Advertisement

ನಾಲೆಗಳಿಗೆ ನೀರು ಬಿಡಲು ಒತ್ತಾಯಿಸಿ ಪ್ರತಿಭಟನೆ

11:37 AM Jul 25, 2017 | Team Udayavani |

ಮೈಸೂರು: ಹಾರಂಗಿ ಜಲಾಶಯದಿಂದ ಹಾರಂಗಿ ಎಡ ಮತ್ತು ಬಲದಂಡೆ ನಾಲೆಗಳು, ಕಟ್ಟೇಪುರ, ಗೊರೂರು ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕಾವೇರಿ ಅಚ್ಚುಕಟ್ಟು ಪ್ರಾಧಿಕಾರಿ (ಕಾಡಾ) ಕಚೇರಿ ಮುಂದೆ ಶಾಸಕ ಸಾ.ರಾ.ಮಹೇಶ್‌ ನೇತೃತ್ವದಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು. 

Advertisement

ಕೆ.ಆರ್‌.ನಗರದಿಂದ ಸಾ.ರಾ.ಮಹೇಶ್‌ ನೇತೃತ್ವದಲ್ಲಿ ಪಾದಯಾತ್ರೆಯಲ್ಲಿ ಮೈಸೂರಿಗೆ ಆಗಮಿಸಿದ ನೂರಾರು ರೈತರು ಕಾಡಾ ಕಚೇರಿ ಮುಂದೆ ಧರಣಿ ಪ್ರಾರಂಭಿಸಿದರು. ಕಾಡಾ ಕಚೇರಿ ಬದಲಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಲು ಸಾ.ರಾ.ಮಹೇಶ್‌ ನೇತೃತ್ವದಲ್ಲಿ ಹೊರಟ ರೈತರನ್ನು ಮನವೊಲಿಸಲು ಯತ್ನಿಸಿದಾಗ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಮಾತಿಗೆ ಮಣಿಯದ ಧರಣಿ ನಿರತರು ನಗರಪಾಲಿಕೆ ಕಚೇರಿ ಮಾರ್ಗದ ರಸ್ತೆಯಲ್ಲೇ ಧರಣಿ ಕುಳಿತರು.

ಅಧಿಕಾರಿಗಳಿಗೆ ತರಾಟೆ: ಡಿಸಿಪಿ ಡಾ.ಎಚ್‌.ಟಿ.ಶೇಖರ್‌, ಈ ಮಾರ್ಗದಲ್ಲಿ ಮೆರವಣಿಗೆ ಹೋಗಲು ಅವಕಾಶ ಇಲ್ಲ. ತಾವು ಧರಣಿ ಕುಳಿತ ಸ್ಥಳಕ್ಕೆ ಸಂಬಂಧಿಸಿದವರನ್ನು ಕರೆಸಲಾಗುವುದು ಎಂದು ಮನವೊಲಿಸಲು ಯತ್ನಿಸಿದರಾದರೂ ನಾವೇನೂ ಬಸ್‌, ಕಾರುಗಳಿಗೆ ಕಲ್ಲುತೂರಲು ಬಂದಿಲ್ಲ. ನಾವು ರೈತರು, ನಮ್ಮ ಪ್ರಾಣ ಹೋಗುತ್ತಿದೆ, ಯಾವ್ಯಾವುದೋ ಮೆರವಣಿಗೆಗೆ ಅವಕಾಶ ಕೊಡುತ್ತೀರಿ, ರೈತರನ್ನು ತಡೆಯುತ್ತೀರಾ ಎಂದು ತರಾಟೆಗೆ ತಗೆದುಕೊಂಡು ಧಿಕ್ಕಾರ ಕೂಗಿಕೊಂಡು ಮೆರವಣಿಗೆಯಲ್ಲಿ ಸಾಗಿದರು.

ಧರಣಿ ಆರಂಭ: ನಗರ ಬಸ್‌ ನಿಲ್ದಾಣದ ಮಾರ್ಗದಲ್ಲಿ ಮೆರವಣಿಗೆಯನ್ನು ತಡೆದ ಪೊಲೀಸರು ಕೆ.ಆರ್‌.ವೃತ್ತದಿಂದ ಮೆರವಣಿಗೆ ತೆರಳಲು ಅವಕಾಶವಿಲ್ಲವೆಂದು ಹೇಳಿದ ಡಿಸಿಪಿ ಎಚ್‌.ಟಿ.ಶೇಖರ್‌ ಹಾಗೂ ಎಸಿಪಿ ರಾಜಶೇಖರ್‌, ಶಾಸಕರ ಮನವೊಲಿಸುವಲ್ಲಿ ಸಫ‌ಲವಾದರು. ಬಳಿಕ ಅದೇ ಮಾರ್ಗವಾಗಿ ಹಿಂದಕ್ಕೆ ಬಂದು ಕಾಡಾ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ನಾಲೆಗೆ ನೀರುಬಿಡುವರೆಗೆ ಧರಣಿ: ಶಾಸಕ ಸಾ.ರಾ.ಮಹೇಶ್‌ ಮಾತನಾಡಿ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌.ಸೀತಾರಾಮ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕಳೆದ ಬುಧವಾರದಿಂದ ನಾಲೆಗೆ ನೀರು ಹರಿಸಲು ಒಪ್ಪಿಗೆ ನೀಡಲಾಗಿತ್ತು. ಆದರೆ, ಈವರೆಗೂ ನಾಲೆಗಳಿಗೆ ನೀರು ಹರಿಸಿಲ್ಲ ಎಂದು ಆರೋಪಿಸಿದರು.

Advertisement

ನಾವು ಬೆಳೆಗಳಿಗೆ ನೀರು ಕೊಡಿ ಎಂದು ಕೇಳುತ್ತಿಲ್ಲ. ಸಲಹಾ ಸಮಿತಿಸಭೆಯಲ್ಲಿ ತೀರ್ಮಾನವಾದ ಮೇಲೆ ನೀರು ಬಿಡಲಿ, ಆದರೆ, ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ಬಿಡಬೇಕು. ತಮಿಳುನಾಡಿಗೆ ನಿತ್ಯ 10 ಸಾವಿರ ಕ್ಯೂಸೆಕ್‌ ನೀರು ಬಿಡುತ್ತಿರುವ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.

 ಸರ್ಕಾರ ಕೂಡಲೇ ಹಾರಂಗಿ, ಕಟ್ಟೇಪುರ, ಗೊರೂರು ನಾಲೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಪ್ರತಿ ಎಕರೆಗೆ 25 ಸಾವಿರದಂತೆ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ನಾಲೆಗಳಿಗೆ ನೀರು ಹರಿಸುವವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.

ಶಾಸಕ ಎಸ್‌.ಚಿಕ್ಕಮಾದು ಮಾತನಾಡಿ, ಕೆಆರ್‌ಎಸ್‌, ಕಬಿನಿ ಜಲಾಶಯ ತುಂಬುವ ಮುನ್ನವೇ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರ, ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ನಾಲೆಗಳಿಗೆ ನೀರು ಹರಿಸದೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಮಾಜಿ ಸಂಸದ ಎಚ್‌.ವಿಶ್ವನಾಥ್‌, ಶಾಸಕ ಜಿ.ಟಿ.ದೇವೇಗೌಡ, ಮೇಯರ್‌ ಎಂ.ಜೆ.ರವಿಕುಮಾರ್‌, ಮಾಜಿ ಮೇಯರ್‌ಗಳಾದ ಬಿ.ಎಲ್‌.ಭೈರಪ್ಪ, ಆರ್‌.ಲಿಂಗಪ್ಪ, ಸಂದೇಶ್‌ಸ್ವಾಮಿ, ಮಾಜಿ ಉಪ ಮೇಯರ್‌ ಕೆ.ವಿ.ಶೈಲೇಂದ್ರ, ಪಾಲಿಕೆ ಸದಸ್ಯ ಕೆ.ವಿ.ವåಲ್ಲೇಶ್‌, ನಗರ ಜೆಡಿಎಸ್‌ ಅಧ್ಯಕ್ಷ ಕೆ.ಹರೀಶ್‌ಗೌಡ,  ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ನರಸಿಂಹಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾಶಂಕರೇಗೌಡ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next