Advertisement
ಕೊಕ್ಕಡದ ಜೋಡುಮಾರ್ಗದಿಂದ ಕಪ್ಪು ಬಾವುಟ ಹಿಡಿದುಕೊಂಡು ಗ್ರಾ.ಪಂ. ಎದುರು ಬಂದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಪೂವಾಜೆ ಕುಶಾಲಪ್ಪ, ಗ್ರಾ.ಪಂ. ಅಧ್ಯಕ್ಷರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡು ಲಂಚ ಸ್ವೀಕರಿಸುವ ವೇಳೆಯಲ್ಲಿ ಎಸಿಬಿಯಿಂದ ಬಂಧನಕ್ಕೊಳಗಾಗಿ ಜೈಲು ಸೇರಿ ಹೊರಬಂದಿದ್ದಾರೆ. ಹಲವು ಕಾಮಗಾರಿಗಳಲ್ಲಿ ಲಂಚ ಸ್ವೀಕರಿಸಿದ್ದಾರೆ. ತಮ್ಮದೇ ಪಕ್ಷದ ಬೆಂಬಲಿಗ ಪಂಚಾಯತ್ ಸದಸ್ಯನ ಮೇಲೆ ಹಲ್ಲೆ ನಡೆಸುವ ಮೂಲಕ ಗೂಂಡಾವರ್ತನೆ ತೋರಿಸಿರುವ ಅಧ್ಯಕ್ಷರು ನಮ್ಮ ಗ್ರಾಮಕ್ಕೆ ಬೇಡವೇ ಬೇಡ. ಗ್ರಾಮಸಭೆಯಲ್ಲೇ ಇದರ ಬಗ್ಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿದ್ದು, ಗ್ರಾಮಸಭೆ ರದ್ದಾದ ಘಟನೆಯೂ ನಡೆದಿತ್ತು. ಅಧ್ಯಕ್ಷರು ರಾಜೀನಾಮೆ ಕೊಡದೇ ಇದ್ದಲ್ಲಿ 15 ದಿನಗಳ ಬಳಿಕ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಕೆಲ ದಿನಗಳ ಹಿಂದೆ ನಡೆದ ಗ್ರಾಮ ಸಭೆಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿ ಗದ್ದಲವೇರ್ಪಟ್ಟು ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದರೂ, ಪೊಲೀಸರು ಸ್ಥಳದಲ್ಲಿ ಹಾಜರಿರಲಿಲ್ಲ. ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಅಧಿಕ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು, ಸಿಬಂದಿ ಹಾಜರಿದ್ದರು.
Related Articles
ಕೊಕ್ಕಡ ಗ್ರಾ.ಪಂ. ಹಿನ್ನೆಲೆಯನ್ನು ಅವಲೋಕಿಸಿದರೆ ಈ ಬಾರಿ ತಮ್ಮ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಅನುದಾನಗಳನ್ನು ತರಿಸಿಕೊಂಡು ನಡೆಸಿದ ಅಭಿವೃದ್ಧಿಯನ್ನು ಸಹಿಸಲಾಗದೆ ಬಿಜೆಪಿ ಪಕ್ಷದ ಬೆಂಬಲಿತರು ನಮ್ಮ ಪಕ್ಷದ ಸದಸ್ಯರನ್ನೂ ಬಳಸಿಕೊಂಡು ಪಿತೂರಿ ನಡೆಸುವ ಮೂಲಕ ನನ್ನನ್ನು ಭ್ರಷ್ಟಾಚಾರದ ಬಲೆಯಲ್ಲಿ ಸಿಲುಕಿಸುವ ಪಿತೂರಿ ಇದಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ ಅವರು ಹೇಳಿದ್ದಾರೆ.
Advertisement
ಅಧ್ಯಕ್ಷರ ಮೇಲೆ ವಿಶ್ವಾಸವಿಲ್ಲ ಎಂದು ವಿರೋಧ ಪಕ್ಷದ ಕೆಲವರು ಬಂದು ಬೊಬ್ಬೆ ಹೊಡೆದ ಮಾತ್ರಕ್ಕೆ ರಾಜೀನಾಮೆ ಕೊಡಲು ಸಾಧ್ಯವಿಲ್ಲ. ಜನರಿಂದ ಅತ್ಯಧಿಕ ಮತಗಳಿಂದ ಆಯ್ಕೆಯಾಗಿ ಕಾನೂನು ರೀತಿಯಲ್ಲಿ ಚುನಾವಣೆಯ ಮೂಲಕ ಅಧಿಕಾರ ಪಡೆಯಲಾಗಿದೆ ವಿನಾ ಪಿತೂರಿ ನಡೆಸಿದವರ ಕೃಪಾಕಟಾಕ್ಷದಿಂದಲ್ಲ. ಅಧಿಕಾರದಿಂದ ಕೆಳಗಿಳಿಸುವ ಉದ್ದೇಶವಿದ್ದರೆ ಕಾನೂನು ರೀತಿ ಮಾಡಲಿ. ಅದು ಬಿಟ್ಟು ಇಂತಹ ಕೀಳುಮಟ್ಟದ ರಾಜಕೀಯ ವರ್ತನೆಗಳಿಗೆ ಮತದಾರರು ಉತ್ತರಿಸುತ್ತಾರೆ ಎಂದವರು ಸಭೆಯಲ್ಲಿ ತಿಳಿಸಿದ್ದಾರೆ.