Advertisement

ತುರ್ತು ಕಾಮಗಾರಿ ಕೈಗೊಂಡು ಕುಡಿವ ನೀರು ಒದಗಿಸಿ

03:12 PM Mar 30, 2019 | Team Udayavani |

ತುಮಕೂರು: ಜಿಲ್ಲೆಯಲ್ಲಿ ಬರಪರಿಸ್ಥಿತಿ ಇರುವುದರಿಂದ ದೂರುಗಳು ಬಾರದ ರೀತಿಯಲ್ಲಿ ತುರ್ತು ಕಾಮಗಾರಿ ಕೈಗೊಂಡು ಕುಡಿಯುವ ನೀರು ಒದಗಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾ ಪಂಚಾಯತಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಬರಪರಿಹಾರಕ್ಕೆ ಸಂಬಂಧಿಸಿದ 5ನೇ ವಾರದ ಪರಿಶೀಲನಾ ಸಭೆಯಲ್ಲಿ ನೋಡಲ್‌ ಅಧಿಕಾರಿಗಳನ್ನುದ್ದೇಶಿಸಿದ ಮಾತನಾಡಿ, ಕುಡಿಯುವ ನೀರಿಗೆ ಸಮಸ್ಯೆಯಿರುವ ಗ್ರಾಮಗಳಲ್ಲಿ ತುರ್ತು ಕ್ರಮ ಕೈಗೊಳ್ಳಲು ಕೆಲವು ಅಧಿಕಾರಿಗಳು ಮುಂದಾಗುತ್ತಿಲ್ಲ. ಪ್ರತೀ ವಾರ ವರದಿ ಸಲ್ಲಿಸುವಂತೆ ಸೂಚಿಸಿದ್ದರೂ ಸಮರ್ಪಕ ಮಾಹಿತಿ ನೀಡುತ್ತಿಲ್ಲ.

ಬೇಸಿಗೆಯಾಗಿರುವುದರಿಂದ ಕುಡಿಯುವ ನೀರಿಗೆ ಸಂಬಂಧಿಸಿದ ಹಲವಾರು ದೂರುಗಳು ಬರುತ್ತಿವೆ. ಎಲ್ಲ ತಾಲೂಕು ಪಂಚಾಯಿತಿಗಳಲ್ಲೂ ತಪ್ಪದೇ ದೂರುವಾಹಿ ಕಾರ್ಯ ನಿರ್ವಹಿಸಬೇಕು. ಗ್ರಾಮಸ್ಥರಿಂದ ದೂರು ಬರದಂತೆ ಅಧಿಕಾರಿಗಳು ಕುಡಿಯುವ ನೀರಿನ ತುರ್ತು ಕಾಮಗಾರಿಗಳನ್ನು ಪ್ರಥಮಾದ್ಯತೆ ಮೇಲೆ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

ಟ್ರಿಪ್‌ ನೀರು ಪೂರೈಕೆ: ಅಗತ್ಯವಿರುವ ಕಡೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿರುವ ಬಗ್ಗೆ ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಮಾಹಿತಿ ಪಡೆದು, ಜಿಲ್ಲೆಯಲ್ಲಿ ಈವರೆಗೆ 69 ಗ್ರಾಮ ಪಂಚಾಯಿತಿಗಳ ಪೈಕಿ 95 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ 272 ಟ್ರಿಪ್‌ ನೀರು ಪೂರೈಸಲಾಗುತ್ತಿದೆ ಹಾಗೂ 65 ಖಾಸಗಿ ಕೊಳವೆ ಬಾವಿಗಳ ಮಾಲೀಕರಿಂದ ಕರಾರು ಒಪ್ಪಂದದ ಮೇರೆಗೆ ನೀರು ಪಡೆದು ಗ್ರಾಮೀಣ ಪ್ರದೇಶಗಳಲ್ಲಿ ನೀರು ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಎಂಜಿನಿಯರ್‌ಗೆ ತಾಕೀತು: ಪಂಚಾಯಿತಿಗಳಲ್ಲಿ ಲಭ್ಯವಿರುವ 14ನೇ ಹಣಕಾಸು ಯೋಜನಾನುದಾನವನ್ನು ಬಳಸಿಕೊಂಡು ಕುಡಿಯುವ ನೀರಿನ ತುರ್ತು ಕಾಮಗಾರಿಗಳನ್ನು ಕೈಗೊಳ್ಳಬೇಕು. ಸದರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೂಡಲೇ ಕ್ರಿಯಾ ಯೋಜನೆ ರೂಪಿಸಿ ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಇಫ್ತಿಕಾರ್‌ ಅಹಮದ್‌ ಅವರಿಗೆ ನೀಡಬೇಕು ಎಂದು ತಾಕೀತು ಮಾಡಿದರು.

Advertisement

ಹಣ ಪಾವತಿಸಲು ನಿಮಗೇನು ತೊಂದರೆ: ಉಪ ಕಾರ್ಯದರ್ಶಿ ಕೃಷ್ಣಪ್ಪ ಮಾತನಾಡಿ, ಕೈಪಂಪ್‌ ಇರುವ ಪ್ರತೀ ಕೊಳವೆ ಬಾವಿಗಳ ದುರಸ್ತಿಗಾಗಿ 1 ಸಾವಿರ ರೂ.ಗಳನ್ನು ಖರ್ಚು ಮಾಡಲು ಗ್ರಾಮ ಪಂಚಾಯತಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ನೀರಿನ ಸೆಲೆಯಿರುವ ಇಂಥ ಕೊಳವೆಬಾವಿಗಳನ್ನು ಕಡೆಗಣಿಸದೆ ದುರಸ್ತಿಪಡಿಸಲು ಪಿಡಿಒಗಳು ಮುಂದಾಗಬೇಕು.

ಮಧುಗಿರಿ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೆಸಲಾಗಿರುವ 93 ಕೊಳವೆ ಬಾವಿಗಳ ವೆಚ್ಚವನ್ನು ಈವರೆಗೂ ಏಜೆನ್ಸಿಗೆ ಪಾವತಿ ಮಾಡಿರುವುದಿಲ್ಲ. ಅನುದಾನ ಲಭ್ಯವಿದ್ದರೂ ಏಜೆನ್ಸಿಗಳಿಗೆ ಹಣ ಪಾವತಿ ಮಾಡಲು ನಿಮಗೇನು ತೊಂದರೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.

ಟೆಂಡರ್‌ ಕರೆಯುವ ಅಗತ್ಯವಿಲ್ಲ: ಕೊಳವೆಬಾವಿ ಕೊರೆಯಲು ಲೋಕೋಪಯೋಗಿ ಇಲಾಖೆಯು ದರ ನಿಗಧಿಪಡಿಸಿರುವುದರಿಂದ ಟೆಂಡರ್‌ ಕರೆಯುವ ಅಗತ್ಯವಿಲ್ಲ. ನೀರಿನ ಸಮಸ್ಯೆ ತಲೆದೋರುವ ಮುನ್ನವೇ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಅಧಿಕಾರಿಗಳು ಚುನಾವಣೆ ಕೆಲಸದ ಜೊತೆಗೆ ಬರ ನಿರ್ವಹಣೆಯನ್ನೂ ಸಮರ್ಪಕವಾಗಿ ಮಾಡಬೇಕು.

ಏ.18ರ ನಂತರ ಒತ್ತಡ ಕಡಿಮೆ ಕಡಿಮೆಯಾಗಲಿದ್ದು, ಅಲ್ಲಿಯವರೆಗೂ ಎಚ್ಚರಿಕೆಯಿಂದ ನಿಭಾಯಿಸಬೇಕು. ಅನುದಾನ ಬಳಸಿಕೊಂಡು ಕಾಮಗಾರಿ ಪೂರ್ಣಗೊಂಡಿದ್ದಲ್ಲಿ ಉಪಯೋಗಿತ ಪ್ರಮಾಣ ಪತ್ರವನ್ನು ಜಿಪಂಗೆ ಸಲ್ಲಿಸಿದಾಗ ಮಾತ್ರ ಮುಂದಿನ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ನೋಡಲ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ಕೆಸರಿನಿಂದ ಕೂಡಿರುವ ನೀರು: ಕೆರೆಗಳಿಂದ ಕುಡಿಯುವ ನೀರು ಸರಬರಾಜು ಮಾಡುವ ಕಡೆ ನೀರು ಕೆಸರಿನಿಂದ ಕೂಡಿರುತ್ತಿದೆ ಎಂಬ ದೂರುಗಳಿವೆ. ಕುಡಿಯಲು ಯೋಗ್ಯವಿರುವಂತೆ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಬೇಕು. ಗುಬ್ಬಿ ತಾಲೂಕು ಚೇಳೂರು ಹೋಬಳಿ ಜಾಲಗುಣಿ ಗ್ರಾಮದಲ್ಲಿ 120 ಮನೆಗಳಿದ್ದು, ನೀರಿನ ಮೂಲಗಳೇ ಇಲ್ಲವೆಂದು ನೋಡಲ್‌ ಅಧಿಕಾರಿ ವರದಿ ಮಾಡಿದ್ದು, ಅಕ್ಕ-ಪಕ್ಕದ ಗ್ರಾಮಗಳಿಂದ ನೀರು ಪಡೆದು ಪೂರೈಕೆ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಎಂಜಿನಿಯರ್‌ಗೆ ಜಿಪಂ ಸಿಇಒ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next