Advertisement

ಶಾಲೆ ಉನ್ನತೀಕರಿಸಲು ಒತ್ತಾಯಿಸಿ ಪ್ರತಿಭಟನೆ

05:40 PM May 31, 2022 | Team Udayavani |

ಲಿಂಗಸುಗೂರು: ತಾಲೂಕಿನ ಜಾಗಿರನಂದಿಹಾಳ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಉನ್ನತೀಕರಿಸುವಂತೆ ಒತ್ತಾಯಿಸಿ ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಸೋಮವಾರ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

Advertisement

ಗ್ರಾಮದಲ್ಲಿ 1-5ನೇ ತರಗತಿವರೆಗೆ ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಿ ದಶಕಗಳೇ ಕಳೆದಿವೆ. ಆದರೆ, ಈವರೆಗೂ ಉನ್ನತೀಕರಿಸಿಲ್ಲ. ಇದರಿಂದ 6ರಿಂದ 10 ನೇ ತರಗತಿ ಶಿಕ್ಷಣ ಕಲಿಯಲು ರೋಡಲಬಂಡಾ ಅಥವಾ ಆನೆಹೊಸೂರು ಗ್ರಾಮಗಳಿಗೆ ತೆರಳಬೇಕಿದೆ. ಆದರೆ, ಸಮಯಕ್ಕೆ ಸರಿಯಾದ ಸಾರಿಗೆ ಬಸ್‌ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡಬೇಕಾಗಿದೆ ಮತ್ತು ಮಳೆಗಾಲದಲ್ಲಿ ಗ್ರಾಮದ ಮುಂದಿನ ಹಳ್ಳ ತುಂಬಿ ಹರಿದರೆ ಸಂಪರ್ಕ ಕಡಿತಗೊಂಡು ಶಾಲೆಗಳಿಗೆ ತೆರಳಲು ಸಾಧ್ಯವಾಗದೆ ಮನೆಯಲ್ಲೇ ಉಳಿಯುವ ಪರಿಸ್ಥಿತಿ ಎದುರಾಗಲಿದೆ.

ಹೀಗಾಗಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉನ್ನತೀಕರಿಸಬೇಕು. ಆಟದ ಮೈದಾನ ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳಿಗೆ ಬೆಂಚು, ಖುರ್ಚಿ, ಆಟದ ಸಾಮಗ್ರಿ ವ್ಯವಸ್ಥೆ ಕಲ್ಪಿಸಬೇಕು. ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಬೇಕು. ಬೆಳಗ್ಗೆ 8-30 ಮತ್ತು ಸಂಜೆ 4-30 ಗಂಟೆಗೆ ಸಾರಿಗೆ ಬಸ್‌ ಮತ್ತು ಬಸ್‌ ಪಾಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ಮಹಾದೇವಪ್ಪ, ನಾಗಪ್ಪ, ವೆಂಕೋಬ ಹಾಗೂ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next