಗಳಿಗೆ ಸರಕಾರಿ ಪ.ಪೂ. ಕಾಲೇಜುಗಳಲ್ಲಿ ಹೆಚ್ಚಿನ ಬೇಡಿಕೆ, ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಿಗೆ ಖಾಸಗಿ ಪ.ಪೂ. ಕಾಲೇಜುಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.
ಸುಬ್ರಹ್ಮಣ್ಯ ಜೋಷಿ, ಡಿಡಿಪಿಯು, ಉಡುಪಿ ಜಿಲ್ಲೆ

ಜಿಲ್ಲೆಯ ಸರಕಾರಿ ಮತ್ತು ಖಾಸಗಿ ಕಾಲೇಜುಗಳು ನೀಡಿದ ಮಾಹಿತಿ ಅನ್ವಯ ಪ್ರಸಕ್ತ ಸಾಲಿನ ಪಿಯುಸಿಯಲ್ಲಿ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಇದೆ. ಅದು ಬಿಟ್ಟರೆ ವಿಜ್ಞಾನ ವಿಭಾಗದತ್ತ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ಕಲಾ ವಿಭಾಗ ಕೊನೆಯ ಸ್ಥಾನದಲ್ಲಿದೆ.
-ಕುಶಾರತಿ, ಡಿಡಿಪಿಯು, ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next