ಮಾಗಡಿ: ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಸಿಡಿಪಿಒ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾ ಸಂಘದ ಅಧ್ಯಕ್ಷೆ ಎಚ್. ಯಶೋಧಮ್ಮ ಮಾತನಾಡಿ, ಕಾರ್ಯಕರ್ತೆಯರಿಗೆ ಗೌರವ ಧನವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು.
ಬಾಲವಿಕಾಸ ಸಮಿತಿ ಪುನರ್ ರಚಿಸುವಲ್ಲಿ ಗ್ರಾಮ, ನಗರ ಪ್ರದೇಶಗಳಲ್ಲಿ ತಾಯಂದಿರ ಜೊತೆ ಖಾತೆ ತೆರೆಯಲು ಕಡ್ಡಾಯ ಮಾಡಿರುವುದನ್ನು ಕೂಡಲೇ ವಾಪಸ್ಸು ಪಡೆಯಬೇಕು. ಪ್ರತಿ ತಿಂಗಳು 5ನೇ ತಾರೀಕಿನೊಳಗೆ ಗೌರವ ಧನ ನೀಡಬೇಕು.
ಮಕ್ಕಳಿಗೆ ಮೊಟ್ಟೆ, ತರಕಾರಿ ಹಣ ನಿಲ್ಲಿಸಿರುವುದನ್ನು ಕೂಡಲೇ ಕೊಡಬೇಕು. ಕಾರ್ಯಕರ್ತೆಯರ ಖಾತೆಗೆ ಒಂದು ತಿಂಗಳ ಮುಂಚಿತವಾಗಿ ಹಣ ಹಾಕಬೇಕು. ಇಲ್ಲದಿದ್ದರೆ ಇಲಾಖೆಯವರೇ ಸರಬರಾಜು ಮಾಡಬೇಕು. ಕಾರ್ಯಕರ್ತೆಯರನ್ನು ಬಿಎಲ್‌ಒಗಳಿಂದ ವಜಾಗೊಳಿಸಿ ಅಂಗನವಾಡಿ ಕೆಲಸಕ್ಕೆ ಸೀಮಿತ ಮಾಡಬೇಕು. ಬೇರೆ ಇಲಾಖೆ ಕೆಲಸಗಳನ್ನು ಕಾರ್ಯಕರ್ತೆಯರಿಗೆ ವಹಿಸಬಾರದು ಎಂದು ಆಗ್ರಹಿಸಿದರು.
ತಾಲೂಕಿನ 290 ಅಂಗನವಾಡಿಗಳ ಸುಮಾರು 400 ಕಾರ್ಯಕರ್ತೆಯರು ಮಾಗಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಶಿಶು ಅಭಿವೃದ್ಧಿ ಅಧಿಕಾರಿಗಳ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದ ನಂತರ ಸಿಡಿಪಿಒ ಭಾರತಿದೇವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮೀನಮ್ಮ, ದಲಿತ ಮುಖಂಡ ಸಿ.ಜಯರಾಂ, ಕಾರ್ಯದರ್ಶಿ ಜಿ.ಸಿ.ಲಲಿತಾ, ಖಜಾಂಚಿ ಎ.ಎನ್.ಲಲಿತಾ, ಎಂ.ಹೇಮಾವತಿ, ಶ್ರೀದೇವಿ, ಅನ್ನಪೂರ್ಣಮ್ಮ, ವಿಜಯಾ, ಕಲ್ಪನಾ, ಶರಾವತಿ ಮತ್ತಿತರರು ಹಾಜರಿದ್ದರು.