ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ಕಚೇರಿಯಲ್ಲಿ “ಡಿ ಗ್ರೂಪ್’ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಯುವಕನೊಬ್ಬ ಕಲಾ ವಿಭಾಗದಲ್ಲಿ ಉತ್ತೀರ್ಣನಾಗಿದ್ದಾನೆ.
ಭದ್ರಾವತಿ ಮೂಲದ ಧನಂಜಯ ಎಂಬಾತ ಇಲಾಖೆಯಲ್ಲಿಯೇ ಕೆಳ ಹಂತದ ನೌಕರನಾಗಿ ಕಳೆದ ಜೂನ್‌ನಿಂದ ಕಾರ್ಯ ನಿರ್ವಹಿಸುತ್ತಿದ್ದು, ಕೆಲಸದ ಜೊತೆಗೆ ಅಧ್ಯಯನವನ್ನು ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವುದು ಅಲ್ಲಿನ ಅಧಿಕಾರಿಗಳಿಗೆ ಸಂತಸ ತಂದಿದೆ.
ಐದು ವರ್ಷಗಳ ಹಿಂದೆ (2014) ಎಸ್‌ಎಸ್‌ಎಲ್‌ಸಿ ಮುಗಿಸಿದ್ದ ಈತ, ಮುಂದೆ ಓದುವ ಆಸೆ ಇದ್ದರೂ ಬಡತನದ ಹಿನ್ನೆಲೆಯಲ್ಲಿ ಕೆಲಸಕ್ಕೆ ಬರಬೇಕಾದ ಅನಿವಾರ್ಯದಿಂದ ಓದನ್ನೇ ಕೈಬಿಟ್ಟಿದ್ದ. ಮೊದಲು ಭದ್ರಾವತಿಯಲ್ಲಿಯೇ ಬೇಕರಿ ಕೆಲಸ ಮಾಡಿಕೊಂಡಿದ್ದ. ನಂತರ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಾಗ ಸೋದರ ಸಂಬಂಧಿಕರೊಬ್ಬರು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಡಿ ಗ್ರೂಪ್’ ನೌಕರನಾಗಿ ಕೆಲಸಕ್ಕೆ ಸೇರಿಸಿದರು.
ಆಗ ಅಲ್ಲಿನ ಅಧಿಕಾರಿಗಳೊಂದಿಗೆ ತನ್ನ ಪಿಯು ಓದುವ ಕನಸನ್ನು ಹೇಳಿಕೊಂಡಾಗ ಖುದ್ದು ಅವರೇ ದೂರಶಿಕ್ಷಣ ಮಾದರಿಯಲ್ಲಿ ಪಿಯು ಪರೀಕ್ಷೆ ಕಟ್ಟಿಸಿ, ಪುಸ್ತಕ ಕೊಡಿಸಿ, ಕೆಲಸದ ಜತೆಗೆ ನಿತ್ಯ ಎರಡು ಗಂಟೆ ಅಧ್ಯಯನ ಮಾಡಲು ಹೇಳಿದರು. ಅಧಿಕಾರಿಗಳ ಪ್ರೋತ್ಸಾಹ ಹಾಗೂ ಬೆಂಬಲದಿಂದ ಓದಿದ ಧನಂಜಯ ಶೇ.45.5 ಫಲಿತಾಂಶದೊಂದಿಗೆ ಉತ್ತೀರ್ಣನಾಗಿದ್ದಾನೆ.
ಈ ಕುರಿತು ಮಾತನಾಡಿದ ಧನಂಜಯ, “ಮನೆಯಲ್ಲಿ ಬಡತನ, ಅನಿವಾರ್ಯವಾಗಿ ಕೆಲಸಕ್ಕೆ ಸೇರಬೇಕಾಯಿತು. ನನ್ನ ಅದೃಷ್ಟಕ್ಕೆ ಪಿಯು ಬೋರ್ಡ್‌ನಲ್ಲಿಯೇ ಗುತ್ತಿಗೆ ನೌಕರನಾಗಿ ಕೆಲಸ ಸಿಕ್ಕಿತು. ನಿತ್ಯ ಅಧಿಕಾರಿಗಳಿಗೆ ಟಿ-ಕಾಫಿ, ಫೈಲುಗಳನ್ನು ತಂದು ಕೊಡುವ ಸಂದರ್ಭದಲ್ಲಿ ಒಂದಿಷ್ಟು ಆತ್ಮೀಯತೆ ಬೆಳೆಯಿತು.
ಆಗ ಅವರ ಬಳಿ ಪಿಯು ಓದುವ ಆಸೆ ಹೇಳಿಕೊಂಡೆ. ಕೂಡಲೇ ಅವರು ಮಲ್ಲೇಶ್ವರದ ದೂರಶಿಕ್ಷಣ ಕಾಲೇಜಿಗೆ ಸೇರಿಸಿದರು. ಜತೆಗೆ, ಪರೀಕ್ಷೆ ಸಮಯದಲ್ಲಿ 15 ದಿನ ರಜಾ ಕೊಟ್ಟು ಚೆನ್ನಾಗಿ ಓದಲು ಹೇಳಿದರು. ಅವರುಗಳ ಸಹಕಾರದಿಂದ ಇಂದು ಪಿಯುಸಿ ಪಾಸ್ ಆಗಿದ್ದೇನೆ.
ಫಲಿತಾಂಶದ ದಿನವೂ ಕೆಲಸ ಮಾಡುತ್ತಿದ್ದೆ. ಫಲಿತಾಂಶ ಕುರಿತು ಒಂದಿಷ್ಟು ಭಯ ಇತ್ತು. ನಂತರ ಉತ್ತೀರ್ಣನಾಗಿದ್ದೇನೆ ಎಂದು ತಿಳಿದಾಗ ಸಾಕಷ್ಟು ಖುಷಿಯಾಯಿತು. ನನಗೆ ಓದಲು ಸಹಾಯ ಮಾಡಿದ ಅಧಿಕಾರಿಗಳಿಗೆ ಸಂತೋಷವಾಗಿದ್ದು, ಮುಂದೆ ಬಿ.ಎ.ಓದಲು ಸಂಜೆ ಕಾಲೇಜು ಸೇರಿಸುತ್ತೇನೆ ಎಂದಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.