ಔರಾದ: ಬಿಇಒ ಚವ್ಹಾಣ ಶೆಟ್ಟಿ ಅವರನ್ನು ಕೂಡಲೆ ಅಮಾನತು ಮಾಡಬೇಕೆಂದು ಆಗ್ರಹಿಸಿ ಬಾಲಾಜಿ ನರೋಟೆ ಗೆಳೆಯರ ಬಳಗದ ಸದಸ್ಯರು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶಿಕ್ಷಕರು ನಿವೃತ್ತರಾಗಿ ಆರು ತಿಂಗಳು ಕಳೆದರೂ ಕೂಡ ಇನ್ನೂ ತಾಲೂಕಿನ ಬಹುತೇಕ ಶಿಕ್ಷಕರಿಗೆ ನಿವೃತ್ತಿ ವೇತನ ಬಿಡುಗಡೆ ಮಾಡಿಲ್ಲ. ನಿವೃತ್ತಿ ವೇತನ ಬಿಡುಗಡೆ ಮಾಡಲು ಶಿಕ್ಷಕರಿಂದ ಲಂಚ ಕೇಳುತ್ತಿದ್ದಾರೆ ಎಂದು ಬಾಲಾಜಿ ನರೋಟೆ ಗೆಳೆಯರ ಬಳಗದ ತಾಲೂಕು ಅಧ್ಯಕ್ಷ ಶಿವಕುಮಾರ ಕಾಂಬಳೆ ಆರೋಪಿಸಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಶಿಕ್ಷಕ ಶ್ರೀಪತರಾವ್ ಅವರಿಗೆ ಸಕಾಲಕ್ಕೆ ಹಣ ಸಿಗದಿರುವ ಹಿನ್ನೆಲೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಶಿಕ್ಷಣಾಧಿಕಾರಿಗಳು ಸರಿಯಾದ ಸಮಯಕ್ಕೆ ಕೆಲಸ ಮಾಡದೆ ಹಣ ಸಂಪಾದನೆ ಮಾಡಲು ವಾಮ ಮಾರ್ಗ ಹಿಡಿದಿರುವ ಹಿನ್ನೆಲೆಯಲ್ಲಿ ನಿವೃತ್ತ ಶಿಕ್ಷಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯಲ್ಲಿ ಪ್ರತಿಯೊಂದು ಕೆಲಸಕ್ಕೂ ಖಾಸಗಿ ಶಾಲೆ ಆಡಳಿತ ಮಂಡಳಿ ಸದಸ್ಯರು ಅಧಿಕಾರಿಗಳಿಗೆ ಹಣ ನೀಡಬೇಕಾಗಿದೆ. ಇಲಾಖೆಯ ಶಿಕ್ಷಕರು ಕೂಡ ಕೆಲಸ ಮಾಡಿಸಿಕೊಳ್ಳಲು ಹಣ ನೀಡಬೇಕಾಗಿದೆ. ಇಲ್ಲವಾದಲ್ಲಿ ಕೆಲಸಗಳು ಆಗುವದಿಲ್ಲ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ನಾನಾಗೌಡ ಹಾಗೂ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ವಾರದಲ್ಲಿ ಸಮಸ್ಯೆ ಬಗೆ ಹರಿಸಲಾಗುತ್ತದೆ. ನಿವೃತ್ತರಾದ ಎಲ್ಲ ಶಿಕ್ಷಕರ ವೇತನವನ್ನು ಎರಡು ದಿನಗಳಲ್ಲಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿ ಚವ್ಹಾಣ ಶೆಟ್ಟಿ ಅವರ ಕುರಿತು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದೆ ಪಡೆಯಲಾಯಿತು.
ಸಂಘಟನೆಯ ಸಂಸ್ಥಾಪಕ ಬಾಲಾಜಿ ನರೋಟೆ, ಭ್ರಷ್ಟಾಚಾರದಲ್ಲಿ ತೊಡಗಿದ ಶಿಕ್ಷಣಾಧಿಕಾರಿಯನ್ನು ಕೂಡಲೆ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಬಾಲಾಜಿ ನರೋಟೆ ತಿಳಿಸಿದರು.