ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕುವೆಂಪುನಗರದ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳೂ ಹಾಗೂ ಕರ್ನಾಟಕ ಪ್ರತಿಧ್ವನಿ ವೇದಿಕೆ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.
ರಾಜಾತೀಥ್ಯಕ್ಕೆ ಬ್ರೇಕ್ ಹಾಕಿ: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕರಿಂಲಾಲ್ ತೆಲಗಿ, ಶಶಿಕಲಾರಿಗೆ ನೀಡುತ್ತಿರುವ ರಾಜಾತೀಥ್ಯವನ್ನು ನಿಲ್ಲಿಸುವ ಜತೆಗೆ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರತಿಧ್ವನಿ ವೇದಿಕೆ ಕಾರ್ಯಕರ್ತರು ನಗರದ ಅಗ್ರಹಾರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಟಿವಿ, ಫ್ರಿಡ್ಜ್, ಫ್ಯಾನ್, ಮಂಚ, ಮದ್ಯದ ಬಾಟಲಿ, ಸಿಗರೇಟನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ವಿವಿಧ ಆರೋಪಿಗಳಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸುತ್ತಿರುವ ಆರೋಪಿಗಳಿಗೆ ಐಷಾರಾಮಿ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಹೀಗಾಗಿ ಇಲ್ಲಿನ ಆರೋಪಿಗಳು ಯಾವುದೇ ತೊಂದರೆಯಿಲ್ಲದೆ ಅತ್ಯಂತ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಹೀಗಾಗಿ ಕೈದಿಗಳಿಗೆ ಕಾರಾಗೃಹದಲ್ಲಿ ನೀಡುತ್ತಿರುವ ರಾಜಾತೀಥ್ಯ ನೀಡುವುದಕ್ಕೆ ಸರ್ಕಾರ ಕಡಿವಾಣ ಹಾಕಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಆದೇಶ ಹಿಂಪಡೆಯಿರಿ: ಪದವಿ ಕಾಲೇಜುಗಳಲ್ಲಿ 8 ಗಂಟೆಗೆ ತರಗತಿ ಆರಂಭಿಸಬೇಕೆಂಬ ಸರ್ಕಾರದ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕುವೆಂಪುನಗರದ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳೂ ಪ್ರತಿಭಟನೆ ನಡೆಸಿದರು. ಕಾಲೇಜಿನ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಗ್ರಾಮೀಣ ಪ್ರದೇಶದಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸರ್ಕಾರದ ಹೊಸ ಆದೇಶದಿಂದ ಸಾಕಷ್ಟು ಸಮಸ್ಯೆಯಾಗಲಿದೆ.
ಸರ್ಕಾರದ ಆದೇಶದಂತೆ 8 ಗಂಟೆಗೆ ತರಗತಿ ಆರಂಭವಾದರೆ ನಿಗದಿತ ಸಮಯಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಇದರಿಂದ ಹಲವು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದ್ದು, ಹೀಗಾಗಿ ಸರ್ಕಾರ ವಿದ್ಯಾರ್ಥಿಗಳ ಸಮಸ್ಯೆ ಅರಿತು ತನ್ನ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.