ಬೆಂಗಳೂರು: ತೀವ್ರ ವಿವಾದಕ್ಕೆ ಕಾರಣವಾಗಿರುವ 545 ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ತನಿಖೆ ಕೈಗೊಂಡಿರುವ ಸಿಐಡಿ, ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿರುವ ಮೊದಲ 50 ಅಭ್ಯರ್ಥಿಗಳನ್ನು ಬುಧವಾರ ವಿಚಾರಣೆ ನಡೆಸಿದೆ. ಗುರುವಾರ 50 ಹಾಗೂ ಶುಕ್ರವಾರ 50 ಅಭ್ಯರ್ಥಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಜತೆಗೆ ಎಲ್ಲ 545 ಅಭ್ಯರ್ಥಿಗಳ ವಿಚಾರಣೆಯೂ ನಡೆಯಲಿದೆ.
ಅರಮನೆ ರಸ್ತೆಯಲ್ಲಿರುವ ಕಾರ್ಲಟನ್ ಭವನದ ಸಿಐಡಿ ಎಫ್‌ಐಯು ವಿಭಾಗದ ಅಧಿಕಾರಿಗಳ ಮುಂದೆ ಬುಧವಾರ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಹಾಜರಾಗಿದ್ದರು. ಪ್ರತಿಯೊಬ್ಬರ ಪ್ರವೇಶ ಪತ್ರದ ಅಸಲು ಪ್ರತಿ ಮತ್ತು 2ನೇ ಪತ್ರಿಕೆಯ ಒಎಂಆರ್ ಶೀಟ್‌ನ ಕಾರ್ಬನ್ ಪ್ರತಿ ಅಸಲು ಪ್ರತಿಯನ್ನು ಅಭ್ಯರ್ಥಿಗಳಿಂದ ಪಡೆದು ಪ್ರಾಥಮಿಕ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಪ್ರತಿಯೊಬ್ಬರ ಪ್ರವೇಶ ಪತ್ರ ಮತ್ತು ಒಎಂಆರ್ ಶೀಟ್‌ನ ಕಾರ್ಬನ್ ಪ್ರತಿಯನ್ನು ಪಡೆದು ನೇಮಕಾತಿ ವಿಭಾಗದಲ್ಲಿರುವ ಅಸಲಿ ದಾಖಲೆಗೂ ತಾಳೆ ಮಾಡಲಾಗುತ್ತದೆ. ವ್ಯತ್ಯಾಸ ಕಂಡು ಬಂದಲ್ಲಿ ಅಥವಾ ಅನುಮಾನ ಮೂಡುವವರಿಗೆ 2ನೇ ಸುತ್ತಿನ ವಿಚಾರಣೆಗೆ ಹಾಜರಾಗಲು ಸೂಚಿಸಲಾಗುತ್ತಿದೆ ಎನ್ನಲಾಗಿದೆ. ಅಧಿಕಾರಿಗಳ ಒಂದು ತಂಡ ಕಲುಬುರಗಿಯಲ್ಲಿ ಆರೋಪಿಗಳ ಬಂಧನ ಕಾರ್ಯದಲ್ಲಿ ನಿರತವಾಗಿದೆ.
ಪ್ರಮುಖ ಸಾಕ್ಷಿ ಕಾರ್ಬನ್ ಶೀಟ್?
ಒಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್ ಅಕ್ರಮ ದಂಧೆ ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯವಾಗಿ ಪರಿಣಮಿಸಲಿದೆ. ನೇಮಕಾತಿ ವಿಭಾಗದಲ್ಲಿ ಇರುವ ಅಸಲಿ ಒಎಂಆರ್ ಶೀಟ್‌ನಲ್ಲಿ ಮತ್ತು ಕಾರ್ಬನ್ ಶೀಟ್‌ನಲ್ಲಿ ಉತ್ತರಿಸುವ ಆಯ್ಕೆ ಒಂದೇ ಆಗಿರಬೇಕು. ಸ್ವಲ್ಪ ಬದಲಾವಣೆ ಇದ್ದರೂ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿ ಅಸಲಿತನ ಪರಿಶೀಲಿಸಲಾಗುತ್ತಿದೆ ಎನ್ನಲಾಗಿದೆ.