Advertisement
ಮಾರ್ಚ್ – ಎಪ್ರಿಲ್ ಬಂತಂದ್ರೆ ಪರೀಕ್ಷಾ ಸಿದ್ದತೆಗಳು ಜೋರಾಗಿರುತ್ತವೆ. ಆದರೆ ಉಡುಪಿ ಜಿಲ್ಲೆಯಲ್ಲಿ ಜನವರಿ- ಫೆಬ್ರವರಿಯಲ್ಲೇ ಪರೀಕ್ಷೆಯ ಕಾವು ಶುರುವಾಗಿದೆ. ವಿದ್ಯಾರ್ಥಿಗಳ ಜತೆಗೆ ಪರೀಕ್ಷಾ ಮಂಡಳಿಯು ಸಕಲ ಸಿದ್ಧತೆಗಳತ್ತ ದೃಷ್ಟಿ ಹರಿಸಿದೆ. ಈ ಬಾರಿ ಪಿಯುಸಿ ಪರೀಕ್ಷೆ ಮಾ. 9ರಿಂದ ಆರಂಭವಾಗಿ ಮಾ. 27ರವರೆಗೆ ನಡೆಯಲಿದೆ.
ಕಳೆದ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90. 45 ಫಲಿತಾಂಶ ಪಡೆದ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನ ಪಡೆದರೆ ಶೆ. 90. 32 ಫಲಿತಾಂಶ ಪಡೆದ ಉಡುಪಿ ಜಿಲ್ಲೆ ಕೇವಲ ಶೇ. 0. 13 ಅಂಕಗಳ ಕೊರತೆಯಿಂದ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಕಳೆದ ವರ್ಷ ಒಟ್ಟು 14, 832 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದವರಲ್ಲಿ 12,234 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. 7,229 ಹುಡುಗರಲ್ಲಿ 5,718 (ಶೇ.79. 91) ಮಂದಿ ಪಾಸಾದರೆ, 7,603 ವಿದ್ಯಾರ್ಥಿನಿಯರಲ್ಲಿ 6,816 (ಶೇ. 89.65) ಮಂದಿ ಉತ್ತೀರ್ಣರಾಗಿದ್ದರು. ಕಳೆದ ವರ್ಷದಂತೆ 2015ರಲ್ಲಿಯೂ ಕೂಡ ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಗೆ ಶೇ. 92. 51 ಫಲಿತಾಂಶ ಬಂದರೆ, ಉಡುಪಿ ಜಿಲ್ಲೆಗೆ ಶೇ. 92. 48 ಫಲಿತಾಂಶ ಪಡೆದು ಕೇವಲ ಶೇ. 0.3 ಗಳಿಂದ ದ್ವಿತೀಯ ಸ್ಥಾನ ಪಡೆಯಿತು. ಎರಡು ವರ್ಷಗಳ ಫಲಿತಾಂಶ ಗಮನಿಸಿದರೆ ಒಟ್ಟಾರೆ ರಾಜ್ಯದ ಫಲಿತಾಂಶವು ಈ ಎರಡು ಜಿಲ್ಲೆಗಳಿಗೂ ತಟ್ಟಿದ್ದು, 2015ಕ್ಕಿಂತ 2016ರಲ್ಲಿ ಉಭಯ ಜಿಲ್ಲೆಗಳಲ್ಲಿ ಶೇ. 2ರಷ್ಟು ಫಲಿತಾಂಶ ಕಡಿಮೆ ಬಂದಿತ್ತು.
Related Articles
ಕಳೆದ ಬಾರಿ ಸುಮಾರು 14 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ ಈ ಬಾರಿ ಸುಮಾರು 16 ಸಾವಿರ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 26 ಪರೀಕ್ಷಾ ಕೇಂದ್ರಗಳಿದ್ದವು. ಅದರಲ್ಲಿ 13 ಸರಕಾರಿ ಕಾಲೇಜುಗಳಾಗಿದ್ದರೆ, ಇನ್ನು 10 ಅನುದಾನಿತ ಹಾಗೂ 3 ಅನುದಾನ ರಹಿತ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಲಿದೆ. ಕಳೆದ ಬಾರಿ 29 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.
Advertisement
ಜಿಲ್ಲಾ ಕೇಂದ್ರದಿಂದಲೇ ಪ್ರಶ್ನೆ ಪತ್ರಿಕೆಗಳನ್ನು ಕೊಡುವ ಕ್ರಮ ಕೈಗೊಳ್ಳಲಾಗಿದೆ. ಪ್ರಶ್ನೆ ಪತ್ರಿಕೆ ತಯಾರಿ ವೇಳೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಅಧಿಕಾರಿಗಳಿಗೆ ಬಯೋ ಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗಿತ್ತು. ಆ ಮೂಲಕ ತಯಾರಿ ಕೇಂದ್ರದೊಳಗೆ ಅಧಿಕಾರಿಗಳ ಎಲ್ಲ ಚಲನವಲನಗಳು ಅದರಲ್ಲಿ ತಿಳಿದು ಬರುತ್ತಿತ್ತು.
ಕಳೆದ ಬಾರಿಯಂತೆ ಈ ಬಾರಿ ಯಾವುದೇ ಗೊಂದಲಕ್ಕೀಡು ಮಾಡದಂತೆ ಪರೀಕ್ಷೆ ನಡೆಸಲು ಶಿಕ್ಷಣ ಮಂಡಳಿ ಕ್ರಮ ಕೈಗೊಂಡಿದೆ. ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳು ಮಹತ್ವದ್ದಾಗಿದ್ದರೂ ಕೂಡ ವಿದ್ಯಾರ್ಥಿಗಳು ಯಾವುದೇ ಗೊಂದಲ ಮಾಡಿಕೊಳ್ಳದೆ ಸಾವಧಾನವಾಗಿ, ಪೂರ್ವ ತಯಾರಿ ಮಾಡಿಕೊಂಡು, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಖಂಡಿತ ಉತ್ತಮ ಫಲಿತಾಂಶ ಸಾಧ್ಯ.
ಸಿಸಿಟಿವಿ ಕಣ್ಗಾವಲುಕಳೆದ ಬಾರಿ ರಾಜ್ಯದಾದ್ಯಂತ ಪಿಯುಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ತಡೆಯುವಲ್ಲಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಮಂಡಳಿಯು ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಪರೀಕ್ಷಾ ಸಿದ್ದತೆಗಳಿಗಾಗಿ ಈಗಾಗಲೇ ಒಟ್ಟು 8 ತಂಡಗಳನ್ನು ರಚಿಸಲಾಗಿದೆ. ಇನ್ನು ಕಳೆದ ಬಾರಿ ಆದಂತಹ ಪರೀಕ್ಷಾ ಅಧ್ವಾನಗಳನ್ನು ತಡೆಯಲು ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ. ಖಾಸಗಿ ಕಾಲೇಜಿನ ಹೆಚ್ಚಿನ ಎಲ್ಲಕಡೆ ಸಿಸಿಟಿವಿ ಕಾರ್ಯನಿರ್ವಹಿಸುತ್ತಿದ್ದು, ಸರಕಾರಿ ಕಾಲೇಜುಗಳಲ್ಲಿ ಕೆಲವೆಡೆ ಮಾತ್ರ ಇದ್ದು, ಮುಂದಿನ ವರ್ಷದಿಂದ ಎಲ್ಲ ಕಾಲೇಜುಗಳ ಪರೀಕ್ಷಾ ಕೇಂದ್ರಗಳಲ್ಲಿಯೂ ಸಿಸಿಟಿವಿ ಅಳವಡಿಸಲಾಗುವುದು ಎಂದು ಜಿಲ್ಲಾ ಪ. ಪೂ. ಶಿಕ್ಷಣ ಮಂಡಳಿ ಉಪನಿರ್ದೇಶಕ ಆರ್. ಬಿ. ನಾಯಕ್ ತಿಳಿಸಿದ್ದಾರೆ. ಸಮಯದಲ್ಲಿ ಬದಲಾವಣೆ
ಎಸೆಸೆಲ್ಸಿ ಪರೀಕ್ಷೆಯಲ್ಲಿದ್ದಂತೆ ಒಂದು ನಿಮಿಷ ತಡವಾದರೂ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎನ್ನುವ ಕಟ್ಟುನಿಟ್ಟಿನ ಕಾನೂನು ಇಲ್ಲಿ ಇಲ್ಲದಿದ್ದರೂ ಅರ್ಧಗಂಟೆಯೊಳಗೆ ಪರೀಕ್ಷಾ ಕೊಠಡಿಯಲ್ಲಿ ಹಾಜರಿರಬೇಕು. ಈ ಬಾರಿ ಪರೀಕ್ಷೆ ನಡೆಯುವ ಸಮಯದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಈ ಬಾರಿ 10. 15ರಿಂದ 1. 30ರ ವರೆಗೆ ಪರೀಕ್ಷೆಯ ಸಮಯವನ್ನು ನಿಗದಿಪಡಿಸಲಾಗಿದೆ. ಕಳೆದ ಬಾರಿ 9. 30 ರಿಂದ 12. 45 ರವರೆಗೆ ಪರೀಕ್ಷೆ ನಡೆಸಲಾಗುತ್ತಿತ್ತು. ಫಲಿತಾಂಶ ಉತ್ತಮಪಡಿಸಲು ಕೈಗೊಂಡ ಕ್ರಮಗಳು
– ಜಿಲ್ಲಾಧಿಕಾರಿ ಟಿ. ವೆಂಕಟೇಶ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ವಿಡಿಯೋ ಸಂದರ್ಶನಗಳನ್ನು ನಡೆಸಲಾಗಿದೆ.
– ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ನಡೆಸಲಾಗಿದೆ.
– ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿದ್ದು, ಫಲಿತಾಂಶದಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಆಯಾಯ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರಿಗೆ ಸೂಚಿಸಲಾಗಿದೆ.
– ಉಪನ್ಯಾಸಕರಿಗೂ ಬೇರೆ ಬೇರೆ ರೀತಿಯ ಸಲಹೆ, ಸೂಚನೆ, ಕಾರ್ಯಾಗಾರಗಳನ್ನು ನಡೆಸಿ ಫಲಿತಾಂಶವನ್ನು ಇನ್ನಷ್ಟು ಉತ್ತಮ ಪಡಿಸಲು ಯೋಜನೆಗಳನ್ನು ಕೈಗೊಳ್ಳಲಾಗಿದೆ.
– ವಿಜ್ಞಾನ, ಕಾಮರ್ಸ್, ಕಲೆ ಹೀಗೆ ಆಯಾಯ ವಿಷಯಗಳ ಸಂಘಗಳಿಂದಲೇ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಗಿದೆ. – ಪ್ರಶಾಂತ್ ಪಾದೆ