ಹೊಸದಿಲ್ಲಿ : ಜಾತಿ ಆಧಾರಿತ ಮೀಸಲಾತಿ ಕ್ರಮವನ್ನು ವಿರೋಧಿಸಿ ವಿವಿಧ ಸಮೂಹಗಳು ಇಂದು ನಡೆಸುತ್ತಿರುವ ಭಾರತ್ ಬಂದ್, ಬಿಹಾರದಲ್ಲಿ ಇಂದು ಮಂಗಳವಾರ ಬೆಳಗ್ಗಿನಿಂದ ನಿಧಾನವಾಗಿ ತೀವ್ರತೆಯನ್ನು ಪಡೆದುಕೊಂಡಿದೆ.
ಬಿಹಾರದ ಅರ್ಹಾ ದಲ್ಲಿ ಪ್ರತಿಭಟನಕಾರರು ರೈಲುಗಳನ್ನು ತಡೆದ ಪರಿಣಾಮವಾಗಿ ರೈಲು ಓಡಾಟಗಳು ಬಾಧಿತವಾಗಿವೆ. ದರ್ಭಾಂಗದಲ್ಲೂ ಪ್ರತಿಭಟನೆಗಳು ಜೋರಾಗಿ ನಡೆಯುತ್ತಿವೆ.
ಎಸ್‌ಸಿ/ಎಸ್‌ಟಿ ಕಾಯಿದೆಯನ್ನು ದುರ್ಬಲಗೊಳಿಸಲಾದುದನ್ನು ಪ್ರತಿಭಟಿಸಿ ಕಳೆದ ಎ.2ರಂದು ದಲಿತ ಸಮೂಹಗಳು ನಡೆಸಿದ್ದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದರು. ಹಾಗಾಗಿ ಕೇಂದ್ರ ಸರಕಾರ ಈ ಬಾರಿ ಎಚ್ಚೆತ್ತುಕೊಂಡು ಎಲ್ಲ ರಾಜ್ಯಗಳಿಗೆ ಇಂದಿನ ಭಾರತ್ ಬಂದ್ ನಿಭಾಯಿಸಲು ಬಿಗಿ ಭದ್ರತೆಯನ್ನು ಆಯೋಜಿಸುವಂತೆ ಪೂರ್ವ ಸೂಚನೆ ನೀಡಿತ್ತು.
ಆ ಪ್ರಕಾರ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿನ ವಿವಿಧ ಭಾಗಗಳಲ್ಲಿ ಸೆ.144 ಹೇರಲಾಗಿದೆ. ಇಂಟರ್‌ನೆಟ್ ಸೇವೆಗಳನ್ನು ಅಮಾನತುಪಡಿಸಲಾಗಿದೆ. ವಾಟ್ಸಾಪ್ ನಲ್ಲಿ ಭಾರತ್ ಬಂದ್ ಸಂದೇಶಗಳು ತೀವ್ರವಾಗಿ ಹರಿದಾಡುತ್ತಿದ್ದುದನ್ನು ಅನುಸರಿಸಿ ಇಂಟರ್‌ನೆಟ್ ಸೇವೆ ನಿಲ್ಲಿಸಲಾಗಿದೆ.
ಇಂದು ಬೆಳಗ್ಗೆ ಬಿಹಾರದ ಅರ್ಹಾ ದಲ್ಲಿ ಎರಡು ಗುಂಪುಗಳ ನಡುವೆ ಕಾದಾಟ ಏರ್ಪಟ್ಟಿತು. ಗುಂಡು ಹಾರಿದ ಸದ್ದು ಕೇಳಿ ಬಂತು.
ಉತ್ತರ ಪ್ರದೇಶದ ಮೀರತ್‌ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದ ವರದಿಗಳು ಬಂದಿಲ್ಲ.