ಬೆಂಗಳೂರು: ಪಿಎಸ್‌ಐ ಪರೀಕ್ಷಾ ನೇಮಕಾತಿ ಅಕ್ರಮದ ರೂವಾರಿ ಎಡಿಜಿಪಿ ಅಮೃತ್ ಪೌಲ್ ಮತ್ತು ಅವರ ಬೇನಾಮಿ ವ್ಯಕ್ತಿ ಶಂಭುಲಿಂಗಸ್ವಾಮಿ ನಡುವೆ ನಡೆದ ಕೋಡ್‌ವರ್ಡ್ “ಡಬರ್ ಜೀರೋ’ ಹಣಕಾಸಿನ ವ್ಯವಹಾರವನ್ನು ಸಿಐಡಿ ಪೊಲೀಸರು ಭೇದಿಸಿದ್ದಾರೆ.
ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 35ನೇ ಆರೋಪಿ ಆಗಿರುವ ಅಮೃತ್ ಪೌಲ್ ವಿರುದ್ಧ ಸಿಐಡಿ ಪೊಲೀಸರು ಸಲ್ಲಿಸಿರುವ 1,406 ಪುಟಗಳ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಕೋಡ್ ವರ್ಡ್ ಬಗ್ಗೆ ಉಲ್ಲೇಖೀಸಲಾಗಿದೆ.
ಅಭ್ಯರ್ಥಿಗಳಿಂದ ಪಡೆದ ಹಣವನ್ನು ಯಾರಿಗೂ ತಿಳಿಯದಂತೆ ವ್ಯವಹಾರ ನಡೆಸಬೇಕು ಎಂಬ ಬಗ್ಗೆ ಸಹಕಾರ ನಗರ ನಿವಾಸಿ ಉದ್ಯಮಿ ಶಂಭುಲಿಂಗ ಸ್ವಾಮಿ ಜತೆ ಅಮೃತ್ ಪೌಲ್ ಮಾತುಕತೆ ನಡೆಸಿದ್ದರು. ಆಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳಿಂದ ಪಡೆದಿದ್ದ ಹಣವನ್ನು ಪೌಲ್ ನೇರವಾಗಿ ಪಡೆಯದೆ ಶಂಭುಲಿಂಗನ ಮೂಲಕ ವ್ಯವಹಾರ ನಡೆಸುತ್ತಿದ್ದರು. ಹತ್ತಾರು ಅಭ್ಯರ್ಥಿಗಳಿಂದ 1.50 ಕೋಟಿ ರೂ. ಪಡೆದುಕೊಂಡಿದ್ದ ಶಂಭುಲಿಂಗ ಅದನ್ನು ಡೈರಿ ಮತ್ತು ಪೆನ್‌ಡ್ರೈವ್‌ನಲ್ಲಿ ನೋಂದಾಯಿಸಿಕೊಂಡಿದ್ದರು ಎಂದು ಸಿಐಡಿ ಮೂಲಗಳು ತಿಳಿಸಿವೆ.
10 ಲಕ್ಷಕ್ಕೆ 10 ಸಾವಿರ ಎಂಟ್ರಿ:
ಅಭ್ಯರ್ಥಿಯೊಬ್ಬ 10 ಲಕ್ಷ ರೂ. ಕೊಟ್ಟರೆ, ಅದನ್ನು ಹತ್ತು ಸಾ.ರೂ. ಎಂದು, 5 ಲಕ್ಷ ರೂ.ಗೆ 5 ಸಾ. ರೂ. ಎಂದು ನೋಂದಾಯಿಸಿಕೊಳ್ಳುತ್ತಿದ್ದ ಶಂಭುಲಿಂಗ, ಅದನ್ನು ಅಮೃತ್‌ಪೌಲ್‌ಗೆ ಕೋಡ್ ವರ್ಡ್‌ನಲ್ಲಿಯೇ ಮಾಹಿತಿ ನೀಡುತ್ತಿದ್ದ. ದಾಳಿ ವೇಳೆ ವಶಕ್ಕೆ ಪಡೆದುಕೊಂಡಿದ್ದ ಪೆನ್‌ಡ್ರೈವ್‌ನಲ್ಲಿ ಈ ಅಂಶಗಳು ಗೊತ್ತಾಗಿದ್ದು, ಆರಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರು ಪೆನ್‌ಡ್ರೈವ್ ಮತ್ತು ಡೈರಿಯಲ್ಲಿ ಪತ್ತೆಯಾಗಿದೆ. ಸಹಕಾರ ನಗರದಲ್ಲಿರುವ ಅಮೃತ್ ಪೌಲ್ ಮನೆ ಎದುರಿನಲ್ಲೇ ಶಂಭುಲಿಂಗ ವಾಸವಾಗಿದ್ದರಿಂದ ಇಬ್ಬರ ನಡುವೆ ಹಣಕಾಸಿನ ವ್ಯವಹಾರ ನಡೆಯುತ್ತಿತ್ತು.ಜತೆಗೆ ಚಿಕ್ಕಬಳ್ಳಾಪುರ, ಕೋಲಾರದಲ್ಲಿನ ಫಾರ್ಮ್ ಹೌಸ್‌ನಲ್ಲಿ ಆಗಾಗ್ಗೆ ಇಬ್ಬರು ಭೇಟಿಯಾಗಿ ವ್ಯವಹಾರ ಮಾಹಿತಿ ಹಂಚಿಕೊಳ್ಳುತ್ತಿದ್ದರು ಎಂದು ಸಿಐಡಿ ಮೂಲಗಳು ತಿಳಿಸಿವೆ.