ಬೆಂಗಳೂರು: “ಸರ್ಕಾರಕ್ಕೆ ನಾನು ಹೇಳುವುದು ಒಂದೇ ಮಾತು, ದೇಶದ ಭವಿಷ್ಯ ಉಜ್ವಲವಾಗ ಬೇಕಾದರೆ ಯುಪೀಳಿಗೆಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗ ನೀಡಬೇಕು’ ಎಂದು ಖ್ಯಾತ ವಿಜ್ಞಾನಿ ಭಾರತ ರತ್ನ ಪ್ರೊ. ಸಿ.ಎನ್.ಆರ್ ರಾವ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಶನಿವಾರ ಕರ್ನಾಟಕ ವಿಶ್ವಮಾನವ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ವಿಶ್ವಮಾನವ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, ದೇಶದಲ್ಲಿ 25ರಿಂದ 30 ಕೋಟಿ ಮಕ್ಕಳು ಇದ್ದಾರೆ.
ಭಾರತದ ಭವಿಷ್ಯ ಈ ಮಕ್ಕಳ ಕೈಯಲ್ಲಿದೆ.
ಇವರೇ ಭವಿಷ್ಯದಲ್ಲಿ ದೇಶವನ್ನು ಮುನ್ನೆಡೆಸುವವರು. ಹಾಗಾಗಿ, ದೇಶದ ಭವಿಷ್ಯ ಉಜ್ವಲವಾಗಬೇಕು ಎಂದು ಸರ್ಕಾರಗಳು ಬಯಸುತ್ತಿದ್ದರೆ, ಯುವಪೀಳಿಗೆಗೆ ಒಳ್ಳೆಯ ಶಿಕ್ಷಣ ಮತ್ತು ಉದ್ಯೋಗ ನೀಡಿದರೆ ಜಾಗತಿಕ ಪೈಪೋಟಿ ಎದುರಿಸುವುದರ ಜೊತೆಗೆ ಅವರು ಸುಭದ್ರ ದೇಶ ನಿರ್ಮಾಣದಲ್ಲಿ ತಮ್ಮ ಪಾತ್ರ ನಿರ್ವಹಿಸಬಲ್ಲರು ಎಂದು ಪ್ರೊ. ರಾವ್ ಹೇಳಿದರು.
ನಾನು ಕಳೆದ 60 ವರ್ಷಗಳಿಂದ ವಿಜ್ಞಾನವನ್ನು ಆನಂದಿಸುತ್ತಿದ್ದೇನೆ. ಸಂಶೋಧನೆ ಅನ್ನುವುದು ಒಂದು ರೀತಿ ವೈರಸ್ ಇದ್ದಂತೆ. ಆ ವೈರಸ್ ನನಗೆ ಅಂಟಿಕೊಂಡಿದೆ. ಆದರೆ, ಸಂಶೋಧನೆಯ ಈ ವೈರಸ್ ಅಪಾಯಕಾರಿಯಲ್ಲ. ಬದಲಿಗೆ ಉಪಯುಕ್ತವಾದ್ದದ್ದು. ಈ ವೈರಸ್ ನಮ್ಮಲ್ಲಿ ವಿಜ್ಞಾನದ ಹುಚ್ಚು ಹೆಚ್ಚಿಸುತ್ತದೆ. ಸಂಶೋಧನೆಗೆ ಕ್ರಿಯಾಶೀಲತೆ ಮುಖ್ಯ. ಅದಕ್ಕಾಗಿ ಸಂಶೋಧನೆಗೆ ಉತ್ತೇಜನ ನೀಡುವಂತಹ ಸಂಸ್ಥೆಗಳು ಹೆಚ್ಚೆಚ್ಚು ಸ್ಥಾಪನೆಯಾಗಬೇಕು ಎಂದು ಕಿವಿಮಾತು ಹೇಳಿದರು.
ನಿವೃತ್ತ ಐಪಿಎಸ್ ಅಧಿಕಾರಿ ಕೆವಿಆರ್ ಟ್ಯಾಗೋರ್ ಮಾತನಾಡಿ, ಭಾರತ ಮುಂದುವರಿಯಬೇಕಾದರೆ ವಿಜ್ಞಾನ ಮತ್ತು ಆಧ್ಯಾತ್ಮಕ್ಕೆ ಮಹತ್ವ ನೀಡಬೇಕು ಎಂದು ಕುವೆಂಪು ಹೇಳಿದ್ದಾರೆ. ಅದೇ ರೀತಿ ಭಾರತ ಬದುಕಬೇಕಾದರೆ ಜಾತಿ-ಮತಗಳ ವೈಷಮ್ಯ ತೊಡೆದು ಹಾಕಬೇಕು ಎಂದು ಹೇಳಿದರು.
ಪ್ರೊ. ರಾವ್ ಅವರ ಪತ್ನಿ ಇಂದುಮತಿ ರಾವ್, ಕರ್ನಾಟಕ ವಿಶ್ವಮಾನವ ಸಂಸ್ಥೆ ಅಧ್ಯಕ್ಷ ಎಚ್. ಎಸ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎನ್.ಬಿ. ದಿನೇಶ್ ಮತ್ತಿತರರು ಇದ್ದರು.
ಕುವೆಂಪು ಅವರಿಗೆ ಭಾರತ ರತ್ನ ಕೊಡಿ
ವಿಜ್ಞಾನದ ಮೇರು ಪರ್ವತ ಪ್ರೊ. ಸಿ.ಎನ್. ಆರ್. ರಾವ್ ಅವರಿಗೆ ಭಾರತ ರತ್ನ ಸಿಕ್ಕಿರುವುದು ನಮಗೆ ಹೆಮ್ಮೆಯ ವಿಷಯ. ಅದೇ ರೀತಿ ಸಾಹಿತ್ಯದ ಮೇರು ಪರ್ವತ ರಾಷ್ಟ್ರಕವಿ ಕುವೆಂಪು ಅವರಿಗೆ ಈಗಾಗಲೇ ಭಾರತ ರತ್ನ ಸಿಕ್ಕಿರಬೇಕಿತ್ತು. ಈಗಲಾದರೂ ಕುವೆಂಪು ಅವರಿಗೆ ಭಾರತ ರತ್ನ ಕೊಡಿ ಎಂದು ನಾನು ಸರ್ಕಾರವನ್ನು ಒತ್ತಾಯಿ
ಸುತ್ತೇನೆ ಎಂದು ಪಿ.ಇ.ಎಸ್ ವಿವಿಯ ಕುಲಾಧಿಪತಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಪ್ರೊ. ಎಂ.ಆರ್.
ದೊರೆಸ್ವಾಮಿ ಹೇಳಿದರು.